ಮಡಿಕೇರಿ, ಫೆ. 18: ಕೊಡಗು ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಿಗೆ 2001ರ ಜನಗಣತಿಯ ಆಧಾರದ ಮೇರೆಗೆ ಚುನಾವಣೆ ನಡೆದಿದ್ದು, ಈ ಸಂಬಂಧ ನಗರ ಸ್ಥಳೀಯ ಸಂಸ್ಥೆಗಳ ಅವಧಿಯು 2018ಕ್ಕೆ ಮುಕ್ತಾಯವಾಗಲಿದ್ದು, ಅವುಗಳಿಗೆ ಹೊಸದಾಗಿ ಚುನಾವಣೆ ನಡೆಸಬೇಕಾಗಿದೆ. ಈ ಹಿನ್ನೆಲೆ ಅವಧಿ ಮುಗಿಯುವ ಮೊದಲು 2011 ರ ಜನಗಣತಿಯನ್ವಯ ಕ್ಷೇತ್ರ ಪುನರ್ ವಿಂಗಡಣೆ ಮಾಡಿ ವರದಿಯನ್ನು ನೀಡುವಂತೆ ಸರ್ಕಾರ ಸೂಚಿಸಿದೆ.
ಆದ್ದರಿಂದ ಕೊಡಗು ಜಿಲ್ಲೆಯ ನಗರಸಭೆ ಮಡಿಕೇರಿ, ವೀರಾಜಪೇಟೆ, ಕುಶಾಲನಗರ ಮತ್ತು ಸೋಮವಾರಪೇಟೆ ಪಟ್ಟಣ ಪಂಚಾಯಿತಿಗಳನ್ನು 2011ರ ಜನಗಣತಿಯನ್ವಯ ಕ್ಷೇತ್ರ ಪುನರ್ ವಿಂಗಡಣೆ ಮಾಡಿ ಕರಡು ಅಧಿಸೂಚನೆಯನ್ನು ಪ್ರಕಟಿಸಲಾಗಿರುತ್ತದೆ. ಕರಡು ಅಧಿಸೂಚನೆಯಿಂದ ಬಾಧಿತರಾಗಬಹುದಾದ ಎಲ್ಲಾ ವ್ಯಕ್ತಿಗಳು ಲಿಖಿತ ಆಕ್ಷೇಪಣೆ ಹಾಗೂ ಸಲಹೆಗಳನ್ನು ಸಕಾರಣಗಳೊಂದಿಗೆ ಮಾರ್ಚ್ 6 ರೊಳಗೆ ಜಿಲ್ಲಾಧಿಕಾರಿಗಳ ಕಚೇರಿಗೆ, ಉಪ ವಿಭಾಗಾಧಿಕಾರಿಗಳ ಕಚೇರಿಗೆ, ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ ಕಚೇರಿಗೆ, ಸಂಬಂಧಪಟ್ಟ ತಾಲೂಕು ಕಚೇರಿಗೆ, ಸಂಬಂಧಪಟ್ಟ ನಗರಸಭೆ ಕಚೇರಿಗೆ ಮತ್ತು ಸಂಬಂಧಪಟ್ಟ ಪಟ್ಟಣ ಪಂಚಾಯಿತಿಗಳ ಕಚೇರಿಗೆ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ತಿಳಿಸಿದ್ದಾರೆ.