ಮಡಿಕೇರಿ, ಫೆ. 18: ಕ್ಷಯರೋಗವು ಪುರಾತನ ಹಾಗೂ ಸರ್ವವ್ಯಾಪಿ ಕಾಯಿಲೆಯಾಗಿದ್ದು, ಕ್ಷಯರೋಗ ನಿರ್ಮಾಲನೆಗೆ ಎಲ್ಲರೂ ಪಣ ತೊಡಬೇಕಿದೆ ಎಂದು ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಹೇಳಿದರು. ನಗರದ ಹೊರವಲಯದಲ್ಲಿರುವ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಭಾಂಗಣದಲ್ಲಿ ಶನಿವಾರ ಕ್ಷಯರೋಗದ ಬಗ್ಗೆ ನಡೆದ ರಾಜ್ಯ ಮಟ್ಟದ ಸಮ್ಮೇಳನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಭಾರತ ಸೇರಿದಂತೆ ಪಾಕಿಸ್ತಾನ, ನೈಜೀರಿಯಾ, ಬಾಂಗ್ಲಾ ರಾಷ್ಟ್ರಗಳಲ್ಲಿ ಕ್ಷಯರೋಗ ಹೆಚ್ಚಾಗಿ ಕಂಡುಬರುತ್ತಿದೆ. ಇದರ ನಿಯಂತ್ರಣಕ್ಕೆ ವೈದ್ಯಾಧಿಕಾರಿಗಳು ಮುಂದಾಗಬೇಕು. ದೇಶದ ಗ್ರಾಮೀಣ ಪ್ರದೇಶದಲ್ಲಿ ಶೇ.60ಕ್ಕೂ ಹೆಚ್ಚು ಜನರು ವಾಸ ಮಾಡುತ್ತಿದ್ದು, ಗ್ರಾಮೀಣ ಜನರಿಗೆ ಆರೋಗ್ಯ ಸೇವಾ ಸೌಲಭ್ಯಗಳು ತಲುಪಬೇಕು. ಸರ್ಕಾರ ಗ್ರಾಮೀಣ ಆರೋಗ್ಯ ಸೇವೆಗಾಗಿ ಸಾಕಷ್ಟು ಅನುದಾನವನ್ನು ವಿನಿಯೋಗ ಮಾಡುತ್ತಿದೆ ಎಂದು ಜಿಲ್ಲಾಧಿಕಾರಿ ನುಡಿದರು. ಗ್ರಾಮೀಣ ಪ್ರದೇಶಕ್ಕೆ ಉತ್ತಮ ಆರೋಗ್ಯ ಸೇವೆಗಳನ್ನು ಕಲ್ಪಿಸಿದಾಗ ಆರೋಗ್ಯಯುತ ಹಾಗೂ ಬಲಿಷ್ಠ ರಾಷ್ಟ್ರವನ್ನು ಕಾಣಲು ಸಾಧ್ಯ ಎಂದು ಜಿಲ್ಲಾಧಿಕಾರಿ ಅಭಿಪ್ರಾಯ ವ್ಯಕ್ತಪಡಿಸಿದರು.
ಕ್ಷಯರೋಗ ನಿಯಂತ್ರಣ ವಿಭಾಗದ ಜಂಟಿ ನಿರ್ದೇಶಕ ಡಾ. ಕೆ.ಬಿ. ಮುತ್ತಪ್ಪ ಅವರು ಮಾತನಾಡಿ, ಕ್ಷಯರೋಗ ನಿಯಂತ್ರಣಕ್ಕೆ ವೈದ್ಯಾಧಿಕಾರಿಗಳು ಪಣ ತೊಡಬೇಕಿದೆ. ಕ್ಷಯ ಬರುವದರಿಂದ ಎಚ್.ಐ.ವಿ. ಸೇರಿದಂತೆ ನಾನಾ ರೋಗಗಳಿಗೆ ತುತ್ತಾಗಬೇಕಾಗುತ್ತದೆ. ಆದ್ದರಿಂದ ಸರ್ಕಾರ 2025 ರೊಳಗೆ ಕ್ಷಯ ಮುಕ್ತ ಮಾಡಲು ಪ್ರಯತ್ನಿಸಿದೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಎಲ್ಲರೂ ಕೈಜೋಡಿಸಬೇಕಿದೆ.
ಕ್ಷಯರೋಗಿಯು ಕೆಮ್ಮಿದಾಗ ಅಥವಾ ಗಾಳಿಯ ಮೂಲಕ ಸೂಕ್ಷ್ಮ ಕ್ರಿಮಿಗಳು ತುಂತುರು ಹನಿಗಳ ರೂಪದಲ್ಲಿ ವಾತಾವರಣದಲ್ಲಿ ಸೇರಿ ರೋಗ ಹರಡಲು ಕಾರಣವಾಗುತ್ತದೆ. ಇದರಿಂದ ಸಾವು ನೋವುಗಳ ಪ್ರಮಾಣ ಹೆಚ್ಚಾಗುತ್ತದೆ. ಆದ್ದರಿಂದ ಕ್ಷಯರೋಗ ನಿಯಂತ್ರಣಕ್ಕೆ ಎಲ್ಲರೂ ಪಣ ತೊಡಬೇಕಿದೆ ಎಂದು ಸಲಹೆ ಮಾಡಿದರು.
ಕೊಡಗು ವೈದ್ಯಕೀಯ ಮಹಾವಿದ್ಯಾಲಯದ ನಿರ್ದೇಶಕರಾದ ಡಾ. ಮಹೇಂದ್ರ ಅವರು ಮಾತನಾಡಿ ಮನುಷ್ಯನಲ್ಲಿ ರೋಗ ನಿರೋಧಕ ಶಕ್ತಿ ಕುಗ್ಗಿದಾಗ ಕ್ಷಯರೋಗ ಬರುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಉತ್ತಮ ಆರೋಗ್ಯವನ್ನು ಹೊಂದಬೇಕು. ಈ ಬಗ್ಗೆ ವೈದ್ಯರು ಸಲಹೆ ಮಾರ್ಗದರ್ಶನ ನೀಡುವದು ಅಗತ್ಯ ಎಂದು ಅವರು ವಿವರಿಸಿದರು.
ಆರೋಗ್ಯ ಸಮನ್ವಯ ಸಂಸ್ಥೆಯ ಕ್ಷಯರೋಗ ನಿಯಂತ್ರಣ ಸಲಹೆಗಾರ ಡಾ. ಕೆ.ಜಿ. ದೀಪಕ್ ಮಾತನಾಡಿ ರಾಜ್ಯದಲ್ಲಿ 2016ರಲ್ಲಿ 60,051 ಮಂದಿ ಕ್ಷಯ ಪೀಡಿತರು ಪತ್ತೆಯಾಗಿದ್ದಾರೆ. ಇವರಲ್ಲಿ 4,169 ಮಂದಿ ಮೃತ ಪಟ್ಟಿದ್ದಾರೆ. 4,030 ಮಂದಿ ಚಿಕಿತ್ಸೆಯನ್ನು ನಿರಾಕರಿಸಿದ್ದಾರೆ. 1,321 ಮಂದಿ ಎಂ.ಡಿ.ಆರ್. ಚಿಕಿತ್ಸೆ ಪಡೆಯುತ್ತಿದ್ದು, ಒಟ್ಟಾರೆ ರಾಜ್ಯದಲ್ಲಿ ಶೇ. 82 ರಷ್ಟು ಕ್ಷಯರೋಗಿಗಳು ಗುಣಮುಖರಾಗುತ್ತಿದ್ದಾರೆ ಎಂದು ತಿಳಿಸಿದರು. ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಶಿವಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ 2016ರಲ್ಲಿ 406 ಕ್ಷಯರೋಗ ಪ್ರಕರಣಗಳು ಪತ್ತೆಯಾಗಿದ್ದು, 22 ಮಂದಿ ನಿಧನ ಹೊಂದಿದ್ದಾರೆ. 5 ಮಂದಿ ಎಂ.ಡಿ.ಆರ್. ಚಿಕಿತ್ಸೆ ಪಡೆದಿದ್ದಾರೆ. ಶೇ. 90ರಷ್ಟು ಮಂದಿ ಗುಣಮುಖ ರಾಗಿದ್ದಾರೆ ಎಂದು ಮಾಹಿತಿ ನೀಡಿದರು. ಕೊಡಗು ವೈದ್ಯಕೀಯ ಮಹಾವಿದ್ಯಾಲಯದ ಮೇಲ್ವಿಚಾರಕ ಡಾ. ನಾಗೇಶ್, ಜಿಲ್ಲಾ ಆಸ್ಪತ್ರೆಯ ಸರ್ಜನ್ ಡಾ.ಅಬ್ದುಲ್ ಅಜೀಜ್, ವೈದ್ಯಕೀಯ ಕಾಲೇಜಿನ ಆಡಳಿತಾಧಿಕಾರಿ ಮೇರಿ ನಾಣಯ್ಯ ಇತರರು ಇದ್ದರು.
ವೈದ್ಯಕೀಯ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ದೀಪು, ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ. ಅರುಣ್, ಕ್ಷಯ ನಿಯಂತ್ರಣ ವಿಭಾಗದ ಉಪ ನಿರ್ದೇಶಕ ಡಾ. ಎಸ್.ಅನಿಲ್, ಹಿರಿಯ ತಜ್ಞೆ ಡಾ. ನಿರ್ಮಲ, ಜೆ.ಎಸ್.ಎಸ್.ಮಹಾವಿದ್ಯಾಲಯದ ಶ್ವಾಸಕೋಶ ರೋಗಗಳ ವಿಭಾಗದ ಮುಖ್ಯಸ್ಥ ಡಾ. ಜಯರಾಜ್, ವೈದೇಹಿ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ರವೀಂದ್ರ ರೆಡ್ಡಿ ಉಪನ್ಯಾಸ ನೀಡಿದರು.
ಸಮಾವೇಶದಲ್ಲಿ ರಾಜ್ಯದ ಎಲ್ಲಾ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಗಳು, ಜಿಲ್ಲೆಯ ಆರೋಗ್ಯ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯಾಧಿಕಾರಿಗಳು, ಸರ್ಕಾರಿ ಹಾಗೂ ಖಾಸಗಿ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕರುಗಳು ಭಾಗವಹಿಸಿದ್ದರು. ಅಲ್ಲದೆ ಸಮಾವೇಶದಲ್ಲಿ ಕ್ಷಯರೋಗ ನಿಯಂತ್ರಣ ಮತ್ತು ಸಂಶೋಧನೆಗಳ ಬಗ್ಗೆ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳಿಗೆ ರಸ ಪ್ರಶ್ನೆ ಕಾರ್ಯಕ್ರಮ ನಡೆಯಿತು.
ಕೊಡಗು ವೈದ್ಯಕೀಯ ಮಹಾವಿದ್ಯಾಲಯದ ಕ್ಷಯರೋಗ ವಿಭಾಗದ ಪ್ರಾಧ್ಯಾಪಕರಾದ ಡಾ.ರಾಮಚಂದ್ರ ಕಾಮತ್ ಸ್ವಾಗತಿಸಿ, ಡಾ. ಪ್ರಿಯದರ್ಶಿನಿ ನಿರೂಪಿಸಿ, ಶರವಣ ವಂದಿಸಿದರು.