ನಾಪೋಕ್ಲು, ಫೆ. 18: ದೇಶದ ಅಭಿವೃದ್ಧಿಗೆ ಜನಸಂಖ್ಯಾ ಸ್ಫೋಟ ಮಾರಕವಾಗಿದ್ದು, ಇದನ್ನು ತಡೆಗಟ್ಟಲು ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಜಿ.ಪಂ. ಸದಸ್ಯ ಪಾಡಿಯಮ್ಮಂಡ ಮುರುಳಿ ಕರುಂಬಯ್ಯ ಹೇಳಿದರು.ಸ್ಥಳೀಯ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಇಲಾಖೆ ಮತ್ತು ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್, ಇಂಟರಾಕ್ಟ್ ಕ್ಲಬ್, ಮುಳಿಯ ಪ್ರತಿಷ್ಠಾನ, ಶ್ರೀ ರಾಮಟ್ರಸ್ಟ್ ಮತ್ತು ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ಮಧುಮೇಹ, ಗರ್ಭಕೋಶ ಕೊರಳಿನ ತಪಾಸಣೆ ಮತ್ತು ಸಂತಾನಹರಣ ಶಸ್ತ್ರಚಿಕಿತ್ಸೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ರೋಟರಿ ಮಿಸ್ಟಿ ಹಿಲ್ಸ್‍ನ ಕಾರ್ಯದರ್ಶಿ ಮತ್ತು ಜಿಲ್ಲಾ ಅಸ್ಪತ್ರೆಯ ಸರ್ಜನ್ ಡಾ. ನವೀನ್ ಮಾತನಾಡಿ ನಮ್ಮ ಸಂಸ್ಥೆಯಿಂದ 3000ಕ್ಕೂ ಅಧಿಕ ಜನರ ರಕ್ತ ಪರೀಕ್ಷಿಸಿ ಮಧುಮೇಹ ಪತ್ತೆ ಹಚ್ಚಲಾಗಿದೆ ಕೊಡಗಿನಲ್ಲಿ 70 ಸಾವಿರ ಮಧುಮೇಹಿಗಳು ಇರುವದು ಆತಂಕಕಾರಿ ಆಗಿದ್ದು, ಪ್ರತಿ ತಿಂಗಳು ಈ ಕಾರ್ಯವನ್ನು ಹಮ್ಮಿಕೊಂಡು ಪ್ರತಿಯೊಬ್ಬರೂ ಆರೋಗ್ಯ ತಪಾಸಣೆ ಮಾಡುವದರ ಮೂಲಕ ಆರೋಗ್ಯವಂತರಾಗಬೇಕು ಎಂದರು.

ರೋಟರಿ ಮಿಸ್ಟಿ ಹಿಲ್ಸ್‍ನ ಅಧ್ಯಕ್ಷ ಮುಳಿಯ ಕೇಶವಪ್ರಸಾದ್ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಅಸ್ಪತ್ರೆಯ ಸ್ತ್ರೀ ರೋಗತಜ್ಞೆ ಡಾ. ರಾಜೇಶ್ವರಿ ಬಿ.ಪಿ., ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರದ ವೈದ್ಯೆ ಉಮಾಭಾರತಿ, ರೋಟರಿ ಮಿಸ್ಟಿ ಹಿಲ್ಸ್‍ನ ಖಜಾಂಚಿ ಸತೀಶ್ ಸೋಮಣ್ಣ, ಕುಲ್ಲೇಟಿರ ಅಜಿತ್ ನಾಣಯ್ಯ, ಕೃಷ್ಣವೇಣಿ ಮುಳಿಯ, ಶ್ರೀ ರಾಮಟ್ರಸ್ಟ್‍ನ ಶಿಕ್ಷಕಿ ಟಿ.ಅರ್. ಸುಬ್ಬಮ್ಮ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಕೆ.ಪಿ. ಹೇಮಾವತಿ ಮತ್ತು ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಈ ಸಂದರ್ಭ 85 ಮಂದಿ ಮಧುಮೇಹ ರಕ್ತಪರೀಕ್ಷೆ, 10 ಗರ್ಭಕೋಶ ಕೊರಳಿನ ತಪಾಸಣೆ, ನಾಲ್ವರು ಮಹಿಳೆಯರು ಹಾಗೂ ಓರ್ವ ಪುರುಷ ಸಂತಾನಹರಣ ಚಿಕಿತ್ಸೆ ನಡೆಸಲಾಯಿತು. ಮಾತ್ರವಲ್ಲದೇ ಸ್ಚಚ್ಛತಾ ಆಂದೋಲನಾ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಈ ಸಂದರ್ಭ ಬ್ಯಾಗ್‍ಗಳನ್ನು ವಿತರಿಸಿ ಜಾಗೃತಿ ಮೂಡಿಸಲಾಯಿತು.