ಮಡಿಕೇರಿ, ಫೆ. 18: ಪಂದ್ಯಂಡ ಬೆಳ್ಯಪ್ಪ ಮಾದರಿ ವ್ಯಕ್ತಿಯಾಗಿದ್ದು, ಅವರನ್ನು ಕೊಡಗಿನವರು ಎಂದಿಗೂ ಸ್ಮರಿಸಿಕೊಳ್ಳಬೇಕು ಎಂದು ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಕೊಂಗಂಡ ಎಸ್. ದೇವಯ್ಯ ಹೇಳಿದರು. ನಗರದ ಬಾಲಭವನದಲ್ಲಿ ನಡೆದ ಕೊಡವ ಮಕ್ಕಡ ಕೂಟದ 4ನೇ ವರ್ಷಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪಂದ್ಯಂಡ ಬೆಳ್ಯಪ್ಪ ಕೊಡಗಿನಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು. ಅವರ ನೆನಪುಗಳು ಇಂದಿಗೂ ಹಸಿರಾಗಿದ್ದು, ಅವರನ್ನು ಕೊಡಗಿನವರು ಸದಾ ನೆನಪಿಸಿ ಕೊಳ್ಳಬೇಕು ಎಂದು ಹೇಳಿದರು.

ಕೊಡವ ಮಕ್ಕಡ ಕೂಟ ನಗರದ ಟೌನ್ ಹಾಲ್ ಹಿಂಭಾಗವಿರುವ ರಸ್ತೆಗೆ ಪಂದ್ಯಂಡ ಬೆಳ್ಯಪ್ಪ ರಸ್ತೆ ಎಂದು ಹೆಸರಿಟ್ಟು ನಾಮಫಲಕ ಅಳವಡಿಸಿ ರುವದು ಉತ್ತಮ ಕಾರ್ಯ. ಕೊಡವ ಸಮಾಜ ಮಡಿಕೇರಿ ವತಿಯಿಂದ ಕೊಡವ ಮಕ್ಕಡ ಕೂಟದ ಎಲ್ಲ ಕಾರ್ಯ ಗಳಿಗೆ ಸಹಕಾರ ನೀಡಲಾಗುವದು ಎಂದು ಭರವಸೆ ನೀಡಿದರು.

ಕೊಡವರು ಯಾವ ಜನಾಂಗದವರನ್ನು ದೂರುವದಿಲ್ಲ. ಅದರ ಅವಶ್ಯಕತೆಯೂ ನಮಗೆ ಇಲ್ಲ. ಆದರೆ ಇದನ್ನೇ ಕೆಲವರು ನಮ್ಮ ದೌರ್ಬಲ್ಯ ಎಂದು ಪರಿಗಣಿಸುವದು ಉತ್ತಮವಲ್ಲ ಎಂದರು .

‘ಚಾಯಿ’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿದ್ದಾಟಂಡ ಎಸ್. ತಮ್ಮಯ್ಯ, ಸಂಸ್ಕøತಿ, ಆಚಾರ ವಿಚಾರಗಳನ್ನು ನಮ್ಮ ಉಡುಪು ಧರಿಸುವದರಿಂದ ಮಾತ್ರ ಉಳಿಸಿ ಬೆಳೆಸಲು ಸಾಧ್ಯವಿಲ್ಲ. ಕೊಡವ ಸಂಸ್ಕøತಿ ಬಗ್ಗೆ ಮನಸ್ಸಿನಲ್ಲಿ ಅಭಿಮಾನ ಇಟ್ಟುಕೊಂಡು ಕೆಲಸ ಮಾಡಿದಲ್ಲಿ ಉಳಿಸಿ ಬೆಳೆಸಲು ಸಾಧ್ಯ ಎಂದರು.

(ಮೊದಲ ಪುಟದಿಂದ) ಪಂದ್ಯಂಡ ಬೆಳ್ಯಪ್ಪ ಅವರ ಕುರಿತಾಗಿ ವಿಚಾರ ಮಂಡಿಸಿದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಬಾಚರಣಿಯಂಡ ಅಪ್ಪಣ್ಣ, 1914 ರಿಂದ 1947 ರವರೆಗೆ ಭಾರತದಲ್ಲಿ ಗಾಂಧಿಯುಗ ಇದ್ದರೆ, 1920 ರಿಂದ 1952ರವರೆಗೆ ಕೊಡಗಿನಲ್ಲಿ ಕೊಡಗಿನ ಗಾಂಧಿ ಬೆಳ್ಯಪ್ಪ ಯುಗವಿತ್ತು ಎಂದು ಹೇಳಿದರು.

ಕೊಡಗಿನಲ್ಲಿ ಹಲವಾರು ಸಾಹಿತಿಗಳಿದ್ದರೂ ಕೊಡಗಿಗೆ ದುಡಿದ ಪಂದ್ಯಂಡ ಬೆಳ್ಯಪ್ಪ ಅವರ ಕುರಿತಾಗಿ ಅವರ ಜೀವನ ಚರಿತ್ರೆ ಪುಸ್ತಕ ಇಲ್ಲದಿರುವದು ವಿಷಾದನೀಯ ಎಂದು ಹೇಳಿದರು.

1921ರಲ್ಲಿ ಕೊಡಗು ವಾರ ಪತ್ರಿಕೆ ಆರಂಭಿಸಿ, ಆ ಮೂಲಕ ಕೊಡಗಿನಲ್ಲಿ ಜಾಗೃತಿ ಮೂಡಿಸುವಲ್ಲಿ ಶ್ರಮಿಸಿದರು. 42 ವರ್ಷಗಳ ಕಾಲ ಪತ್ರಿಕೆಯ ಸಂಪಾದಕರಾಗಿ ಕೆಲಸ ಮಾಡಿದ ಅವರು, ಜನರ ಹೃದಯದಲ್ಲಿ ಸ್ಥಾನ ಪಡೆದರು ಎಂದು ಹೇಳಿದರು.

ಅಲ್ಲಾರಂಡ ರಂಗ ಚಾವಡಿಯ ಅಧ್ಯಕ್ಷ ಅಲ್ಲಾರಂಡ ವಿಠಲ್ ನಂಜಪ್ಪ ಮಾತನಾಡಿ, ಕೊಡಗಿಗೆ ಗಾಂಧಿಯವರ ಭೇಟಿಗೆ ಪ್ರಮುಖ ಕಾರಣಕರ್ತ ರಾದವರು ಪಂದ್ಯಂಡ ಬೆಳ್ಯಪ್ಪ. ಗಾಂಧಿಯವರ ಭಾಷಣವನ್ನು ನಮ್ಮ ಜನತೆಗೆ ಅನುವಾದಿಸಿಕೊಟ್ಟವರು ಕೂಡ ಬೆಳ್ಯಪ್ಪನವರೆ ಎಂದರು.

ಪಂದ್ಯಂಡ ಬೆಳ್ಯಪ್ಪ ಗಾಂಧಿಯಂತೆ ಅಹಿಂಸಾವಾದಿ ಯಾಗಿದ್ದು, ಸರಳ ಜೀವಿ, ಶಿಸ್ತಿನ ನಾಯಕರಾಗಿದ್ದ ಬೆಳ್ಯಪ್ಪ ಕೊಡಗಿನ ಆಸ್ತಿ ಎಂದರು. ಕೊಡಗಿನವರು ಎಂದಿಗೂ ಸ್ಮರಿಸಿಕೊಳ್ಳಬೇಕು ಎಂದರು.

ಪಂದ್ಯಂಡ ಬೆಳ್ಯಪ್ಪ ಅವರ ಮಗ ವಿಜು ಬೆಳ್ಯಪ್ಪ ಮಾತನಾಡಿ, ತಮ್ಮ ತಂದೆಯವರು ನಮಗೆ ಸತ್ಯ, ಧರ್ಮದಲ್ಲಿ ನಡೆಯಬೇಕು ಎಂಬದನ್ನು ತಿಳಿಸಿಕೊಟ್ಟಿದ್ದಾರೆ. ನಮ್ಮ ತಂದೆಯವರ ಹೆಸರನ್ನು ರಸ್ತೆಗೆ ಇಟ್ಟು, ಅವರ ನೆನಪಲ್ಲಿ ಕಾರ್ಯಕ್ರಮ ಮಾಡುತ್ತಿರುವದು ಸಂತಸ ತಂದಿದೆ ಎಂದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕನ್ನಂಡ ದೊಡ್ಡಯ್ಯ ಟ್ರಸ್ಟ್‍ನ ಉಪಾಧ್ಯಕ್ಷೆ ನಿರ್ಮಲಾ ಸೋಮಯ್ಯ ಮಾತನಾಡಿ, ಕೊಡವರು ಆಸ್ತಿಯನ್ನು ಮಾರಾಟ ಮಾಡಬಾರದು. ಆಸ್ತಿಯನ್ನು ಉಳಿಸಿ ನಮ್ಮ ಸಂಸ್ಕøತಿಯನ್ನು ಉಳಿಸಿಕೊಳ್ಳಬೇಕು ಎಂದರು.

ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಮಾತನಾಡಿ, ಕೊಡವ ಭಾಷೆ, ಆಚಾರ ವಿಚಾರವನ್ನು ಉಳಿಸುವ ಉದ್ದೇಶದಿಂದ ಕೂಟವನ್ನು ನಡೆಸಿಕೊಂಡು ಬರಲಾಗುತ್ತಿದೆ. ಇಂದು ನಮ್ಮ ಮಕ್ಕಳು ಹಾದಿ ತಪ್ಪುತ್ತಿದ್ದು, ಅವರನ್ನು ಸರಿದಾರಿಗೆ ಕರೆತರುವ ಕಾರ್ಯವಾಗಬೇಕಿದೆ ಎಂದು ಅಭಿಪ್ರಾಯ ಪಟ್ಟರು.

ವೇದಿಕೆಯಲ್ಲಿ ಚೆಟ್ಟಳ್ಳಿಯ ಸಮಾಜ ಸೇವಕ ಕೊಂಗೇಟಿರ ಅಚ್ಚಪ್ಪ, ‘ಚಾಯಿ’ ಪುಸ್ತಕದ ಲೇಖಕಿ ಉಳುವಂಗಡ ಕಾವೇರಿ ಉದಯ ಇದ್ದರು.

ಇದೇ ಸಂದರ್ಭದಲ್ಲಿ ಮಕ್ಕಡ ಕೂಟದ ವತಿಯಿಂದ ಪಂದ್ಯಂಡ ಬೆಳ್ಯಪ್ಪ ಅವರ ಭಾವಚಿತ್ರವನ್ನು ಕೊಡವ ಸಮಾಜ ಹಾಗೂ ಎಫ್.ಎಂ.ಸಿ. ಕಾಲೇಜಿಗೆ ವಿತರಿಸಲಾಯಿತು.

ಪುತ್ತರಿರ ಕಾಳಯ್ಯ ಕೂಟದ ವರದಿಯನ್ನು ಓದಿದರು. ಬೊಳ್ಳಜಿರ ಯಮುನಾ ಅಯ್ಯಪ್ಪ ಪ್ರಾರ್ಥಿಸಿ, ಬೊಳ್ಳಜಿರ ಅಯ್ಯಪ್ಪ ಸ್ವಾಗತಿಸಿದರು. ದಿವ್ಯ ಬಾಳೆಯಡ ಕಾರ್ಯಕ್ರಮ ನಿರೂಪಿಸಿದರು.