ಮಡಿಕೇರಿ, ಫೆ. 18: ಮಡಿಕೇರಿ ಖಾಸಗಿ ಬಸ್ ನಿಲ್ದಾಣ, ಮೇಲ್ಸೇತುವೆ, ಹೈಟೆಕ್ ಮಾರುಕಟ್ಟೆ ಸೇರಿದಂತೆ ಇನ್ನಿತರ ಅಭಿವೃದ್ಧಿ ಪರ ಕಾರ್ಯಗಳಿಗೆ ಅನುದಾನ ಮೀಸಲಿಡುವದರೊಂದಿಗೆ ಮಡಿಕೇರಿ ನಗರಸಭೆಯಿಂದ ರೂ. 3.09 ಕೋಟಿ ಬಜೆಟ್ ಮಂಡನೆ ಮಾಡಲಾಗಿದೆ. ಎರಡನೇ ಬಾರಿಗೆ ನಗರಸಭಾ ಅಧ್ಯಕ್ಷರಾಗಿರುವ ಕೂಡಕಂಡಿ ಕಾವೇರಮ್ಮ ಸೋಮಣ್ಣ ಅವರು, ಈ ಹಿಂದೆ ಕೂಡ ಉತ್ತಮ ರೀತಿಯ ಬಜೆಟ್ ಮಂಡನೆ ಮಾಡಿದ್ದು, ಈ ಬಾರಿ ಕೂಡ ರಸ್ತೆ, ಚರಂಡಿ, ಉದ್ಯಾನವನ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಮೀಸಲಿಟ್ಟು, ರೂ. 3.09 ಕೋಟಿ ಮೊತ್ತದ ಉಳಿತಾಯ ಬಜೆಟ್ ಮಂಡನೆ ಮಾಡಿದ್ದಾರೆ.

ಕುಡಿಯುವ ನೀರಿಗಾಗಿ 16.50 ಕೋಟಿ, ರಸ್ತೆಗಳ ಅಭಿವೃದ್ಧಿಗೆ 6.70 ಕೋಟಿ, ಸೇರಿದಂತೆ ಒಟ್ಟು 77.20 ಕೋಟಿ ರೂ.ಗಳಷ್ಟು ಖರ್ಚನ್ನು ನಿರೀಕ್ಷಿಸಲಾಗಿದೆ ಎಂದರು.

ಆರಂಭಿಕ ಶಿಲ್ಕ ರೂ.11.81 ಕೋಟಿ, ನಿರೀಕ್ಷಿತ ಆದಾಯ ರೂ.68.52 ಕೋಟಿ, ಒಟ್ಟು ಆದಾಯ ರೂ.80.30 ಕೋಟಿ, ಖರ್ಚು ರೂ.77.20 ಕೋಟಿ, ಉಳಿತಾಯ 3.09 ಕೋಟಿ ಎಂದು ಅಂದಾಜಿಸಲಾಗಿದೆ.

ನಗರಸಭೆ ಸ್ವಂತ ಆದಾಯ

ಆಸ್ತಿ ತೆರಿಗೆ, ತೆರಿಗೆ ದಂಡ ರೂ. 2.25 ಕೋಟಿ, ನೀರಿನ ತೆರಿಗೆ 1 ಕೋಟಿ ರೂ., ಮಳಿಗೆ ತೆರಿಗೆ ರೂ. 1 ಕೋಟಿ, ಉದ್ದಿಮೆ ಪರವಾನಗಿ ಮತ್ತು ಇತರೆ ಪರವಾನಗಿ ಶುಲ್ಕಗಳು ರೂ. 1.21 ಕೋಟಿ, ಕಟ್ಟಡ ಪರವಾನಗಿ 55 ಲಕ್ಷ ಹಾಗೂ ಇತರೇ ಮೂಲಗಳಿಂದ 1.65 ಕೋಟಿ.

ಜಪ್ತಿ ಆಗಿರುವ ಪಿಎಫ್ ಫಂಡ್‍ನಿಂದ ರೂ.91,88,216 ಹಾಗೂ ತನಿಖೆಯಂತೆ ಬಿಲ್ ಕಲೆಕ್ಟರ್‍ಗಳಿಂದ ಬರ ಬೇಕಾದ ಮೊತ್ತ ರೂ.61.73 ಲಕ್ಷ.

ರಾಜ್ಯ ಮತ್ತು ಕೇಂದ್ರದ ಅನುದಾನ

ನಗರೋತ್ಥಾನ 3ನೇ ಹಂತ ರೂ. 30 ಕೋಟಿ, 14 ನೇ ಹಣಕಾಸು 1.50 ಕೋಟಿ, ಸ್ವಚ್ಛ ಭಾರತ್ ಮಿಷನ್ 10 ಲಕ್ಷ, ಎಸ್‍ಎಫ್‍ಸಿ 2.50 ಕೋಟಿ, ಪ್ರೋತ್ಸಾಹ ಅನುದಾನ 15 ಲಕ್ಷ, ಕುಡಿಯುವ ನೀರು 1 ಕೋಟಿ, ಘನ ತ್ಯಾಜ್ಯ ನಿರ್ವಹಣಾ ಅನುದಾನ 2 ಕೋಟಿ, ವಿದ್ಯುತ್ ಅನುದಾನ 3.50 ಕೋಟಿ, ಎಸ್‍ಎಫ್‍ಸಿ ವಿಶೇಷ ಅನುದಾನ 50 ಲಕ್ಷ, ನೂತನ ಖಾಸಗಿ ಬಸ್ ನಿಲ್ದಾಣ 4.99 ಕೋಟಿ, ಕೆರೆಗಳ ಅಭಿವೃದ್ಧಿ 4 ಕೋಟಿ, ಮೇಲು ಸೇತುವೆ ನಿರ್ಮಾಣ 1 ಕೋಟಿ, ಸ್ಮಶಾನಗಳ ಅಭಿವೃದ್ಧಿಗೆ 25 ಲಕ್ಷ, ಉದ್ಯಾನವನ ಅಭಿವೃದ್ಧಿಗೆ 50 ಲಕ್ಷ, ಸಿಎಂಎಸ್ ಎಂಟಿಡಿಸಿ ಹಂತ-1 ರ ಅನುದಾನ 3 ಕೋಟಿ, ಎನ್‍ಯುಎಲ್‍ಎಂ ಅನುದಾನ 15 ಲಕ್ಷ ರೂ.ಗಳನ್ನು ನಿರೀಕ್ಷಿಸಲಾಗಿದೆ.

ಖರ್ಚು-ವೆಚ್ಚಗಳು

ಕಾವೇರಿ ಕಲಾಕ್ಷೇತ್ರದ ನೂತನ ಕಟ್ಟಡ ನಿರ್ಮಾಣಕ್ಕೆ ರೂ.2 ಕೋಟಿ, ರಸ್ತೆಗಳಿಗೆ 6.70 ಕೋಟಿ, ತಡೆಗೋಡೆಗಳಿಗೆ 4.50 ಕೋಟಿ, ಚರಂಡಿಗಳಿಗೆ 2 ಕೋಟಿ, ಮೇಲುಸೇತುವೆ 1 ಕೋಟಿ, ನೂತನ ಖಾಸಗಿ ಬಸ್ ನಿಲ್ದಾಣ ನಿರ್ಮಾಣ 4.99 ಕೋಟಿ, ಕೆರೆಗಳ ಅಭಿವೃದ್ಧಿಗೆ 4 ಕೋಟಿ, ಮಾರುಕಟ್ಟೆ ಕಟ್ಟಡ ನಿರ್ಮಾಣ ಒಂದನೇ ಹಂತ ಮತ್ತು ಎರಡನೇ ಹಂತ 3 ಕೋಟಿ, ಸ್ಮಶಾನಗಳ ಅಭಿವೃದ್ಧಿಗಾಗಿ 25 ಲಕ್ಷ, ಮಳೆ ನೀರು ಚರಂಡಿಗಳ ನಿರ್ಮಾಣ 2 ಕೋಟಿ, ಉದ್ಯಾನವನಗಳ ಅಭಿವೃದ್ಧಿಗಾಗಿ 70 ಲಕ್ಷ, ನೀರು ಸರಬರಾಜು ನಿರ್ವಹಣೆ ಮತ್ತು ಅಭಿವೃದ್ಧಿಗಾಗಿ 16.50 ಕೋಟಿ, ಘನತ್ಯಾಜ್ಯ ವಸ್ತುಗಳ ನಿರ್ವಹಣೆ 1.85 ಕೋಟಿ, ಸ್ವಚ್ಛತಾ ಕಾರ್ಯ ಮತ್ತು ದುರಸ್ತಿ 50 ಲಕ್ಷ, ಬೀದಿ ದೀಪ ನಿರ್ವಹಣೆ ಹಾಗೂ ದುರಸ್ತಿ 5.33 ಕೋಟಿ, ಕುಡಿಯುವ ನೀರು ನಿರ್ವಹಣೆ ಮತ್ತು ದುರಸ್ತಿ 50 ಲಕ್ಷ, ರಸ್ತೆ ಮತ್ತು ಚರಂಡಿಗಳ ದುರಸ್ತಿ 50 ಲಕ್ಷ, ಸಾರ್ವಜನಿಕ ಶೌಚಾಲಯ, ವಾಹನಗಳ ಖರೀದಿ ಹಾಗೂ ಮಳೆನೀರು ಕೊಯ್ಲು, ಪರಿಶಿಷ್ಟ ಜಾತಿ, ಪಂಗಡ 77.41 ಲಕ್ಷ, ಬಡಜನ ಕಲ್ಯಾಣ ನಿಧಿ 23.29 ಲಕ್ಷ ಹಾಗೂ ಅಂಗವಿಕಲರ ಅಭಿವೃದ್ಧಿಗಾಗಿ 9.64 ಲಕ್ಷ ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ.

ಆಡಿಟಿಂಗ್ ವೆಚ್ಚ ರೂ.1.25 ಕೋಟಿ !

ಬಜೆಟ್‍ನಲ್ಲಿ ಆಡಿಟಿಂಗ್ ವೆಚ್ಚ 1.25 ಕೋಟಿ ರೂ. ಎಂದು ಅಂದಾಜಿ ಸಲಾಗಿದ್ದು,

(ಮೊದಲ ಪುಟದಿಂದ) ಇಷ್ಟೊಂದು ದೊಡ್ಡ ಮೊತ್ತದ ಅಗತ್ಯವೇನಿದೆ ಎಂದು ಸದಸ್ಯ ಅಮೀನ್ ಮೊಹಿಸಿನ್ ಪ್ರಶ್ನಿಸಿದರು.

ಕಳೆದ ಎರಡು ವರ್ಷಗಳಿಂದ ಆಡಿಟಿಂಗ್ ಆಗದಿದ್ದರೂ ಪ್ರಸ್ತುತ ವರ್ಷಕ್ಕೆ ಇಷ್ಟು ದೊಡ್ಡ ಮೊತ್ತವನ್ನು ತೋರಿಸಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಇತರ ಸದಸ್ಯರು ಕೂಡ ಧ್ವನಿಗೂಡಿಸಿದರಿಂದ ಕಾರ್ಯದರ್ಶಿ ತಾಹಿರ್ ಆಡಿಟಿಂಗ್ ವೆಚ್ಚವನ್ನು ಕಡಿಮೆ ಮಾಡುವದಾಗಿ ತಿಳಿಸಿದರು.

ಕಾವೇರಿ ಕಲಾಕ್ಷೇತ್ರದಿಂದ ವಾರ್ಷಿಕ 18 ಸಾವಿರ ರೂ. ಮಾತ್ರ ಆದಾಯ ಬರುತ್ತಿದೆ. ಆದರೆ ನಿರ್ವಹಣಾ ವೆಚ್ಚ 3 ಲಕ್ಷ ರೂ. ಎಂದು ತೋರಿಸಲಾಗಿದೆ. ನಗರಸಭೆಗೆ ಭಾರವಾದ ಕಲಾಕ್ಷೇತ್ರದ ಅಗತ್ಯವೇನಿದೆ ಎಂದು ಪ್ರಶ್ನಿಸಿದ ಅಮೀನ್ ಮೊಹಿಸಿನ್ ವಾಣಿಜ್ಯ ಉದ್ದೇಶದ ಕಾರ್ಯಕ್ರಮಗಳಿಗೆ ಹೆಚ್ಚಿನ ಬಾಡಿಗೆ ಪಡೆಯಬೇಕು ಮತ್ತು ಈಗಿರುವ ಒಂದು ಸಾವಿರ ರೂ. ನಿಂದ 5 ಸಾವಿರಕ್ಕೆ ಬಾಡಿಗೆ ಏರಿಕೆ ಮಾಡಬೇಕೆಂದು ತಿಳಿಸಿದರು.

ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಎಸ್.ರಮೇಶ್ ಮಾತನಾಡಿ ಸಂಘ ಸಂಸ್ಥೆಗಳೇ ಹೆಚ್ಚಾಗಿ ಕಾವೇರಿ ಕಲಾಕ್ಷೇತ್ರವನ್ನು ಬಳಸುತ್ತಿದ್ದು, ಬಹುತೇಕರು ಉಚಿತವಾಗಿ ನೀಡುವಂತೆ ಕೋರಿಕೊಳ್ಳುತ್ತಾರೆ. ಆದ್ದರಿಂದ ಒಂದು ಸಾವಿರ ಬಾಡಿಗೆ, ವಿದ್ಯುತ್ ಬಿಲ್ ಹಾಗೂ ನಿರ್ವಹಣಾ ವೆಚ್ಚವನ್ನು ಪಡೆಯುವಂತೆ ಸಲಹೆ ನೀಡಿದರು.

ಬಜೆಟ್ ಸಭೆಗೆ ಉಪಾಧ್ಯಕ್ಷರಾದ ಟಿ.ಎಸ್.ಪ್ರಕಾಶ್, ಹಿರಿಯ ಸದಸ್ಯರುಗಳಾದ ಹೆಚ್.ಎಂ.ನಂದಕುಮಾರ್ ಹಾಗೂ ಪಿ.ಡಿ.ಪೊನ್ನಪ್ಪ ಗೈರು ಹಾಜರಾಗಿದ್ದರು.