ಸೋಮವಾರಪೇಟೆ, ಫೆ. 18: ರಾಜಕೀಯ ಧ್ರುವೀಕರಣಕ್ಕೆ ವೀರಶೈವ ಸಮುದಾಯದ ಸಂಘಟನೆ ಅತ್ಯಗತ್ಯ ವಾಗಿದೆ ಎಂದು ವೀರಶೈವ ಹಿತರಕ್ಷಣಾ ಸಮಿತಿಯ ಗೌರವಾಧ್ಯಕ್ಷರಾದ ಮಾಜಿ ಶಾಸಕ ಎಚ್.ಸಿ. ಬಸವರಾಜು ಅಭಿಪ್ರಾಯಿಸಿದರು. ಇಲ್ಲಿನ ಮಾನಸ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವೀರಶೈವ ಹಿತರಕ್ಷಣಾ ಸಮಿತಿಯ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಮೈಸೂರು ವಿಭಾಗದಲ್ಲಿ 8 ಜಿಲ್ಲೆಗಳ ವೀರಶೈವ ಪ್ರಮುಖರ ತೀರ್ಮಾನದಂತೆ ವೀರಶೈವ ಹಿತರಕ್ಷಣಾ ಸಮಿತಿಯನ್ನು ರಚನೆ ಮಾಡಲಾಗಿದೆ. ಮೈಸೂರು ವಿಭಾಗ ದಲ್ಲಿ ಅತೀ ಹೆಚ್ಚಿನ ಜನಸಂಖ್ಯೆಯನ್ನು ವೀರಶೈವ ಸಮುದಾಯ ಹೊಂದಿದ್ದರೂ ರಾಜಕೀಯ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಸಾಂಸ್ಕøತಿಕವಾಗಿ ಮುಂದುವರೆದಿಲ್ಲ ಎಂದರು. ಯಾವದೇ ಸರಕಾರಗಳು ಅಧಿಕಾರಕ್ಕೆ ಬಂದರೂ ವೀರಶೈವ ಸಮಾಜದ ಕಡೆಗಣನೆ ಆಗುತ್ತಿದೆ. ಮುಂದಿನ ಚುನಾವಣೆಯಲ್ಲಿ ವೀರಶೈವ ಸಮುದಾಯಕ್ಕೆ ಸೇರಿದ ವ್ಯಕ್ತಿಗೆ ಯಾವದೇ ಪಕ್ಷದಲ್ಲಿದ್ದರೂ ಅವರನ್ನು ಬೆಂಬಲಿಸಬೇಕು ಎಂದು ಹೇಳಿದರು.

ವೀರಶೈವ ಜಾತಿಯಲ್ಲ; ಅದು ಒಂದು ಧರ್ಮ. ಧರ್ಮದ ರಕ್ಷಣೆಗಾಗಿ ವೀರಶೈವ ಸಮುದಾಯದ ಎಲ್ಲಾ ಒಳ ಪಂಗಡಗಳು ಒಟ್ಟಾಗಿ ಸಂಘಟಿತರಾಗ ಬೇಕು ಎಂದರು. ವೀರಶೈವ ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಹಿತ ರಕ್ಷಣಾ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಜನಾಂಗ ಬಾಂಧವರನ್ನು ಸಂಘಟಿಸಿ ರಾಜಕೀಯ ರಹಿತವಾದ ಈ ಸಂಘಟನೆಯ ಬೆಳವಣಿಗೆಗೆ ಪ್ರಯತ್ನಿಸ ಲಾಗುವದು. ಮುಂದಿನ ತಿಂಗಳು ಮೈಸೂರಿನಲ್ಲಿ ಬೃಹತ್ ಸಮಾವೇಶ ನಡೆಸಲಾಗುವದು ಎಂದರು.

ಹಿತ ರಕ್ಷಣಾ ಸಮಿತಿಯ ಮತ್ತೋರ್ವ ಗೌರವಾಧ್ಯಕ್ಷ ಸಿ.ಪಿ. ತಮ್ಮಣ್ಣ ಮಾತನಾಡಿ, ಸಮುದಾಯದ ಸಂಘಟನೆ ಮತ್ತು ಬೆಳೆವಣಿಗೆಗೆ ಕ್ರೀಯಾಶೀಲ ವ್ಯಕ್ತಿಗಳನ್ನು ಸದಸ್ಯರನ್ನಾಗಿ ಮಾಡುವ ಮೂಲಕ ಸಮಾಜದ ಏಳಿಗೆಗೆ ಶ್ರಮಿಸ ಲಾಗುವದು. ಸ್ವಾಮೀಜಿಗಳೆಂದು ಕರೆಯಲ್ಪಡುವವರು ಮಾತ್ರ ಶರಣರಲ್ಲ. ಅಂತರಂಗ ಮತ್ತು ಬಹಿರಂಗ ಶುದ್ದಿಯನ್ನು ಹೊಂದಿರುವವರು ಎಲ್ಲರೂ ಶರಣರು. ಲಿಂಗಾಯಿತ ಧರ್ಮವು ಸ್ವತಂತ್ರ ಧರ್ಮವಾಗಿದ್ದು, ಸಾಂವಿಧಾನಿಕ ಮಾನ್ಯತೆ ನೀಡಲು ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಬೇಕಾಗಿದೆ. ಕೊಡಗು ಜಿಲ್ಲೆಯಲ್ಲೂ ವೀರಶೈವ ಹಿತರಕ್ಷಣಾ ಸಮಿತಿಯ ಸಂಘಟನೆಗೆ ಎಲ್ಲರೂ ಶ್ರಮಿಸಬೇಕು ಎಂದು ಕರೆ ನೀಡಿದರು. ವೇದಿಕೆಯಲ್ಲಿ ಮಾಜಿ ಶಾಸಕರ ಸಂಘದ ಅಧ್ಯಕ್ಷ ಚಂದ್ರಶೇಖರ್, ಮಂಡ್ಯ ಜಿಲ್ಲಾ ವೀರಶೈವ ಹಿತರಕ್ಷಣಾ ಸಮಿತಿ ಮುಖಂಡ ಗುರುಪ್ರಸಾದ್, ಕೊಡಗು ಜಿಲ್ಲಾ ಸಮಿತಿಯ ಮುಖಂಡರುಗಳಾದ ಕುಮುದಾ ಧರ್ಮಪ್ಪ, ಬಿ.ಎಸ್. ಅನಂತ್ ಕುಮಾರ್, ಅಜ್ಜಳ್ಳಿ ರವಿ, ಎಸ್.ಕೆ. ವೀರಪ್ಪ, ಪ್ರಭುದೇವ್ ಸೇರಿದಂತೆ ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಯ ವೀರಶೈವ ಮುಖಂಡರುಗಳು ಉಪಸ್ಥಿತರಿದ್ದರು.