ಮಡಿಕೇರಿ, ಫೆ. 18: ಬಹುಜನ ಕಾರ್ಮಿಕರ ಸಂಘದ ಮುಖಂಡ ಕೆ. ಮೊಣ್ಣಪ್ಪ ಅವರ ವಿರುದ್ಧ ಎಪಿಎಂಸಿ ಸದಸ್ಯ ಜಯಾ ನಂಜಪ್ಪ ಅವರು ಮಾಡಿರುವ ಆರೋಪ ಖಂಡನೀಯವೆಂದು ಹೊದ್ದೂರು ಪಾಲೆÉೀಮಾಡಿನ ಡಾ. ಅಂಬೇಡ್ಕರ್ ಯುವಕ ಸಂಘ ಅಸಮಾಧಾನ ವ್ಯಕ್ತಪಡಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಪ್ರಮುಖ ಎಂ. ಅಶ್ವತ್ಥ್ ಮೌರ್ಯ, ಪಾಲೇಮಾಡಿನಲ್ಲಿ ನೆಲೆನಿಂತಿರುವ ಬಡವರ್ಗದ ಮಂದಿ ಶವ ಸಂಸ್ಕಾರಕ್ಕೆಂದು ಬಳಸಿಕೊಳ್ಳುತ್ತಿದ್ದ ಜಾಗವನ್ನು ಯಾವದೇ ಕಾರಣಕ್ಕೂ ಕ್ರೀಡಾಂಗಣ ನಿರ್ಮಾಣಕ್ಕೆ ಬಿಟ್ಟುಕೊಡುವದಿಲ್ಲವೆಂದು ತಿಳಿಸಿದರು.
ಪಾಲೇಮಾಡಿನಲ್ಲಿ ಹೋರಾಟ ನಡೆಸುತ್ತಿರುವ ಕೆ. ಮೊಣ್ಣಪ್ಪ ಅವರು ಯಾವದೇ ಒಂದು ಜಾತಿ ಅಥವಾ ಒಂದು ಸಮುದಾಯಕ್ಕಾಗಿ ನಿವೇಶನ ಮತ್ತು ಮೂಲಭೂತ ಸೌಕರ್ಯವನ್ನು ಕೇಳುತ್ತಿಲ್ಲ. ಇಲ್ಲಿ ಎಲ್ಲಾ ಜಾತಿ ಧರ್ಮಗಳಿಗೆ ಸೇರಿದ ಬಡ ಕಾರ್ಮಿಕರು, ವಿಧವೆಯರು, ಅಂಗವಿಕಲರು, ದಲಿತರು, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲಾ ವರ್ಗದವರಿದ್ದಾರೆ. ಮೊಣ್ಣಪ್ಪ ಅವರ ಹೋರಾಟವನ್ನು ಸಹಿಸದ ಕೆಲವರು ಇವರನ್ನು ಧರ್ಮವಿರೋಧಿ ಎಂದು ಪ್ರತಿಬಿಂಬಿಸುತ್ತಿರುವದು ಸರಿಯಾದ ಕ್ರಮವಲ್ಲ. ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುವದರಿಂದ ಮುಂದಿನ ದಿನಗಳಲ್ಲಿ ಯುವ ಪೀಳಿಗೆಯ ಕ್ರೀಡಾ ಕ್ಷೇತ್ರದ ಸಮಾನ ಮನೋಭಾವನೆಗೆ ಧಕ್ಕೆಯುಂಟಾಗಬಹುದೆಂದು ಅಶ್ವತ್ಥ್ ಮೌರ್ಯ ಆತಂಕ ವ್ಯಕ್ತಪಡಿಸಿದರು.
ಜಿಲ್ಲಾಡಳಿತ ಯಾವದೇ ಒತ್ತಡಕ್ಕೆ ಮಣಿಯದೆ ಬಡವರಿಗಾಗಿ ಸ್ಮಶಾನ ಜಾಗವನ್ನು ಬಿಟ್ಟುಕೊಡ ಬೇಕೆಂದ ಅವರು ಕ್ರೀಡಾಂಗಣ ನಿರ್ಮಾಣಕ್ಕೆ ಯಾರದ್ದೂ ವಿರೋಧವಿಲ್ಲ. ಆದರೆ, ಸ್ಮಶಾನದ ಜಾಗ ಅತಿಕ್ರಮಣ ಮಾಡಿ ಕೊಳ್ಳುವದನ್ನು ವಿರೋಧಿಸುವದಾಗಿ ಸ್ಪಷ್ಟಪಡಿಸಿದರು. ಗೋಷ್ಠಿಯಲ್ಲಿ ಸಂಘದ ಪ್ರಮುಖರಾದ ಕೆ.ಎ. ರಫೀಕ್, ಕೆ.ಎಂ. ಸಿದ್ದಿಕ್ ಹಾಗೂ ಯು.ಬಿ. ರಷೀದ್ ಉಪಸ್ಥಿತರಿದ್ದರು.