ಕೂಡಿಗೆ, ಫೆ.18: ಇಂದಿನಿಂದ ಪ್ರಾರಂಭವಾಗಿರುವ ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷಾ ಕೇಂದ್ರದಲ್ಲಿ ರಾಜ್ಯ ಪದವಿ ಪೂರ್ವ ಉಪನ್ಯಾಸಕರ ಸಂಘದ ಕರೆಯ ಮೇರೆಗೆ ಸಮೀಪದ ಶಿರಂಗಾಲ ಸರ್ಕಾರಿ ಪ.ಪೂ. ಕಾಲೇಜಿನ ಪ್ರಾಂಶುಪಾಲರು ಮತ್ತು ಉಪನ್ಯಾಸಕ ವರ್ಗ ಕಪ್ಪುಪಟ್ಟಿ ಧರಿಸಿ ಕಾರ್ಯನಿರ್ವಹಿಸುವದರ ಮೂಲಕ ಕುಮಾರ್ ನಾಯಕ್ ವರದಿ ಜಾರಿಗೆ ಒತ್ತಾಯಿಸಿದರು. ಕುಮಾರ್ ನಾಯಕ್ ಅವರ ವರದಿ ಸರ್ಕಾರದ ಕೈಯಲ್ಲಿದೆ ಅದನ್ನು ಜಾರಿಗೊಳಿಸುವದಷ್ಟೆ ಬಾಕಿ ಉಳಿದಿದೆ. ಉಪನ್ಯಾಸಕರ, ಶಿಕ್ಷಕರ ಬೇಡಿಕೆಗಳನ್ನು ಈಡೇರಿಸಲು ಮನಸ್ಸು ಮಾಡದ ಹಿನ್ನೆಲೆ ಪ್ರಥಮ ಪಿಯುಸಿ ಪರೀಕ್ಷೆ ಮುಗಿಯುವವರೆಗೂ ಕಪ್ಪು ಪಟ್ಟಿ ಧರಿಸಿ ಶಾಂತಿಯುತ ಪ್ರತಿಭಟನೆ ನಡೆಸಲಾಗುವದು ಎಂದು ಜಿಲ್ಲಾ ಉಪನ್ಯಾಸಕರ ಸಂಘದ ಸಂಘಟನಾ ಕಾರ್ಯದರ್ಶಿ ಹಂಡ್ರಂಗಿ ನಾಗರಾಜ್ ತಿಳಿಸಿದ್ದಾರೆ.
ಕನ್ನಡ ಭಾರತಿ ಪ.ಪೂ. ಕಾಲೇಜಿನ ಉಪನ್ಯಾಸಕರು ಕೂಡ ಕಪ್ಪು ಪಟ್ಟಿ ಧರಿಸಿ ಪರೀಕ್ಷಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.