ಮಡಿಕೇರಿ, ಫೆ. 18: ಮಡಿಕೇರಿ ನಗರವನ್ನು ಕಾಡುತ್ತಿರುವ ಕುಡಿಯುವ ನೀರಿನ ಸಮಸ್ಯೆ ಜನರ ನೆಮ್ಮದಿ ಮಾತ್ರವಲ್ಲದೆ ನಗರಸಭಾ ಸದಸ್ಯರ ನೆಮ್ಮದಿಯನ್ನು ಕೂಡ ಕೆಡಿಸಿದೆ. ನೀರು ಸರಬರಾಜಿಗೆ ಟ್ಯಾಂಕರ್‍ಗಳನ್ನು ಬಳಸಿಕೊಳ್ಳುವಂತೆ ಸದಸ್ಯರು ಸಲಹೆ ನೀಡಿದ್ದು, ಇದಕ್ಕಾಗಿ ಏಪ್ರಿಲ್ ವೇಳೆಗೆ ಖರ್ಚು ಮಾಡಲು 10 ಲಕ್ಷ ರೂ. ಮೀಸಲಿಟ್ಟಿರುವದಾಗಿ ಪೌರಾಯುಕ್ತೆ ಬಿ. ಶುಭ ತಿಳಿಸಿದ್ದಾರೆ. ಬಜೆಟ್ ಮಂಡನಾ ಸಭೆಯಲ್ಲಿ ಮಾತನಾಡಿದ ಬಹುತೇಕ ಸದಸ್ಯರು ಕುಡಿಯುವ ನೀರಿನ ಸಮಸ್ಯೆಯ ಗಂಭೀರತೆಯನ್ನು ತೆರೆದಿಟ್ಟರು. ಚುಮ್ಮಿ ದೇವಯ್ಯ, ಮನ್ಸೂರ್, ಅನಿತಾ ಪೂವಯ್ಯ, ತಜಸುಂ, ಶಿವಕುಮಾರಿ, ಕೆ.ಜಿ. ಪೀಟರ್, ಸಂಗೀತ ಪ್ರಸನ್ನ ತಮ್ಮ ವಾರ್ಡ್‍ಗಳು ಹಾಗೂ ನಗರದಲ್ಲಿ ಉಂಟಾಗಿರುವ ಜಲಕ್ಷಾಮದ ಬಗ್ಗೆ ಗಮನ ಸೆಳೆದರು.

ಹಳೆಯ ಪೈಪ್‍ಗಳನ್ನು ಬದಲಾಯಿಸುವಂತೆ ಒತ್ತಾಯಿಸಿದ ಎಸ್‍ಡಿಪಿಐ ಸದಸ್ಯ ಮನ್ಸೂರ್ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಚರ್ಚಿಸಲು ವಿಶೇಷ ಸಭೆ ಕರೆಯುವಂತೆ ಒತ್ತಾಯಿಸಿದರು.

ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಸ್. ರಮೇಶ್ ಮಾತನಾಡಿ, ನೀರಿನ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ಇಂಜಿನಿಯರ್ ಹಾಗೂ ತಂಡ ಮುಂದಿನ ಮೂರು ತಿಂಗಳ ಕಾಲ ನಿದ್ದೆಗೆಟ್ಟು ಕೆಲಸ ಮಾಡ ಬೇಕಾಗಿದ್ದು, ಕುಡಿಯುವ ನೀರಿನ ಕೊರತೆ ಉಂಟಾಗದಂತೆ ನೋಡಿ ಕೊಳ್ಳಬೇಕೆಂದರು. ಇಂಜಿನಿಯರ್ ಅವರ ಮಾತನ್ನು ಕೇಳದ ಕೆಲವು ಸಿಬ್ಬಂದಿಗಳಿದ್ದು, ತಪ್ಪುಗಳು ನಡೆಯದಂತೆ ಎಚ್ಚರ ವಹಿಸ ಬೇಕೆಂದರು. ಸಿಬ್ಬಂದಿಗಳೇ ಕುಡಿಯುವ ನೀರಿನ ಸಮಸ್ಯೆಯನ್ನು ಸೃಷ್ಟಿಸುತ್ತಿದ್ದಾರೆ ಎಂದು ರಮೇಶ್ ಆರೋಪಿಸಿದರು.

ಮೂಡಾ ಅಧ್ಯಕ್ಷರು ಹಾಗೂ ನಗರಸಭಾ

(ಮೊದಲ ಪುಟದಿಂದ) ಕಾಂಗ್ರೆಸ್ ಸದಸ್ಯರಾದ ಚುಮ್ಮಿದೇವಯ್ಯ ಮಾತನಾಡಿ ನಗರದ ಜನತೆಯ ಹಿತವನ್ನು ಕಾಯುವದಕ್ಕಾಗಿ ಹಿರಿಯರು ನೀಡಿರುವ ಕೆರೆಗಳು ಇಂದು ವಿನಾಶದ ಅಂಚಿನಲ್ಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಭೂ ಪರಿವರ್ತನೆಯಾಗುವ ಮೊದಲೇ ಗದ್ದೆಗಳಿಗೆ ಮಣ್ಣು ಸುರಿಯಲಾಗುತ್ತಿದೆ. ಮೂಡಾಕ್ಕೆ ಬರುತ್ತಿರುವ ಭೂಪರಿವರ್ತನೆಯ ಬಹುತೇಕ ಅರ್ಜಿಗಳೆಲ್ಲ ಜಲಮೂಲಕ್ಕೆ ಧಕ್ಕೆ ತರುವಂತಹುಗಳೇ ಆಗಿದ್ದು, ಇದನ್ನು ನಿಯಂತ್ರಿಸುವ ಅಗತ್ಯವಿದೆ. ಮೂಡಾ ಅಧ್ಯಕ್ಷನಾಗಿ ತಾನು ಈ ಬಗ್ಗೆ ಗಂಭೀರ ಚಿಂತನೆ ಮಾಡಿದ್ದು, ನಗರಸಭೆ ಕೂಡ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗಿದೆ. ನಿರ್ಲಕ್ಷಿಸಿದಲ್ಲಿ ಇನ್ನೂ ಕೆಲವೇ ವರ್ಷಗಳಲ್ಲಿ ಮಡಿಕೇರಿ ನಗರ ಹನಿ ನೀರಿಗೂ ಪರದಾಡಬೇಕಾಗುತ್ತದೆ ಎಂದು ಚುಮ್ಮಿದೇವಯ್ಯ ಗಮನ ಸೆಳೆದರು. ಕೆರೆಗಳ ವ್ಯಾಪ್ತಿಯ ಪ್ರದೇಶವನ್ನು ನಗರಸಭೆ ತನ್ನ ಸ್ವಾಧೀನಕ್ಕೆ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದ ಅವರು, ತಾವು ಮೂಡಾ ಅಧ್ಯಕ್ಷರಾಗಿರುವವರೆಗೆ ಯಾವದೇ ಕಾರಣಕ್ಕೂ ಕೆರೆಗಳ ನಾಶಕ್ಕೆ ಕಾರಣವಾಗುವ ಭೂಪರಿವರ್ತನೆಗೆ ಅವಕಾಶ ನೀಡುವದಿಲ್ಲವೆಂದು ಸ್ಪಷ್ಟಪಡಿಸಿದರು.

ಮೂಡಾದಲ್ಲಿ ಕಡತಗಳು ಕಣ್ಮುಚ್ಚಿ ವಿಲೇವಾರಿಯಾಗುತ್ತಿದ್ದು, ಅನಧಿಕೃತ ಕಟ್ಟಡಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ ಚುಮ್ಮಿದೇವಯ್ಯ, ಗೌಳಿಬೀದಿಗೆ ತೆರಳುವ ರಸ್ತೆಯ ಎಡ ಭಾಗದಲ್ಲಿರುವ ಗೂಡಂಗಡಿಗಳನ್ನು ತೆರವುಗೊಳಿಸಿ ನಗರಸಭೆಯ ಮೂಲಕ ವಾಣಿಜ್ಯ ಸಂಕೀರ್ಣ ನಿರ್ಮಿಸುವಂತೆ ಸಲಹೆ ನೀಡಿದರು.

ಇವರ ಮಾತಿಗೆ ಧ್ವನಿಗೂಡಿಸಿದ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಸ್. ರಮೇಶ್, ಕೆರೆಗಳು ಹಾಗೂ ಜಲಮೂಲಗಳನ್ನು ರಕ್ಷಿಸಿಕೊಳ್ಳಲು ಜಿಲ್ಲಾಧಿಕಾರಿಗಳ ಮೂಲಕವೇ ಕಠಿಣ ಆದೇಶ ಹೊರಡಿಸಬೇಕೆಂದು ಅಭಿಪ್ರಾಯಪಟ್ಟರು.

ಕುಡಿಯುವ ನೀರಿನ ಸಮಸ್ಯೆಯ ಚರ್ಚೆಯ ಸಂದರ್ಭ ಮಾತನಾಡಿದ ಪೌರಾಯುಕ್ತೆ ಶುಭ, ಸಮಸ್ಯೆ ಗಂಭೀರತೆಯನ್ನು ಪಡೆದುಕೊಳ್ಳುವ ಏಪ್ರಿಲ್ ತಿಂಗಳಿನಲ್ಲಿ ಟ್ಯಾಂಕರ್‍ಗಳ ಮೂಲಕ ನೀರು ಸರಬರಾಜು ಮಾಡಲು 10 ಲಕ್ಷ ರೂ. ಮೀಸಲಿಡಲಾಗಿದ್ದು, ಜಿಲ್ಲಾಧಿಕಾರಿಗಳ ಅನುಮತಿಗಾಗಿ ಕಾಯಲಾಗುತ್ತಿದೆ ಎಂದರು.

ವಾರ್ಡ್‍ಗಳಿಗೆ ಹಣ ನೀಡಿ

ಮುಖ್ಯಮಂತ್ರಿಗಳ ನಿಧಿಯಿಂದ ನಗರಸಭೆಗೆ 28 ಕೋಟಿ ರೂ. ಬಂದಿದೆ, ಆದರೆ ಮುಖ್ಯ ಬೀದಿಗಳ ಅಭಿವೃದ್ಧಿಗೆ ಮಾತ್ರ ಆದ್ಯತೆ ನೀಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಎಸ್‍ಡಿಪಿಐ ಸದಸ್ಯ ಅಮಿನ್ ಮೊಹಿಸಿನ್, ಕೊಳಚೆ ಪ್ರದೇಶ ಎಂದು ಘೋಷಿಸಲ್ಪಟ್ಟಿರುವ ವಾರ್ಡ್‍ಗಳೂ ಸೇರಿದಂತೆ ಒಳ ಬಡಾವಣೆಗಳು ಅಭಿವೃದ್ಧಿಯಾಗುವದು ಯಾವಾಗ ಎಂದು ಪ್ರಶ್ನಿಸಿದರು.

ಪ್ರತಿ ವಾರ್ಡ್‍ಗೆ ತಲಾ 15 ಲಕ್ಷ ರೂ.ಗಳನ್ನಷ್ಟೇ ಮೀಸಲಿಟ್ಟಿದ್ದು, ಹೆಚ್ಚಿನ ಅನುದಾನ ನೀಡುವಂತೆ ಒತ್ತಾಯಿಸಿದರು.

ಇದಕ್ಕೆ ಧ್ವನಿಗೂಡಿಸಿದ ಬಿಜೆಪಿ ಸದಸ್ಯರಾದ ಶಿವಕುಮಾರಿ ಅಲ್ಪ ಅನುದಾನದಿಂದ ವಾರ್ಡ್‍ಗಳ ಅಭಿವೃದ್ಧಿ ಅಸಾಧ್ಯವಾಗಿದ್ದು, ಓಟು ನೀಡಿದ ವಾರ್ಡ್‍ನ ನಿವಾಸಿಗಳು ನಮ್ಮನ್ನು ಪ್ರಶ್ನಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಮ್ಮ ವಾರ್ಡ್‍ನ ವಿಸ್ತೀರ್ಣ ದೊಡ್ಡದಾಗಿರುವದರಿಂದ ಅಭಿವೃದ್ಧಿ ಕಾರ್ಯಗಳಿಗೆ 25 ಲಕ್ಷ ರೂ.ಗಳನ್ನು ನೀಡುವಂತೆ ಒತ್ತಾಯಿಸಿದರು. ಹೆಚ್ಚಿನ ಮೊತ್ತ ನೀಡುವದಾಗಿ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಭರವಸೆ ನೀಡಿದರು.

ಪೌರಾಯುಕ್ತೆ ಶುಭ ಮಾತನಾಡಿ ಕುಡಿಯುವ ನೀರಿಗಾಗಿ ಹೆಚ್ಚಿನ ಅನುದಾನ ಮೀಸಲಿಟ್ಟಿರುವದರಿಂದ ವಾರ್ಡ್‍ಗಳಿಗೆ ಕಡಿಮೆ ಮೊತ್ತವನ್ನು ವಿನಿಯೋಗಿಸಲಾಗಿದೆ. ಬರ ನಿರ್ವಹಣೆಗಾಗಿ 94.86 ಲಕ್ಷ ರೂ.ಗಳನ್ನು ಇಡಲಾಗಿದೆ ಎಂದರು.