ಕುಶಾಲನಗರ, ಫೆ 18: ಕುಶಾಲನಗರ ಸಾರಿಗೆ ಬಸ್ ನಿಲ್ದಾಣವನ್ನು ಹೈಟೆಕ್ ಮಾದರಿಯಲ್ಲಿ ನಿರ್ಮಿಸಲು ಸಾರಿಗೆ ಸಂಸ್ಥೆ ಚಿಂತನೆ ನಡೆಸಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಧಿಕಾರಿಗಳ ತಂಡದೊಂದಿಗೆ ಕುಶಾಲನಗರ ಸಾರಿಗೆ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸ್ಥಳೀಯ ಪ್ರಮುಖರೊಂದಿಗೆ ಚರ್ಚಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಾರಿಗೆ ಸಂಸ್ಥೆಯ ಮಡಿಕೇರಿ ಘಟಕದ ವ್ಯವಸ್ಥಾಪಕಿ ಗೀತಾ, ನಿಲ್ದಾಣದ ಆವರಣದ ಶೌಚಾಲಯದಿಂದ ಚರಂಡಿ ಮೂಲಕ ಕಾವೇರಿ ನದಿಗೆ ಯಾವದೇ ರೀತಿಯ ತ್ಯಾಜ್ಯ ಹರಿಯದಂತೆ ಎಲ್ಲಾ ರೀತಿಯ ಕಾರ್ಯಯೋಜನೆಗಳನ್ನು ಕೈಗೊಳ್ಳಲಾಗುವದೆಂದು ಭರವಸೆ ನೀಡಿದ್ದಾರೆ.
ನಿಲ್ದಾಣದ ಶೌಚಾಲಯದಿಂದ ಶೌಚ ತ್ಯಾಜ್ಯಗಳು ಚರಂಡಿಗೆ ಹರಿಯುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗದ ಹಿನ್ನೆಲೆಯಲ್ಲಿ ಈ ದುರ್ಘಟನೆ ನಡೆದಿದೆ.
ನದಿಗೆ ಶೌಚ ತ್ಯಾಜ್ಯ ಹರಿಸಿದ ಪ್ರಕರಣದ ಹಿನ್ನೆಲೆಯಲ್ಲಿ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಮತ್ತು ಸ್ಥಳೀಯ ಸಂಘಟನೆಗಳ ಪ್ರತಿಭಟನೆ ನಡೆಸಿದ ಸಂಬಂಧ ಸಂಸ್ಥೆಯ ವಿಭಾಗೀಯ ಮುಖ್ಯಸ್ಥರ ಸೂಚನೆಯಂತೆ ಸಂಬಂಧಿಸಿದ ಅಧಿಕಾರಿಗಳು ಎಲ್ಲಾ ಕ್ರಮಗಳನ್ನು ತಕ್ಷಣ ಕೈಗೊಳ್ಳುವದಾಗಿ ಭರವಸೆ ನೀಡಿದರು.
ಈ ಸಂದರ್ಭ ಸ್ಥಳಕ್ಕೆ ಭೇಟಿ ನೀಡಿದ್ದ ಕೆಎಸ್ಆರ್ಟಿಸಿ ವಿಭಾಗೀಯ ಕಚೇರಿಯ ಅಭಿಯಂತರ ದಿವಾಕರ್ ಮಾತನಾಡಿ, ಕುಶಾಲನಗರ ಒಳಚರಂಡಿ ಯೋಜನೆ ಪೂರ್ಣಗೊಳ್ಳುವ ಅವಧಿ ತನಕ ತಾತ್ಕಾಲಿಕವಾಗಿ ಕೆಲವು ಮಾರ್ಪಾಡು ಮಾಡಲಾಗುವದು. ಯಾವದೇ ಸಂದರ್ಭ ಇಂತಹ ಘಟನೆ ಮರುಕಳಿಸಲು ಅವಕಾಶ ಕಲ್ಪಿಸುವದಿಲ್ಲ ಎಂದು ತಿಳಿಸಿದ್ದಾರೆ.
ಇದೇ ಸಂದರ್ಭ ಅಧಿಕಾರಿಗಳ ತಂಡ ಕುಶಾಲನಗರ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಮಧುಸೂದನ್ ಅವರೊಂದಿಗೆ ಚರ್ಚಿಸಿ ಬಸ್ ನಿಲ್ದಾಣದ ಸ್ವಚ್ಛತೆಗೆ ಎಲ್ಲಾ ರೀತಿಯ ಸಹಕಾರ ಕೋರಿದರು.
ಪಂಚಾಯಿತಿಗೆ ಬಾಕಿಯಿರುವ ತೆರಿಗೆ ಸಂದಾಯ ಮಾಡಲು ತಕ್ಷಣ ಕ್ರಮಕೈಗೊಳ್ಳಲಾಗುವದು ಎಂದು ಕೆಎಸ್ಆರ್ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂದರ್ಭ ಕೆಎಸ್ಆರ್ಟಿಸಿ ನಿಗಮ ಅಧಿಕಾರಿಗಳಾದ ಶರತ್, ಶ್ಯಾಂಶೆಟ್ಟಿ, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಸಂಚಾಲಕÀ ಎಂ.ಎನ್. ಚಂದ್ರಮೋಹನ್, ನಗರ ಬಿಜೆಪಿ ಅಧ್ಯಕ್ಷರಾದ ಕೆ.ಜಿ. ಮನು, ಕೂಡುಮಂಗಳೂರು ಗ್ರಾಮ ಪಂಚಾಯಿತಿ ಸದಸ್ಯ ಭಾಸ್ಕರ್ ನಾಯಕ್, ನಿಡ್ಯಮಲೆ ದಿನೇಶ್, ಶಿವಾಜಿರಾವ್, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕೆ.ಬಿ. ರಾಜು ಮತ್ತಿತರರು ಇದ್ದರು.