ಮಡಿಕೇರಿ, ಫೆ. 18: ಕೊಡವ ಭಾಷೆಯನ್ನಾಡುವ ವಿವಿಧ ಸಮುದಾಯಗಳ ಬಗ್ಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು ತಾರತಮ್ಯ ಧೋರಣೆಯನ್ನು ಅನುಸರಿಸುತ್ತಿದ್ದಾರೆ ಎಂದು ಬುಡಕಟ್ಟು ಕೃಷಿಕರ ಸಂಘದ ಮಡಿಕೇರಿ ತಾಲೂಕು ಅಧ್ಯಕ್ಷ ಕುಡಿಯರ ಮುತ್ತಪ್ಪ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕಾಡೆಮಿ ಅಧ್ಯಕ್ಷರ ವಿರುದ್ಧ ಸರಕಾರ ಸೂಕ್ತ ಕ್ರಮ ಕೈಗೊಳ್ಳುವದರೊಂದಿಗೆ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿದರು.
ತಾ. 27 ರವರೆಗೆ ಕಾದು ನೋಡಿ ನಂತರ ಜಿಲ್ಲೆಯ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಅಕಾಡೆಮಿ ಕಛೇರಿ ಎದುರು ನಿರಂತರ ಪ್ರತಿಭಟನೆ ನಡೆಸುವದಾಗಿ ಎಚ್ಚರಿಕೆ ನೀಡಿದರು.
‘ಕುಡಿಯರ ಮಂದ್ ನಮ್ಮೆ’ ಆಯೋಜನೆಗೆ 1 ಲಕ್ಷ ಅನುದಾನ ಒದಗಿಸುವಂತೆ ಅಕಾಡೆಮಿಗೆ ಕುಡಿಯರ ಸಮೂಹದ ಪರವಾಗಿ ಈ ಹಿಂದೆ ಮನವಿ ಮಾಡಿಕೊಳ್ಳಲಾಗಿತ್ತು. ಈ ಬಗ್ಗೆ ವಿಚಾರಿಸಲು ಅಕಾಡೆಮಿ ಕಛೇರಿಗೆ ತೆರಳಿದ ಸಂದರ್ಭ ಅಧ್ಯಕ್ಷರು, ‘ನಿನಗೆ ಕಚೇರಿಗೆ ಬರುವ ಯೋಗ್ಯತೆ ಇಲ್ಲ’ವೆಂದು ಅಗೌರವ ತೋರಿದ್ದಾರೆ. ತಾನು ಸಲ್ಲಿಸಿದ್ದ ಮನವಿಯನ್ನು ಎಸೆದು, ‘ವರ್ಷದ ಹಿಂದೆ ನೀನು ಅಧ್ಯಕ್ಷರ ವಿರುದ್ಧ ಹೇಳಿಕೆ ನೀಡಿದ್ದೀಯ. ಇದರಿಂದ ನಿಮಗೆ ಯಾವದೇ ಅನುದಾನವಾಗಲಿ, ಮರ್ಯಾದೆ ಯಾಗಲಿ ನೀಡುವದಿಲ್ಲ’ವೆಂದು ಗದರುವ ಮೂಲಕ ‘ಕಚೇರಿಯಿಂದ ಹೊರಗೆ ಹೋಗು’ ಎಂದು ಹೇಳುವ ಮೂಲಕ ಅವಮಾನಿಸಿದ್ದಾರೆ ಎಂದು ಕುಡಿಯರ ಮುತ್ತಪ್ಪ ಆರೋಪಿಸಿದರು.
ಅಧ್ಯಕ್ಷÀರ ಈ ಕ್ರಮದ ವಿರುದ್ಧ ನಗರ ಪೊಲೀಸ್ ಠಾಣೆ ಸೇರಿದಂತೆ ಉಪ ವಿಭಾಗಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳಿಗೆ ತಾವು ದೂರು ನೀಡಿದ್ದು, ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ತನಿಖೆ ನಡೆಸಿ: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯಲ್ಲಿ 2.50 ಕೋಟಿ ರೂ.ಗಳಷ್ಟು ಅನುದಾನವಿದೆ. ಇದರಲ್ಲಿ ಶೇ.25 ರಷ್ಟು ಹಣವನ್ನು ಪರಿಶಿಷ್ಟ ಜಾತಿಗೆ ಒಳಪಟ್ಟ ಕುಡಿಯ, ಮೇದ, ಕೆಂಬಟ್ಟಿ ಸಮೂಹದ ಸಂಸ್ಕøತಿಯ ಬೆಳವಣಿಗೆಗೆ ಬಳಸಬೇಕು. ಆದರೆ, ಎಷ್ಟು ಅನುದಾನ ವನ್ನು ಈ ಅಧ್ಯಕ್ಷರು ಬಳಸಿದ್ದಾರೆ ಎಂದು ಪ್ರಶ್ನಿಸಿದ ಕುಡಿಯರ ಮುತ್ತಪ್ಪ ಕೊಡವ ಭಾಷಿಕ ಇತರ ಸಮುದಾಯಗಳ ಭಾಷಾ, ಸಂಸ್ಕøತಿ, ಆಚಾರ ವಿಚಾರಗಳ ಬೆಳವಣಿಗೆಗೆ ಅಕಾಡೆಮಿಯಿಂದ ಅಗತ್ಯ ಕಾರ್ಯ ಕ್ರಮಗಳನ್ನು ರೂಪಿಸಿಲ್ಲ ಎಂದರು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯಿಂದ ಕೊಡವ ಭಾಷೆಯನ್ನಾಡುವ ಇತರ ಸಮುದಾಯಗಳನ್ನು ಕಡೆಗಣಿಸಲಾಗಿದೆ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಅಕಾಡೆಮಿ ಅಧ್ಯಕ್ಷರು ಸಾರ್ವಜನಿಕ ಚರ್ಚೆಗೆ ಬರಬೇಕು. ಕೊಡವ ಭಾಷಿಕ ಇತರ ಸಮುದಾಯಗಳಿಗೆ ಎಷ್ಟು ವೆಚ್ಚ ಮಾಡಲಾಗಿದೆ ಎನ್ನುವ ವಿವರವನ್ನು ನೀಡಬೇಕೆಂದರು.
ತನಗೆ ಯೋಗ್ಯತೆ ಇಲ್ಲದವನೆಂದು ಹೇಳಿರುವ ಅಕಾಡೆಮಿ ಅಧ್ಯಕ್ಷರು ತÀನ್ನೊಂದಿಗೆ ಕೊಡವ ಜಾನಪದ ‘ದೇಶ ಕಟ್ಟ್ ಪಾಟ್’ ಸ್ಪರ್ಧೆಗೆ ಬರಲಿ ಇಲ್ಲವೇ ನಮ್ಮ ಮಕ್ಕಳೊಂದಿಗೆ ಸ್ಪರ್ಧೆಗಿಳಿಯಲಿ ನಮ್ಮ ಯೋಗ್ಯತೆ ಏನೆಂದು ತೋರಿಸಿಕೊಡುವದಾಗಿ ಸವಾಲೆಸೆದರು.
ಸುದ್ದಿಗೋಷ್ಠಿಯಲ್ಲಿ ಬುಡಕಟ್ಟು ಕೃಷಿಕರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎ. ಸೋಮಯ್ಯ, ಗೋಪಮ್ಮ ಉಪಸ್ಥಿತರಿದ್ದರು.