ಮಡಿಕೇರಿ, ಫೆ. 18: ಕೊಡಗಿಗೆ ಹೊರ ಪ್ರದೇಶದಿಂದ ಬಂದು ನೆಲಸಿದ ಎಲ್ಲರ ಭಾಷೆಯನ್ನು ಕೊಡವರು ಕಲಿತು ಮಾತನಾಡುತ್ತಾರೆ. ಆದರೆ ತಮ್ಮದೇ ಮಾತೃಭಾಷೆಯಾದ ಕೊಡವ ಭಾಷೆಯನ್ನು ಮಾತನಾಡಲು ಹಿಂಜರಿ ಯುವದು ವಿಷಾದಕರ. ಇದರಿಂದಾಗಿ ಭಾಷೆ ಅವನತಿಯತ್ತ ತಲುಪುವಂತಾ ಗಿದೆ ಎಂದು ಸಾಹಿತಿ, ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ಅಭಿಪ್ರಾಯಪಟ್ಟರು.

ಕೊಡವ ಸಾಹಿತ್ಯ ಅಕಾಡೆಮಿ, ಮುಂಬೈಯ ತುಳುನಾಡ ಸೇವಾ ಸಮಾಜ ಹಾಗೂ ಮುಂಬೈ ಕೊಡವ ಸಮಾಜದ ಆಶ್ರಯದಲ್ಲಿ ಇತ್ತೀಚೆಗೆ ಮುಂಬೈಯ ಮೀರಾ ಭಾಯಂದರ್‍ನ ಮೀರಾಲೋನ್ ಪುನಮ್ ಸಾಗರ್ ಗಾರ್ಡ್‍ನಲ್ಲಿ ನಡೆದ ಕೊಡವ-ತುಳು ಸಾಂಸ್ಕøತಿಕ ವೈಭವ ಕಾರ್ಯಕ್ರಮದಲ್ಲಿ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇತಿಹಾಸದ ಪುಟದಲ್ಲಿ ಸೇರಿರುವ ಹಳೆಯ ಘಟನಾವಳಿಗಳನ್ನು ಇಟ್ಟುಕೊಂಡು ಕೊಡಗಿನ ಪ್ರಮುಖ ಜನಾಂಗಗಳಾದ ಕೊಡವರು ಹಾಗೂ ಅರೆಭಾಷೆ ಗೌಡರ ನಡುವೆ ವೈಮನಸ್ಸು ಉಂಟಾಗುತ್ತಿರುವ ಬೆಳವಣಿಗೆ ಸರಿಯಲ್ಲ. ಇದನ್ನು ಸರಿಪಡಿಸುವತ್ತ ಜನಪ್ರತಿನಿಧಿಗಳು, ಅಕಾಡೆಮಿಗಳು ಮುಂದಾಗಬೇಕೆಂದರು.

ಕೊಡವರು ರಾಜರ ಆಳ್ವಿಕೆಯ ಸಂದರ್ಭದ ದೌರ್ಜನ್ಯದಿಂದಾಗಿ ಅನಿವಾರ್ಯವಾಗಿ ಬ್ರಿಟೀಷರ ಪರ ನಿಲ್ಲಬೇಕಾಯಿತು ಎಂದು ಸಮರ್ಥಿಸಿದ ಅವರು, ಕೊಡವರು ಬ್ರಿಟೀಷರ ಪರವಾಗಿದ್ದರು ಎಂದು ವ್ಯಂಗ್ಯ ಮಾಡುವದು ಸರಿಯಲ್ಲವೆಂದರು.

ಕೊಡವ-ತುಳು ಸಮುದಾಯದ ಕೃಷಿ ಮತ್ತು ಸಾಂಸ್ಕøತಿಕ ಸಾಮರಸ್ಯದ ಕುರಿತಾಗಿ ವಿಚಾರ ಮಂಡಿಸಿದ ಪತ್ರಕರ್ತ ಕಾಯಪಂಡ ಶಶಿ ಸೋಮಯ್ಯ, ಕೊಡವ-ತುಳು ಜನಾಂಗದ ನಡುವೆ ಹಲವಾರು ವಿಚಾರಗಳಲ್ಲಿ ಸಾಮ್ಯತೆ ಇದೆ. ಕೃಷಿ, ಸಂಸ್ಕøತಿಯಲ್ಲಿಯೂ ಇದನ್ನು ಕಾಣಬಹುದು. ಸೋದರ ಜಿಲ್ಲೆಗಳ ಈ ಜನಾಂಗದವರು ಆಚೆ-ಈಚೆ ಅವಲಂಭಿತರಾಗಿದ್ದು, ಸಾಂಸ್ಕøತಿಕ ವಿನಿಮಯವಾಗುತ್ತಿರುವದನ್ನು ಗಮನಿಸಬಹುದೆಂದರು.

ಕೊಡವ-ತುಳು ಸಂಸ್ಕøತಿ ಕುರಿತು ವಿಚಾರ ಮಂಡಿಸಿದ ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕ ಡಾ. ಸದಾನಂದ ಪೆರ್ಲ ಅವರು ಕೊಡವ-ತುಳು ಜನಾಂಗದ ನಡುವೆ ಸೇತುಬಂಧ ಕಾರ್ಯಕ್ರಮ ಅಕಾಡೆಮಿಗಳಿಂದ ನಡೆಯುತ್ತಿರುವದು ಶ್ಲಾಘನೀಯ. ಕೊಡಗಿನ ಪ್ರಕೃತಿ ಸೌಂದರ್ಯ, ಜೀವನ ಕ್ರಮ, ಆಚಾರ-ವಿಚಾರಗಳ ಬಗ್ಗೆ ಹಾಗೂ ದೇಶಕ್ಕೆ ನೀಡಿರುವ ಕೊಡುಗೆ ಕುರಿತು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಭಾಷಾ ಪ್ರಾಧಾನ್ಯತೆ ಕುರಿತು ವಿಷಯ ಮಂಡಿಸಿದ ಸಾಹಿತಿ ಲತಾ ಸಂತೋಷ್ ಶೆಟ್ಟಿ, ಮಾತೃಭಾಷೆ ಬಗ್ಗೆ ಪ್ರತಿಯೊಬ್ಬರು ಅಭಿಮಾನ ಹೊಂದಿರಬೇಕೆಂದರು. ತುಳುನಾಡಿನ ಆಚರಣೆ ಮತ್ತು ಸಂಪ್ರದಾಯಗಳ ಬಗ್ಗೆ ಡಾ. ಕರುಣಾಕರ್ ಎನ್. ಶೆಟ್ಟಿ ವಿಷಯ ಮಂಡಿಸಿದರು. ಕೊಡವ ಅಕಾಡೆಮಿ ಸದಸ್ಯ ಕುಡಿಯರ ಬೋಪಯ್ಯ ಕಾರ್ಯಕ್ರಮ ನಿರೂಪಿಸಿದರು.