ಸೋಮವಾರಪೇಟೆ, ಫೆ. 18: ಪಟ್ಟಣದ ತ್ಯಾಜ್ಯವನ್ನು ಕರ್ಕಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ವಿಲೇವಾರಿ ಮಾಡುತ್ತಿರುವದರಿಂದ ಗ್ರಾಮದಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ ಎಂದು ಕಸ ಹಾಕುವ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿರುವ ಗ್ರಾಮಸ್ಥರು, ಕೂಡಲೇ ಕಸ ವಿಲೇವಾರಿಯನ್ನು ಸ್ಥಗಿತಗೊಳಿಸ ಬೇಕು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು.

ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಮುಖ್ಯಾಧಿಕಾರಿ ನಾಚಪ್ಪ ಅವರು, ಕರ್ಕಳ್ಳಿಯ ಬಿ.ಟಿ. ಅಣ್ಣಪ್ಪ ಎಂಬವರಿಗೆ ಸೇರಿದ ಜಾಗದಲ್ಲಿ ಕಸವಿಲೇವಾರಿ ಮಾಡುತ್ತಿದ್ದು, ಇದರಿಂದ ಗ್ರಾಮಸ್ಥರಿಗೆ ತೊಂದರೆಯಾಗುವದು ಕಂಡುಬಂದರೆ ಮುಂದಿನ ಒಂದು ತಿಂಗಳಲ್ಲಿ ತ್ಯಾಜ್ಯ ಹಾಕುವದನ್ನು ನಿಲ್ಲಿಸಲಾಗುವದು ಎಂದರು.

ಈ ಬಗ್ಗೆ ಲಿಖಿತ ಭರವಸೆ ನೀಡಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಅಧಿಕಾರಿ ಲಿಖಿತ ಭರವಸೆ ನೀಡಿದರು. ಒಂದು ತಿಂಗಳ ಒಳಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದಿದ್ದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವದು ಎಂದು ಎಚ್ಚರಿಸಿದರು.

ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ಪಂಚಾಯಿತಿಗೆ ಒಂದು ತಿಂಗಳ ಅವಕಾಶ ನೀಡಲಾಗಿದೆ ಎಂದು ಕರ್ಕಳ್ಳಿ ಗ್ರಾಮದ ಎಂ.ಕೆ.ಹರೀಶ ಹೇಳಿದರು. ಈ ಸಂದರ್ಭ ರುಕ್ಮಯ್ಯ, ಗಣೇಶ್, ಉದಯ, ವೆಂಕಪ್ಪ, ತುಳಸಿ, ಕೆ.ಶ್ಯಾಮ್ ಮತ್ತಿತರರು ಇದ್ದರು.