ಮೂರ್ನಾಡು - ಹೊದ್ದೂರು, ಫೆ. 18: ಇಲ್ಲಿಗೆ ಸಮೀಪದ ಪಾಲೆಮಾಡುವಿನಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆಂದು ಗುರುತಿಸಲಾದ ಸ್ಥಳದಲ್ಲಿಯೇ ಕ್ರೀಡಾಂಗಣ ನಿರ್ಮಿಸುವಂತೆ ಆಗ್ರಹಿಸಿ ಸ್ಥಳೀಯ ಗ್ರಾಮಸ್ಥರು ಹಾಗೂ ಕ್ರೀಡಾ ಭಿಮಾನಿಗಳು ಜನಾಂದೋಲನ ರೂಪಿಸಿ ಪ್ರತಿಭಟನೆ ನಡೆಸಿದರು. ಈ ಸಂದರ್ಭ ಸ್ಥಳಕ್ಕಾಗಮಿಸಿದ ಉಪ ವಿಭಾಗಾಧಿಕಾರಿ ನಂಜುಂಡೇಗೌಡ ಹಾಗೂ ಮಡಿಕೇರಿ ತಹಶೀಲ್ದಾರ್ ಕುಸುಮಾ ಅವರುಗಳು ಜಾಗದ ಪರ - ವಿರೋಧ ವುಂಟಾಗಿರುವ ಸಮಸ್ಯೆಯನ್ನು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಬಗೆಹರಿಸುವದಾಗಿ ಭರವಸೆ ನೀಡಿದರು.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮೂಲಕ ಪಾಲೆಮಾಡುವಿನಲ್ಲಿ ಅಂತರ್ರಾಷ್ಟೀಯ ಮಟ್ಟದ ಕ್ರೀಡಾಂಗಣ ನಿರ್ಮಾಣಕ್ಕೆ ಜಾಗ ಮಂಜೂರು ಮಾಡಲಾಗಿದೆ. ಈ ಕ್ರಮದ ವಿರುದ್ಧ ಪರಸ್ಪರ ಎರಡು ಗುಂಪುಗಳಲ್ಲಿ ಭಿನ್ನಾಭಿಪ್ರಾಯ ತಲೆದೋರಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹಾಗೂ ಕ್ರೀಡಾ ಭಿಮಾನಿಗಳು ಇಲ್ಲಿಯೇ ಕ್ರೀಡಾಂಗಣ ನಿರ್ಮಿಸುವಂತೆ ಜನಾಂದೋಲನ ಆಯೋಜಿಸಿದ್ದರು.
ಕ್ರೀಡಾಭಿಮಾನಿಗಳಿಗೆ ಮನವಿ
ಕ್ರೀಡಾಂಗಣ ನಿರ್ಮಾಣದ ಪರ - ವಿರೋಧವಿರುವ ಎರಡೂ ಗುಂಪುಗಳ ತಲಾ 6 ಮಂದಿಯ ಸಮಿತಿ ರಚಿಸಿ, ನಂತರ ಆ ಸಮಿತಿಯು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಸ್ಯೆಯನ್ನು ಶಾಂತಿಯುತವಾಗಿ ಬಗೆಹರಿಸೋಣ ಎಂದು ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಕದ್ದಣಿಯಂಡ ಹರೀಶ್ ಬೋಪಣ್ಣ ಕ್ರೀಡಾಭಿಮಾನಿಗಳಿಗೆ ಮನವಿ ಮಾಡಿದರು.
ಸತ್ಯಾಗ್ರಹದ ಎಚ್ಚರಿಕೆ
ಕ್ರೀಡಾಂಗಣಕ್ಕೆ ಮೀಸಲಿರಿಸಲಾದ ಜಾಗಕ್ಕೆ ಅಕ್ರಮವಾಗಿ ಅಳವಡಿಸ ಲಾಗಿರುವ ಬೇಲಿಯನ್ನು ಕೂಡಲೇ ತೆರವುಗೊಳಿಸಬೇಕು, ಅತಿಕ್ರಮಣಕಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಮೀನಾ - ಮೇಷ ಎಣಿಸುತ್ತಿರುವದಕ್ಕೆ ಕಾರಣವೇನೆಂದು ಗ್ರಾಮಸ್ಥರು ಉಪವಿಭಾಗಾಧಿಕಾರಿ ಗಳೊಡನೆ ಪಟ್ಟು ಹಿಡಿದರು. ಕೂಡಲೇ ಸಮಸ್ಯೆಯನ್ನು ಸಕಾರಾತ್ಮಕವಾಗಿ ಪರಿಹರಿಸದಿದ್ದಲ್ಲಿ ಕ್ರೀಡಾಂಗಣಕ್ಕೆ ಮೀಸಲಿರಿಸಿರುವ ಜಮೀನನ್ನು ತಾವೂ ಕೂಡಾ ಅತಿಕ್ರಮಿಸುವದಾಗಿ ಬೆದರಿಕೆ ಒಡ್ಡಿದರು. ಉದ್ದೇಶಿತ ಜಾಗದಲ್ಲಿಯೇ ಕ್ರೀಡಾಂಗಣ ನಿರ್ಮಾಣ ಮಾಡಲು ಗ್ರಾಮಸ್ಥರು ಮತ್ತು ಕ್ರೀಡಾಭಿಮಾನಿಗಳು ನಿರಂತರ ಸತ್ಯಾಗ್ರಹ ನಡೆಸುವದಾಗಿ ಜನಪ್ರತಿನಿಧಿಗಳು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು.
ಜಿಲ್ಲಾಡಳಿತ ಕೈಗೊಂಬೆಯೇ - ಆಕ್ಷೇಪ
ಕ್ರೀಡಾಂಗಣಕ್ಕೆ ಮೀಸಲಿರಿಸಿದ್ದ ಜಾಗವನ್ನು ಸ್ಥಳೀಯ ನಿವಾಸಿಗಳು ಅತಿಕ್ರಮಣ ಮಾಡಿಕೊಂಡಿದ್ದಾರೆ. ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಹಿಂದೇಟು ಹಾಕುತ್ತಿದೆ. ಇದು ವ್ಯಕ್ತಿಯೋರ್ವರ ಕೈಗೊಂಬೆಯೇ ಎಂದು ಸ್ಥಳೀಯ ಕ್ರೀಡಾಭಿಮಾನಿಗಳು ಉಪ ವಿಭಾಗಾಧಿಕಾರಿಗಳನ್ನು ಪ್ರಶ್ನಿಸಿದರು. ಬಿರುಬಿಸಿಲಿನ
(ಮೊದಲ ಪುಟದಿಂದ) ಝಳದಿಂದ ತಾಳ್ಮೆಗೆಟ್ಟ ಕ್ರೀಡಾಭಿಮಾನಿಗಳು ಜಿಲ್ಲಾಡಳಿತದ ವಿಳಂಬ ಧೋರಣೆಯನ್ನು ಪ್ರತಿಭಟಿಸಿ “ಧಿಕ್ಕಾರ” ಕೂಗಿದರು. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸದ ಬಗ್ಗೆ ಹಲವರು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಅವರು ಉದ್ದೇಶಪೂರ್ವಕವಾಗಿಯೇ ಸ್ಥಳಕ್ಕೆ ಆಗಮಿಸದೇ ಸಮಸ್ಯೆ ಪರಿಹಾರಕ್ಕೆ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಕೆಲವರು ದೂರಿದÀರು.
ವಿವಾದದ ಹಿನೆÀ್ನಲೆ
ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ 2015ರಲ್ಲಿ ಜಿಲ್ಲಾಡಳಿತದ ವತಿಯಿಂದ ಪಾಲೆಮಾಡುವಿನ ಸರ್ವೆ ನಂಬರ್ 167/1 ಎ ರಲ್ಲಿ 12.70 ಏಕರೆ ಜಾಗವನ್ನು ಮಂಜೂರು ಮಾಡಲಾಗಿತ್ತು. ಆದರೆ, ಕ್ರೀಡಾಂಗಣಕ್ಕೆ ಮಂಜೂರಾದ ಜಾಗವನ್ನು ತಾವು ಹಲವಾರು ವರ್ಷಗಳಿಂದ ಸ್ಮಶಾನವಾಗಿ ಬಳಸುತ್ತಿರುವದಾಗಿ ಕೆಲವರು ಹೇಳಿಕೆ ನೀಡಿದ್ದರು. ಬಡವರ್ಗದವರು ಸ್ಮಶಾನವಾಗಿ ಬಳಸುತ್ತಿರುವ ಈ ಜಮೀನಿನಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಗುಂಪೊಂದು ವಿರೋಧವೊಡ್ಡಿತ್ತು. ಪರಿಣಾಮ ಈ ಬಗ್ಗೆ ಪರ - ವಿರೋಧ ಹೇಳಿಕೆಗಳು ಆಗಾಗ ಮಾಧ್ಯಮಗಳಲ್ಲಿ ಕಾಣಲಾರಂ¨ sÀವಾಗಿತ್ತು.
ಕ್ರೀಡಾಭಿಮಾನಿಗಳ ಸಮಾಗಮ
ವ್ಯಕ್ತಿಯೋರ್ವ ತನ್ನ ಗುಂಪಿನೊಡನೆ ಕ್ರೀಡಾಂಗಣಕ್ಕೆ ಮೀಸಲಿರಿಸಿದ ಜಾಗದಲ್ಲಿಯೇ ಸ್ಮಶಾನಕ್ಕೆ 4 ಏಕರೆ ಜಾಗ ನೀಡಬೇಕೆಂಬ ಬೇಡಿಕೆ ಸ್ಥಳೀಯ ಕ್ರೀಡಾಭಿಮಾನಿಗಳನ್ನು ರೊಚ್ಚಿಗೆಬ್ಬಿಸಿತ್ತು. ಕ್ರೀಡಾಂಗಣಕ್ಕೆ ಮೀಸಲಿರಿಸಲಾದ ಜಾಗದಲ್ಲಿ ಬೆಳಗ್ಗಿನಿಂದಲೇ ಕುತೂಹಲ ಭರಿತರಾದ ಕ್ರೀಡಾಭಿಮಾನಿಗಳು ಜಮಾಯಿಸಿದ್ದರು ಸುಮಾರು 150ಕ್ಕೂ ಅಧಿಕ ಸಂಖ್ಯೆಯಲ್ಲಿ ಗ್ರಾಮಸ್ಥರು- ಸ್ಥಳೀಯರು ನೆರೆದಿದ್ದರು.
ಈ ಸಂದರ್ಭ ಮಡಿಕೇರಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್, ಜಿಲ್ಲಾ ಪಂಚಾಯಿತಿ ಸದಸ್ಯ ಮುರುಳಿ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ಬೊಳ್ಳಮ್ಮ, ಹೊದ್ದೂರು ಪಂಚಾಯಿತಿ ಅಧ್ಯಕ್ಷ ಕುಲ್ಲಚ್ಚನ ದಿನೇಶ್, ಮಾಜಿ ಅಧ್ಯಕ್ಷ ಹಂಸ, ಜಯ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಮುಕ್ಕಾಟಿರ ರಾಬಿನ್, ಹೊದ್ದೂರು ಗ್ರಾಮದ ತಕ್ಕಮುಖ್ಯಸ್ಥರಾದ ನೆರವಂಡ ನಂಜಪ್ಪ, ಮಡಿಕೇರಿ ಆರ್‍ಎಂಸಿ ಸದಸ್ಯ ವಾಂಚೀರ ಜಯಾ ನಂಜಪ್ಪ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು ಭಾಗವಹಿಸಿದ್ದರು. ಪ್ರಬಾರ ರೆವಿನ್ಯೂ ಇನ್ಸ್‍ಪೆಕ್ಟರ್ ಶಿವಕುಮಾರ್ ಇದ್ದರು.
-ಕೂಡಂಡ ರವಿ.