ಮಡಿಕೇರಿ, ಫೆ. 18: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಲಿತರ ಪರ ಸಂಘಟನೆಗಳು ಮಡಿಕೇರಿ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಡಳಿತದ ಮೂಲಕ ಮನವಿ ಸಲ್ಲಿಸಲಾಯಿತು.

ಕೊಡಗು ಜಿಲ್ಲೆಯಲ್ಲಿ ದಲಿತರು, ಕಾರ್ಮಿಕರು, ಬಡವರು, ರೈತರು ಹಾಗೂ ನಿವೇಶನ ರಹಿತರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸರ್ಕಾರ ಬಡವರನ್ನು ಬಡವರಾಗಿಯೇ ಉಳಿಸಿ ಸಿರಿವಂತರನ್ನು ಬೆಳೆಸುತ್ತಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು ರಾಜ್ಯ ಸರ್ಕಾರ 3 ಕೆ.ಜಿ. ಅಕ್ಕಿ ನೀಡುವ ಬದಲು 3 ಎಕರೆ ಭೂಮಿ ಕೊಡಲಿ, ನಾವು ದುಡಿದು ತಿನ್ನುತ್ತೇವೆ. ಸರ್ಕಾರ ಕೊಡುವ ಅಕ್ಕಿಯನ್ನು ನಂಬಿಕೊಂಡು ಇರಲು ಸಾಧ್ಯವಿಲ್ಲ ಎಂದು ಪ್ರತಿಭಟನಾಕಾರರು ಆಗ್ರಹಿಸಿ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಡಳಿತ ಭವನ ಎದುರು ಧರಣಿ ನಡೆಸಿ ತಮ್ಮ ಬೇಡಿಕೆಗಳನ್ನು ಒಂದು ತಿಂಗಳೊಳಗೆ ಈಡೇರಿಸುವಂತೆ ಒತ್ತಾಯಿಸಿ, ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಆರ್. ಪರಶುರಾಮ್, ಬುಡಕಟ್ಟು ಕೃಷಿಕರ ಸಂಘದ ಮುಖಂಡ ಕುಡಿಯರ ಮುತ್ತಪ್ಪ, ಬಹುಜನ ಕಾರ್ಮಿಕ ಸಂಘದ ಮೊಣ್ಣಪ್ಪ, ಯರವ ಸಮುದಾಯದ ಪಿ.ಎಸ್. ಮುತ್ತ ಹಾಗೂ ಇನ್ನಿತರರು ಇದ್ದರು.