ಸೋಮವಾರಪೇಟೆ, ಫೆ. 18: ಇಲ್ಲಿನ ನೇತಾಜಿ ವಿಚಾರ ವೇದಿಕೆ, ಸರಕಾರಿ ಪದವಿಪೂರ್ವ ಕಾಲೇಜು, ಕನ್ನಡ ಸಾಹಿತ್ಯ ಪರಿಷತ್, ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಸಂಘ, ಶರಣ ಸಾಹಿತ್ಯ ಪರಿಷತ್, ಸಿಂಹ ಕೂಟ, ಮಾಜಿ ಸೈನಿಕರ ಸಂಘ ಇವರುಗಳ ಸಂಯುಕ್ತ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದ ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರುಗಳ ಸ್ಮರಣೀಯ ಸಮಾರಂಭ ಜರುಗಿತು.
ಸ್ಥಳೀಯ ಚನ್ನಬಸಪ್ಪ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬೆಂಗಳೂರಿನ ನೇತಾಜಿ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ ಅಧ್ಯಕ್ಷ ಶಿವಶಂಕರ್ ಮಾತನಾಡಿ, ದೇಶದ ದಿವ್ಯ ಚೇತನಗಳನ್ನು ಸ್ಮರಿಸಿ, ಅವರ ಆದರ್ಶಗಳನ್ನು ಪಾಲಿಸುವದು ನಮ್ಮ ಕರ್ತವ್ಯವಾಗಬೇಕು. ದೇಶ ಭಕ್ತಿಯೊಂದಿಗೆ-ಧರ್ಮ ಶಕ್ತಿಯನ್ನು ಬೆಳೆಸಬೇಕು ಎಂದು ಹೇಳಿದರು.
ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಎಂ.ಬಿ. ಅಭಿಮನ್ಯು ಕುಮಾರ್ ಮಾತನಾಡಿದರು. ವೇದಿಕೆಯಲ್ಲಿ ನೇತಾಜಿ ವಿಚಾರ ವೇದಿಕೆಯ ಸಂಚಾಲಕ ಎಸ್.ಸಿ. ರಾಜಶೇಖರ್, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಹಾಲೇಬೇಲೂರು ನಿರ್ವಾಣಿ ಶೆಟ್ಟಿ, ಲಯನ್ಸ್ ಸಂಸ್ಥೆ ಅಧ್ಯಕ್ಷ ಎ.ಎಸ್. ಮಹೇಶ್, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಈರಪ್ಪ, ನಿವೃತ್ತ ಮೇಜರ್ ಮಂದಪ್ಪ, ಜಿ.ಎಂ.ಪಿ. ಶಾಲೆಯ ಮುಖ್ಯ ಶಿಕ್ಷಕಿ ಅಣ್ಣಮ್ಮ, ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಬಾರ ಪ್ರಾಂಶುಪಾಲೆ ತಿಲೋತ್ತಮೆ, ಪೊಲೀಸ್ ವೃತ್ತ ನಿರೀಕ್ಷಕ ಪರಶಿವಮೂರ್ತಿ ಉಪಸ್ಥಿತರಿದ್ದರು.
ಸ್ವರ್ಧಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರು ಹಾಗೂ ನೇತಾಜಿ ವಿಚಾರ ವೇದಿಕೆಯ ಅಧ್ಯಕ್ಷರೂ ಆದ ಎಸ್.ಸಿ. ರಾಜಶೇಖರ್ ಅವರನ್ನು ಸನ್ಮಾನಿಸಲಾಯಿತು.