ಸುಂಟಿಕೊಪ್ಪ, ಫೆ. 18: ಸುಂಟಿಕೊಪ್ಪ ಸರಕಾರಿ ಪದವಿಪೂರ್ವ ಕಾಲೇಜಿನ ನೂತನ ಕಟ್ಟಡದಲ್ಲಿ 2016-17ನೇ ಸಾಲಿನ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಪ್ರಾಧ್ಯಾಪಕರುಗಳು ವಿದ್ಯಾರ್ಥಿಗಳ ಉತ್ತಮ ಫಲಿತಾಂಶವನ್ನು ನಿರೀಕ್ಷಿಸಲಾಗುತ್ತಿದೆ ಎಂದು ಪ್ರಾಂಶುಪಾಲ ಸೋಮಚಂದ್ರ ಹೇಳಿದರು.
ಇಲ್ಲಿನ ಸರಕಾರಿ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದರೆ ಮುಂದಿನ ವಿದ್ಯಾಭ್ಯಾಸಕ್ಕೆ ರಹದಾರಿ ಸುಗಮವಾಗಲಿದೆ, ಕಳೆದ ವರ್ಷ ಕಡಿಮೆ ಫಲಿತಾಂಶ ಬಂದಿದ್ದು, ಈ ಸಾಲಿನಲ್ಲಿ 9 ದಿನ ರಾತ್ರಿ ವೇಳೆ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿಶೇಷ ತರಗತಿಗಳನ್ನು ನಡೆಸಲಾಗಿದೆ. ವಿದ್ಯಾರ್ಥಿಗಳಿಂದ ಉತ್ತಮ ಫಲಿತಾಂಶ ನಿರೀಕ್ಷಿಸಲಾಗಿದೆ ಎಂದರು.
ನೂತನ ಪದವಿಪೂರ್ವ ಕಾಲೇಜಿಗೆ ಮೂಲಭೂತ ಸೌಕರ್ಯಗಳನ್ನು ಆಡಳಿತ ಮಂಡಳಿಯವರ ಕೋರಿಕೆ ಮೇರೆಗೆ ಹಲವು ದಾನಿಗಳು ನೆರವು ನೀಡಿದ್ದಾರೆ, ದಾನಿಗಳ ಸಹಕಾರವನ್ನು ಈ ಸಂದರ್ಭ ನೆನಪಿಸಿಕೊಂಡರು.
ಉದ್ಘಾಟನೆ ನೆರವೇರಿಸಿದ ಕಾಲೇಜಿನ ಆಡಳಿತ ಮಂಡಳಿ ಉಪಾಧ್ಯಕ್ಷ ವಿದ್ಯಾರ್ಥಿಗಳಿಗೆ ಶಿಸ್ತು ಮುಖ್ಯ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಹೆಚ್ಚಿನ ಅಂಕ ಪಡೆಯುವ ಮೂಲಕ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದರೆ ಭವಿಷ್ಯ ಉಜ್ವಲವಾಗಲಿದೆ. ಮಕ್ಕಳ ವಿದ್ಯಾರ್ಜನೆಗೆ ಹೆಚ್ಚಿನ ಒತ್ತು ನೀಡಬೇಕೆಂದು ತಿಳಿ ಹೇಳಿದರು. ಉಪನ್ಯಾಸಕ ಫಿಲಿಪ್‍ವಾಸ್ ಮಾತನಾಡಿ, ವಿದ್ಯಾರ್ಥಿ ಜೀವನ ಬದುಕಿನ ಪ್ರಮುಖ ಘಟ್ಟವಾಗಿದೆ. ಈ ಸಮಯವನ್ನು ಶಿಕ್ಷಣದ ಕಡೆಗೆ ಹೆಚ್ಚಿನ ಗಮನಹರಿಸಿ ಉತ್ತಮ ಅಂಕಗಳಿಸಿ ಪ್ರತಿಯೊಬ್ಬ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ಹೇಳಿದರು.
ಕಾಲೇಜಿನ ಉಪನ್ಯಾಸಕರಾದ ಜಯಶ್ರೀ ಕವಿತಾಭಕ್ತ, ರಾಜೇಶ್ವರಿ, ಮಂಜುಳಾ, ಕವಿತಾ ಹಾಗೂ ಸುಕನ್ಯಾ ಉಪಸ್ಥಿತರಿದ್ದರು. ವಿದ್ಯಾರ್ಥಿ ಜಾಸ್ಮಿನ್ ಸ್ವಾಗತಿಸಿ, ಐಶ್ವರ್ಯ ನಿರೂಪಿಸಿ, ಅಫ್ಸತ್ ವಂದಿಸಿದರು.