ಸುಂಟಿಕೊಪ್ಪ, ಫೆ. 18: ಗೃಹ ಬಳಕೆಯ ಅಡುಗೆ ಅನಿಲ ಎಲ್.ಪಿ.ಜಿ. ಇಂಧನ ಸೇರಿದಂತೆ ನಾವು ದಿನನಿತ್ಯ ಬಳಸುವ ಎಲ್ಲಾ ರೀತಿಯ ಇಂಧನಗಳನ್ನು ಮಿತವಾಗಿ ಬಳಕೆ ಮಾಡುವ ಮೂಲಕ ಇಂಧನ ಸಂರಕ್ಷಣೆ ಬಗ್ಗೆ ಎಲ್ಲರೂ ಜಾಗ್ರತೆ ವಹಿಸಬೇಕು ಎಂದು ಸುಂಟಿಕೊಪ್ಪ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ಬಾಲಕೃಷ್ಣ ಹೇಳಿದರು.
ಸುಂಟಿಕೊಪ್ಪ ಸರ್ಕಾರಿ ಪಿ.ಯು. ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಶಾಲೆಯ ಇಕೋ-ಕ್ಲಬ್, ಗ್ರಾಹಕರ ಕ್ಲಬ್ ಸಹಯೋಗದಲ್ಲಿ ಸುಂಟಿಕೊಪ್ಪ ಇಂಡೇನ್ ಸರ್ವೀಸ್ನ ವತಿಯಿಂದ ಕೇಂದ್ರ ಸರ್ಕಾರದ ಪೆಟ್ರೋಲಿಯಂ ಸಂರಕ್ಷಣಾ ಸಂಶೋಧನಾ ಸಂಘಟನೆಯ ನಿರ್ದೇಶನದಂತೆ ಸ್ವಚ್ಛ ಭಾರತ ಅಭಿಯಾನದಡಿ ‘ಸಾಕ್ಷಂ’ ಇಂಧನ ಸಂರಕ್ಷಣಾ ಮಾಸಿಕಾಚರಣೆ ಅಂಗವಾಗಿ ಏರ್ಪಡಿಸಿದ್ದ ‘ಇಂಧನ ಸಂರಕ್ಷಣೆ’ ಕುರಿತು ಏರ್ಪಡಿಸಿದ್ದ ಜನಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಇಂಧನ ಸಂರಕ್ಷಣೆ ಮತ್ತು ಸುರಕ್ಷತೆ’ ಕುರಿತು ಮಾಹಿತಿ ನೀಡಿದ ಶಾಲೆಯ ಇಕೋ ಕ್ಲಬ್ನ ಸಂಚಾಲಕ ಶಿಕ್ಷಕ ಟಿ.ಜಿ. ಪ್ರೇಮಕುಮಾರ್, ಸಾಂಪ್ರದಾಯಿಕ ಇಂಧನದ ಕೊರತೆ ನೀಗಿಸುವ ದಿಸೆಯಲ್ಲಿ ನಾವು ಪರ್ಯಾಯ ಇಂಧನ ಬಳಕೆಗೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದರು.
ಅಡುಗೆ ಅನಿಲ ಎಲ್ಪಿಜಿ ಇಂಧನದ ಸುರಕ್ಷತಾ ಕ್ರಮಗಳು ಹಾಗೂ ಇಂಧನ ಬಳಕೆ ಮಾಡುವ ಸಂದರ್ಭ ವಹಿಸಬೇಕಾದ ಮುಂಜಾಗ್ರತೆ ಕುರಿತು ಇಂಡೇನ್ ಎಲ್ಪಿಜಿ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳಾದ ಡಿ.ಕೆ. ರಾಕೇಶ್ ಮತ್ತು ಬಿ.ಕೆ. ಮಮತ ಮಾಹಿತಿ ನೀಡಿದರು. ವಿಜ್ಞಾನ ಶಿಕ್ಷಕಿ ಎಂ.ಎನ್. ಲತಾ, ದೈಹಿಕ ಶಿಕ್ಷಕ ಎಸ್.ಟಿ. ವೆಂಕಟೇಶ್ ಇದ್ದರು.