ಶ್ರೀಮಂಗಲ, ಫೆ. 19: ಖಡ್ಡಾಯ ಶಿಕ್ಷಣ ಕಾಯ್ದೆಯಡಿಯಲ್ಲಿ ಖಾಸಗಿ ಶಾಲೆಗಳಿಗೆ ದಾಖಲಾದ ವಿದ್ಯಾರ್ಥಿಗಳ ಶುಲ್ಕ ಮರುಪಾವತಿಯಲ್ಲಿ ಸರಕಾರ ತಾರತಮ್ಯ ದೋರಣೆ ಅನುಸರಿಸುತ್ತಿದೆ ಎಂದು ಕೊಡಗು ಜಿಲ್ಲಾ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟದ ಅಧ್ಯಕ್ಷ ಕೋಳೆರ ಝರು ಗಣಪತಿ ಹಾಗೂ ಕಾರ್ಯದರ್ಶಿ ಕೋಟ್ರಂಗಡ ಎಸ್.ತಿಮ್ಮಯ್ಯ ಪತ್ರಿಕಾ ಹೇಳಿಕೆಯಲ್ಲಿ ದೂರಿದ್ದಾರೆ.

ಸರಕಾರವು ಖಾಸಗಿ ಶಾಲೆಗಳಲ್ಲಿ ಖಡ್ಡಾಯ ಶಿಕ್ಷಣ ಕಾಯ್ದೆಯಡಿಯಲ್ಲಿ ಶೇ. 25 ರಷ್ಟು ಸೀಟುಗಳನ್ನು ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಮೀಸಲಿರಿಸಿದೆ.

ಅದರಂತೆ ಈ ನಿಯಮವನ್ನು ಎಲ್ಲಾ ಖಾಸಗಿ ಅನುದಾನರಹಿತ ಶಾಲೆಗಳು ಪಾಲನೆ ಮಾಡುತ್ತಿದ್ದು, ವಿದ್ಯಾರ್ಥಿಗಳನ್ನು ದಾಖಲೆ ಮಾಡಿಕೊಳ್ಳುತ್ತಿದೆ. ಆದರೆ ಸರಕಾರವು ಆ ವಿದ್ಯಾರ್ಥಿಗಳ ಶುಲ್ಕ ಮರುಪಾವತಿ ಮಾಡುವಾಗ ಅನುದಾನ ರಹಿತ ಖಾಸಗಿ ಶಾಲೆಗಳಿಗೆ ಕಡಿಮೆ ಮೊತ್ತವನ್ನು ಮರುಪಾವತಿ ಮಾಡುತ್ತಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಶಾಲಾ ಶುಲ್ಕ ಕಡಿಮೆ ಇರುವದರಿಂದ ವರ್ಷದಿಂದ ವರ್ಷಕ್ಕೆ ಆರ್.ಟಿ.ಇ ಅಡಿಯಲ್ಲಿ ದಾಖಲಾಗುವ ಮಕ್ಕಳ ಸಂಖ್ಯೆ ಹೆಚ್ಚುತ್ತಿರುವದರಿಂದ ಶಾಲೆಗೆ ದೊರಕುವ ಮರುಪಾವತಿ ಮೊತ್ತ ತುಂಬಾ ಕಡಿಮೆಯಾಗುತ್ತಿದ್ದು, ಶಾಲಾ ನಿರ್ವಹಣೆಗೆ ತೊಂದರೆಯಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳಲ್ಲಿ ಎಲ್ಲಾ ಶಾಲೆಗಳಿಗೂ ಶಾಲಾ ನಿರ್ವಹಣಾ ವೆಚ್ಚವನ್ನು ಸರಿದೂಗಿಸಲು ಸರಕಾರವು ನಿಗದಿಪಡಿಸಿದ ಗರಿಷ್ಠ ಮೊತ್ತವನ್ನು ಎಲ್ಲಾ ಶಾಲೆಗೂ ಒಂದೇ ರೀತಿಯಲ್ಲಿ ಮರುಪಾವತಿಸಲು ಕ್ರಮ ಕೈಗೊಳ್ಳಬೇಕಾಗಿ ಅವರು ಒತ್ತಾಯಿಸಿದ್ದಾರೆ.