ಮಡಿಕೇರಿ, ಫೆ. 19: ಮೂಲ ನಿವಾಸಿ ಪರಿಶಿಷ್ಟ ಪಂಗಡದವರಾದ ಜೇನುಕುರುಬ ಹಾಗೂ ಕೊರಗ ಸಮುದಾಯದ ವಿದ್ಯಾವಂತ ಯುವಕ/ಯುವತಿಯರಿಗೆ ಶೈಕ್ಷಣಿಕ ಪ್ರೋತ್ಸಾಹ ಧನ ಮತ್ತು ನಿರುದ್ಯೋಗಿಗಳಿಗೆ ಜೀವನ ಭತ್ಯೆ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಜೇನುಕುರುಬ ಮತ್ತು ಕೊರಗ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹಧನದ ವಿವರ: ಎಸ್.ಎಸ್.ಎಲ್.ಸಿ. ರೂ. 10 ಸಾವಿರ, ಪಿ.ಯು.ಸಿ. ಮತ್ತು ತತ್ಸಮಾನ ಕೋರ್ಸ್‍ಗಳು (ಪ್ರತಿ ವರ್ಷಕ್ಕೆ) ರೂ. 12 ಸಾವಿರ, ಎಲ್ಲಾ ಪದವಿ ಕೋರ್ಸ್‍ಗಳು (ಪ್ರತಿ ವರ್ಷಕ್ಕೆ) ರೂ. 15 ಸಾವಿರ ಹಾಗೂ ಎಲ್ಲಾ ಸ್ನಾತಕೋತ್ತರ ಕೋರ್ಸ್‍ಗಳು(ಪ್ರತಿ ವರ್ಷಕ್ಕೆ) ರೂ. 18 ಸಾವಿರ ಆಗಿರುತ್ತದೆ.

ಷರತ್ತುಗಳು: ಅಭ್ಯರ್ಥಿಗಳು ವ್ಯಾಸಂಗ ಮಾಡುತ್ತಿರುವ ಬಗ್ಗೆ ಸಂಬಂಧಿಸಿದ ಶೈಕ್ಷಣಿಕ ಸಂಸ್ಥೆಯ ಮುಖ್ಯಸ್ಥರಿಂದ ದೃಡೀಕರಣ ಪತ್ರ ಲಗತ್ತಿಸುವದು. ಈ ಎಲ್ಲಾ ಕೋರ್ಸ್‍ಗಳಲ್ಲಿ ಅಭ್ಯರ್ಥಿಗಳು ವ್ಯಾಸಂಗವನ್ನು ಮುಂದುವರಿಸದೇ ನಿಲ್ಲಿಸಿದ್ದಲ್ಲಿ ಅಂತಹ ಅಭ್ಯರ್ಥಿಗಳ ಶೈಕ್ಷಣಿಕ ಪ್ರೋತ್ಸಾಹ ಧನವನ್ನು ರದ್ದುಪಡಿಸಲಾಗುವದು. ಅರ್ಜಿಯೊಂದಿಗೆ ಜಾತಿ ಪ್ರಮಾಣ ಪತ್ರವನ್ನು ಸಲ್ಲಿಸುವದು.

ಜೇನುಕುರುಬ ಮತ್ತು ಕೊರಗ ವಿದ್ಯಾವಂತ ಯುವಕ, ಯುವತಿಯರಿಗೆ ನೀಡುವ ನಿರುದ್ಯೋಗಿ ಜೀವನ ಭತ್ಯೆ ವಿವರ: ಎಸ್.ಎಸ್.ಎಲ್.ಸಿ. ರೂ. 2 ಸಾವಿರ, ಪಿ.ಯು.ಸಿ. ಮತ್ತು ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾದವರಿಗೆ ರೂ. 2,500, ಎಲ್ಲಾ ಪದವಿ ಕೋರ್ಸ್‍ಗಳಲ್ಲಿ ತೇರ್ಗಡೆಯಾದವರಿಗೆ ರೂ. 3,500 ಹಾಗೂ ಎಲ್ಲಾ ಸ್ನಾತಕೋತ್ತರ ಕೋರ್ಸ್‍ಗಳಲ್ಲಿ ತೇರ್ಗಡೆಯಾದವರಿಗೆ ರೂ. 4,500 ಆಗಿರುತ್ತದೆ.

ಷರತ್ತು: ನಿರುದ್ಯೋಗ ಜೀವನ ಭತ್ಯೆಗೆ ಗರಿಷ್ಠ ವಯೋಮಿತಿ 40 ವರ್ಷದ ಒಳಗಿರತಕ್ಕದ್ದು. ನಿರುದ್ಯೋಗಿಯೆಂದು ನೋಟರಿ ಯಿಂದ ಅಫಿಡವಿಟ್‍ನ್ನು ಪಡೆದು ಬಯೋಡಾಟಾದೊಂದಿಗೆ ಸಲ್ಲಿಸ ತಕ್ಕದ್ದು. ಜೀವನ ಭತ್ಯೆಯನ್ನು ಸರ್ಕಾರ, ಖಾಸಗಿ, ಸ್ವಯಂ ಉದ್ಯೋಗಗಳಡಿ ಉದ್ಯೋಗ ದೊರಕಿದೆ ಅಥವಾ ಮೂರು ವರ್ಷಗಳ ಅವಧಿಗೆ ಯಾವದು ಮೊದಲು ಅಲ್ಲಿಯವರೆಗೆ ಮಾತ್ರ ಸೀಮಿತ, ಜೀವನ ಭತ್ಯೆಯನ್ನು ಮಂಜೂರಾತಿಗೆ ಅಭ್ಯರ್ಥಿಗಳ ವಿವರ, ಶೈಕ್ಷಣಿಕ ವಿದ್ಯಾರ್ಹತೆ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ಅಫಿಡವಿಟ್ ದಾಖಲಾತಿಗಳನ್ನು ಸಲ್ಲಿಸುವದು.

ಯೋಜನಾ ಸಮನ್ವಯಾಧಿಕಾರಿಗಳು, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ, ಕೊಡಗು ಜಿಲ್ಲೆ, ಮಡಿಕೇರಿ-08272-229983, ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ, ಪೊನ್ನಂಪೇಟೆ-08274-261261, ಸಹಾಯಕ ನಿರ್ದೇಶಕರು(ಗ್ರೇಡ್-1), ಸಮಾಜ ಕಲ್ಯಾಣ ಇಲಾಖೆ, ಮಡಿಕೇರಿ-08272-223552 ಹಾಗೂ ಸಹಾಯಕ ನಿರ್ದೇಶಕರು (ಗ್ರೇಡ್-2), ಸಮಾಜ ಕಲ್ಯಾಣ ಇಲಾಖೆ, ಸೋಮವಾರಪೇಟೆ-08276-281115 ಇಲ್ಲಿಂದ ಅರ್ಜಿ ಪಡೆಯಬಹುದು ಎಂದು ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯ ಯೋಜನಾ ಸಮನ್ವಯಾಧಿಕಾರಿ ತಿಳಿಸಿದ್ದಾರೆ.