ಸೂರ್ಯಸೇನ್ ಮಾಹಿತಿ

ಕುಶಾಲನಗರ, ಫೆ 19: ದುಬಾರೆ ಸಾಕಾನೆ ಶಿಬಿರಕ್ಕೆ ತೂಗುಸೇತುವೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಡಿಕೇರಿ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೂರ್ಯಸೇನ್ ತಿಳಿಸಿದ್ದಾರೆ. ಅವರು ಕುಶಾಲನಗರದ ಗಂಧದಕೋಟಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ದುಬಾರೆಯಲ್ಲಿ ಮೋಟಾರ್ ಬೋಟುಗಳ ಮೂಲಕ ಕಾವೇರಿ ನದಿ ಕಲುಷಿಕೆಗೊಳ್ಳುತ್ತಿರುವ ಬಗ್ಗೆ ದೂರುಗಳು ಬಂದಿದ್ದು ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಪರಿಶೀಲನೆಗೆ ಸೂಚನೆ ನೀಡಲಾಗಿದೆ. ಅಂದಾಜು 60 ರಿಂದ 75 ಲಕ್ಷ ರೂಗಳ ವೆಚ್ಚದಲ್ಲಿ ನಿರ್ಮಾಣವಾಗಲಿರುವ ತೂಗುಸೇತುವೆ ಯೋಜನೆಗೆ ಇಲಾಖೆಯಲ್ಲಿ ಹಣದ ಕೊರತೆಯಿದ್ದು ಈ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು ಎಂದು ಸೂರ್ಯಸೇನ್ ತಿಳಿಸಿದ್ದಾರೆ.

ದುಬಾರೆ ಸಾಕಾನೆ ಶಿಬಿರದಲ್ಲಿ ಆನೆಗಳ ಸಂಖ್ಯೆ ಅಧಿಕವಾಗಿದ್ದು ನಿರ್ವಹಣೆ ಕಾರ್ಯ ಕೂಡ ದುಸ್ಥರವಾಗಿದೆ ಎಂದು ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಎರಡನೇ ಶಿಬಿರ ಪ್ರಾರಂಭಿಸಲು ಪ್ರಸ್ತಾವನೆ ಇಲಾಖೆಯಲ್ಲಿದ್ದು ಮುಂದಿನ ದಿನಗಳಲ್ಲಿ ಯೋಜನೆ ರೂಪುಗೊಳ್ಳಲಿದೆ. ಸಾಕಾನೆ ಶಿಬಿರಕ್ಕೆ ಪ್ರವಾಸಿಗರ ಆಗಮನದ ಸಂಖ್ಯೆ ಕೂಡ ಅಧಿಕವಾಗಿದ್ದು ಇದೂ ಕೂಡ ಸಿಬ್ಬಂದಿಗಳಿಗೆ ತಲೆನೋವಾಗಿ ಪರಿಣಮಿಸಿದೆ ಎಂದು ಅವರು ತಿಳಿಸಿದ್ದಾರೆ.

ದುಬಾರೆ ಸಾಕಾನೆ ಶಿಬಿರದಿಂದ ಉತ್ತರಾಖಂಡ್ ರಾಜ್ಯಕ್ಕೆ 3 ಸಾಕಾನೆಗಳನ್ನು ಸಾಗಿಸಲು ಸರಕಾರದಿಂದ ಅನುಮತಿ ದೊರೆತಿದೆ. ಇದರೊಂದಿಗೆ ಮಧ್ಯಪ್ರದೇಶ, ಜಾರ್ಖಂಡ್ ಇತರೆ ರಾಜ್ಯಗಳಿಂದಲೂ ಸಾಕಾನೆಗಳಿಗೆ ಬೇಡಿಕೆ ಬಂದಿದೆ ಎಂದು ಅವರು ಮಾಹಿತಿ ನೀಡಿದರು.

ಈ ಸಂದರ್ಭ ಸೋಮವಾರಪೇಟೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್. ಚಿಣ್ಣಪ್ಪ ಇದ್ದರು.