ಗೋಣಿಕೊಪ್ಪಲು, ಫೆ. 19: ಗೋಣಿಕೊಪ್ಪಲು ಕಾವೇರಿ ಕಾಲೇಜಿನ ರಾಷ್ಟೀಯ ಸೇವಾ ಯೋಜನಾ ಘಟಕ ಹಾಗೂ ರೆಡ್ ರಿಬ್ಬನ್ ಕ್ಲಬ್ ಇವರ ಸಂಯುಕ್ತಾಶ್ರಯದಲ್ಲಿ ್ಲ ರಕ್ತದಾನ ಶಿಬಿರ ಮತ್ತು ಏಡ್ಸ್ ಜಾಗೃತಿ ಶಿಬಿರವನ್ನು ಏರ್ಪಡಿಸಲಾಗಿತ್ತು.

ಕೊಡಗು ಜಿಲ್ಲಾ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಶಶಿ ಸುಬ್ರಮಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ “ವಿದ್ಯಾರ್ಥಿಗಳು ಮಾದಕ ವಸ್ತುವಿನ ವ್ಯಾಮೋಹಕ್ಕೆ ಬಲಿಯಾಗದೆ, ಇದರಿಂದ ಉಂಟಾಗಬಹುದಾದ ಕೆಟ್ಟ ಪರಿಣಾಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ರಸ್ತೆಯಲ್ಲಿ ಅಪಘಾತಕ್ಕೊಳಗಾದವರನ್ನು ತಕ್ಷಣ ಆಸ್ಪತ್ರೆಗೆ ಸೇರಿಸುವ ಮೂಲಕ ರಕ್ತಸ್ರಾವದಿಂದ ಆಗಬಹುದಾದ ಸಾವನ್ನು ತಪ್ಪಿಸಬಹುದು” ಎಂದರು. ಮಡಿಕೇರಿ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿಗಳಾದ

ಡಾ. ನಾಗಲಕ್ಷ್ಮಿ ರಕ್ತದಾನ ಮಾಡುವದರಿಂದ ಆಗುವ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿದರು.

ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಮೇಲ್ವಿಚಾರಕಿ ಕೂಪದಿರ ಸುನಿತಾ ಮುತ್ತಣ್ಣ ಏಡ್ಸ್ ಹರಡುವ ಬಗೆ ಹಾಗೂ ಅದರ ನಿಯಂತ್ರಣದ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.

ರಕ್ತದಾನ ಶಿಬಿರದಲ್ಲಿ 45 ವಿದ್ಯಾರ್ಥಿಗಳು ರಕ್ತದಾನ ಮಾಡಿದರು.

ಪ್ರಾಂಶುಪಾಲರಾದ ಪ್ರೊ. ಪಟ್ಟಡ ಪೂವಣ್ಣ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ರಾಷ್ಟ್ರೀಯ ಸೇವಾಯೋಜನಾಧಿಕಾರಿಗಳಾದ ಎಂ.ಎನ್. ವನಿತ್ ಕುಮಾರ್ ಮತ್ತು ಎನ್.ಪಿ ರೀತಾ ಆಯೋಜಿಸಿದ್ದರು. ಮಡಿಕೇರಿ ರಕ್ತನಿಧಿ ಕೇಂದ್ರದ ಸಿಬಂದಿಗಳಾದ ಪಂಚಲಿಂಗೇಶ್ವರ್, ಸುನೀಲ್, ದೇವದಾಸ್, ಶ್ರುತಿ, ಮನೋಜ್, ರವಿಬಾಬು ಕಾರ್ಯನಿರ್ವಹಿಸಿದರು.