ಶನಿವಾರಸಂತೆ, ಫೆ. 19: ಕೊಡ್ಲಿಪೇಟೆ-ಬ್ಯಾಡಗೊಟ್ಟ ರಾಜ್ಯ ಹೆದ್ದಾರಿಯ ಚರಂಡಿಯಲ್ಲಿ ವಿದ್ಯುತ್ ಕಂಬಗಳನ್ನು ಇಲಾಖೆ ಅವೈಜ್ಞಾನಿಕವಾಗಿ ಅಳವಡಿಸಿದ್ದು, ರಸ್ತೆಯ ಬದಿಯಲ್ಲಿರುವ ಮರದ ಕೊಂಬೆಗಳನ್ನು ಕಡಿದು ರಸ್ತೆಯಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಗಿದೆ ಎಂದು ತಾಲೂಕು ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಹೆಚ್.ಎಂ. ಅಬ್ಬಾಸ್ ಹಾಗೂ ವಲಯ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಹನೀಫ್ ದೂರಿದ್ದಾರೆ.

ಈ ಕಾಮಗಾರಿಯಿಂದ ನೀರಿನ ಪೈಪ್‍ಲೈನ್‍ಗಳಿಗೆ ತೊಂದರೆಯಾಗುತ್ತಿದ್ದು, ರಾಜ್ಯ ಹೆದ್ದಾರಿಯು ಮುಂದಿನ ದಿನಗಳಲ್ಲಿ ವಿಸ್ತರಣೆಯಾಗಲಿದ್ದು, ಪಿ.ಡಬ್ಲ್ಯೂ.ಡಿ. ಇಲಾಖೆಯ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿ ವಿದ್ಯುತ್ ಕಂಬಗಳನ್ನು ಅಳವಡಿಸಲಾಗಿದೆ.

ಇದರಿಂದ ಮೇಲಧಿಕಾರಿಗಳು ಮತ್ತು ಪಿ.ಡಬ್ಲ್ಯೂ.ಡಿ. ಇಲಾಖೆಯವರ ವೈಫಲ್ಯ ಎದ್ದು ಕಾಣುತ್ತಿದೆ. ವಿದ್ಯುತ್ ಇಲಾಖೆಯವರು ರಸ್ತೆಯ ಬದಿಯಲ್ಲಿಯ ಮರಗಳನ್ನು ಕಡಿದಿದ್ದು, ಈ ಬಗ್ಗೆ ಅರಣ್ಯ ಇಲಾಖೆಯವರು ಗಮನಹರಿಸಿ ರಸ್ತೆ ಸಂಚಾರಕ್ಕೆ ಅಡಚಣೆಯಾಗುತ್ತಿರುವ ಮರದ ದಿಮ್ಮಿಗಳನ್ನು ತಕ್ಷಣ ತೆರವುಗೊಳಿಸಿ ಕ್ರಮ ಕೈಗೊಳ್ಳುವಂತೆ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗಿದೆ ಎಂದು ಅವರು ‘ಶಕ್ತಿ’ಯೊಂದಿಗೆ ತಿಳಿಸಿದ್ದಾರೆ.