ನಾಪೋಕ್ಲು, ಫೆ. 19: ಸ್ಥಳೀಯ ತೋಟಗಾರಿಕೆ ಇಲಾಖೆಯ ಅಧೀನದ ಜಮೀನಿನಲ್ಲಿರುವ ಕರಿಮೆಣಸು ಫಸಲು ಹರಾಜು ಪ್ರಕ್ರಿಯೆ ಸ್ಥಳೀಯ ಇಲಾಖೆ ಆವರಣದಲ್ಲಿ ಜರುಗಿತು. ಹರಾಜಿಗೆ ಇಲ್ಲಿನ ಸುತ್ತಮುತ್ತಲಿನ ಸುಮಾರು 75ಕ್ಕೂ ಅಧಿಕ ವ್ಯಾಪಾರಿಗಳು ಸೇರಿದ್ದು, 29 ಮಂದಿ ನೋಂದಾಯಿಸಿ ಹರಾಜಿನಲ್ಲಿ ಭಾಗವಹಿಸಿದರು. ಕೊನೆಗೆ 3 ಲಕ್ಷದ 13 ಸಾವಿರ ರೂ.ಗಳಿಗೆ ಸ್ಥಳೀಯ ನಿವಾಸಿಯೋರ್ವರು ಖರೀದಿಸಿದರು.
ಈ ಹಿಂದೆ ಕಡಿಮೆ ಮೊತ್ತಕ್ಕೆ ಬಿಕರಿ ಆಗುತ್ತಿದ್ದು, ಈ ಬಾರಿ ಜಿಲ್ಲಾ ಪಂಚಾಯಿತಿ ಸದಸ್ಯ ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ ಖುದ್ದು ಹಾಜರಿದ್ದು ಅಕ್ರಮಗಳಿಗೆ ಅವಕಾಶ ಇಲ್ಲದೇ ನೇರವಾಗಿ ಹರಾಜು ನಡೆಸಲಾಗಿದೆ. ಇದುವರೆಗೂ ದೊರಕದ ಅತೀ ಹೆಚ್ಚಿನ ಮೊತ್ತ ತೋಟಗಾರಿಕಾ ಇಲಾಖೆಗೆ ದೊರೆತಂತಾಗಿದೆ. ಈ ಸಂದರ್ಭ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಪ್ರಮೋದ್ ಮತ್ತು ಇಲಾಖೆಯ ಸಿಬ್ಬಂದಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.