ಸೋಮವಾರಪೇಟೆ, ಫೆ. 19: ಕಾಡಾನೆಗಳನ್ನು ಕಾಡಿಗಟ್ಟಲು ಹೋದವರ ಮೇಲೆ ಕಾಡಾನೆ ಧಾಳಿ ನಡೆಸಿದ ಪರಿಣಾಮ ವ್ಯಕ್ತಿಯೋರ್ವ ಗಾಯಗೊಂಡಿರುವ ಘಟನೆ ಸಮೀಪದ ನಗರಳ್ಳಿ ಗ್ರಾಮದಲ್ಲಿ ನಡೆದಿದೆ.ನಗರಳ್ಳಿ ಗ್ರಾಮದ ತೀರ್ಥಾನಂದ ಗಾಯಗೊಂಡ ಯುವಕ. ಐದು ಮಂದಿ ಅರಣ್ಯ ಇಲಾಖೆಯ ಸಿಬ್ಬಂದಿ ಗಳೊಂದಿಗೆ ಕೆಲ ಗ್ರಾಮಸ್ಥರು, ಗ್ರಾಮ ದಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಕಾಡಿಗಟ್ಟಲು ಪ್ರಯತ್ನ ಮಾಡಿದ್ದಾರೆ. ಪಟಾಕಿ ಸಿಡಿಸುತ್ತ ತೆರಳುತ್ತಿರುವಾಗ ಹೆಣ್ಣಾನೆಯೊಂದು ಜನರ ಕಡೆಗೆ ಧಾವಿಸಿದೆ. ಕೋವಿ ಹಿಡಿದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಓಡಿ ತಪ್ಪಿಸಿಕೊಂಡಿದ್ದಾರೆ. ಕೆಲವರು ಮರಗಳನ್ನು ಹತ್ತಿ ಬಚಾವಾಗಿದ್ದಾರೆ. ಇನ್ನು ಕೆಲವರು ಓಡಲಾಗದೆ ನಿಂತಿ ದ್ದಾರೆ. ಈ ಸಂದರ್ಭ ತೀರ್ಥಾನಂದ ಅವರು ಪಕ್ಕಕ್ಕೆ ಬಂದ ಕಾಡಾನೆ ಸೊಂಡಿಲಿನಿಂದ ಘಾಸಿಗೊಳಿಸಿ, ತೋಟದೊಳಕ್ಕೆ ನುಗ್ಗಿತು ಎಂದು ಗಾಯಾಳು ಹೇಳಿದ್ದಾರೆ. ಹಣೆ ಭಾಗಕ್ಕೆ ಗಾಯವಾಗಿರುವ ತೀರ್ಥಾನಂದನಿಗೆ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಬಿಸಿಲೆ ಅರಣ್ಯದಿಂದ ಆಹಾರ ಅರಸುತ್ತ ಗ್ರಾಮಕ್ಕೆ ಆಗಮಿಸಿರುವ ಕಾಡಾನೆಗಳ ಹಿಂಡು, ಬಾಳೆ ಸೇರಿದಂತೆ ತರಕಾರಿಗಳನ್ನು ತಿನ್ನುತ್ತಿವೆ. ಕಾಡಾನೆಗಳು ಹಗಲಿನ ವೇಳೆಯಲ್ಲಿ ರಸ್ತೆಯಲ್ಲೇ ಕಾಣಿಸಿಕೊಳ್ಳುತ್ತಿರು ವದರಿಂದ ಮಹಿಳೆಯರು ಮಕ್ಕಳು ಭಯಗೊಂಡಿದ್ದಾರೆ ಎಂದು ಗ್ರಾಮಸ್ಥರು ಹೇಳಿದರು.
ಕೂತಿ, ಕುಂದಳ್ಳಿ ಗ್ರಾಮಗಳಲ್ಲೂ ಕಾಡಾನೆ ಹಾವಳಿ ಮಿತಿಮೀರಿದೆ. ಕೂಡಲೆ ಕಾಡಾನೆಗಳ ಹಾವಳಿಯಿಂದ ಕೃಷಿಕರನ್ನು ಪಾರುಮಾಡಲು ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಅರಣ್ಯ ಇಲಾಖೆಯನ್ನು ಆಗ್ರಹಿಸಿದ್ದಾರೆ.