ನಾಲ್ವರು ಕಾರ್ಮಿಕರ ಸಜೀವ ದಹನ

ಭೀವಂಡಿ(ಮಹಾರಾಷ್ಟ್ರ), ಫೆ. 19: ಮಹಾರಾಷ್ಟ್ರದ ಭೀವಂಡಿಯಲ್ಲಿರುವ ಪ್ಲಾಸ್ಟಿಕ್ ಗೋದಾಮಿನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು ನಾಲ್ವರು ಕಾರ್ಮಿಕರು ಸಜೀವ ದಹನವಾಗಿದ್ದಾರೆ. ಶಾರ್ಟ್ ಸಕ್ಯೂಟ್ ನಿಂದಾಗಿ ಅಗ್ನಿ ಅವಘಡ ಸಂಭವಿಸಿದೆ ಎಂದು ಅಗ್ನಿಶಾಮಕ ಸಿಬ್ಬಂದಿ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಗ್ನಿ ದುರಂತದಲ್ಲಿ ನಾಲ್ವರು ಸಜೀವ ದಹನವಾಗಿದ್ದು ಇಬ್ಬರಿಗೆ ಗಂಭೀರ ಸುಟ್ಟ ಗಾಯಗಳಾಗಿವೆ.

ಚಾಮರಾಜೇಶ್ವರ ದೇವಾಲಯದ ರಥಕ್ಕೆ ಬೆಂಕಿ

ಚಾಮರಾಜನಗರ, ಫೆ. 19: ಚಾಮರಾಜನಗರ ಪ್ರಸಿದ್ಧ ಚಾಮರಾಜೇಶ್ವರ ದೇವಾಲಯದ ರಥಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಚಾಮರಾಜೇಶ್ವರ ದೇವಾಲಯ ಚಾಮರಾಜನಗರ ಇತಿಹಾಸ ಪ್ರಸಿದ್ಧ ದೇವಾಲಯವಾಗಿದ್ದು ಆಷಾಢ ಮಾಸದಲ್ಲಿ ಇಲ್ಲಿ ರಥೋತ್ಸವ ನಡೆಯುತ್ತಿತ್ತು. ಆದರೆ ಮಧ್ಯರಾತ್ರಿ ಕಿಡಿಗೇಡಿಗಳು ರಥಕ್ಕೆ ಬೆಂಕಿ ಹಚ್ಚಿದ್ದು ಈ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸುದ್ದಿ ತಿಳಿದ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. ಬೆಂಕಿಯಿಂದಾಗಿ ರಥದ ಎಡಭಾಗಕ್ಕೆ ಹಾನಿಯಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೆÇಲೀಸರು ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ್ದಾರೆ.

ಪಾಕ್ ಗಡಿಯಲ್ಲಿ ಕಂಡಲ್ಲಿ ಗುಂಡು

ಇಸ್ಲಾಮಾಬಾದ್, ಫೆ. 19: ತೊರ್ಕಾಮ್ ಮತ್ತು ಚಮನ್ ಪ್ರದೇಶಗಳಲ್ಲಿ ಪಾಕಿಸ್ತಾನ-ಆಫ್ಘಾನಿಸ್ಥಾನ ಗಡಿ ಮುಚ್ಚಿದ್ದು, ಪಾಕಿಸ್ತಾನಕ್ಕೆ ಅನಧಿಕೃತವಾಗಿ ನುಸುಳುವವರಿಗೆ ಕಂಡಲ್ಲಿ ಗುಂಡು ಹಾರಿಸುವ ಆದೇಶವನ್ನು ಅಧಿಕಾರಿಗಳು ಹೊರಡಿಸಿದ್ದಾರೆ. ಸಿಂಧ್ ಪ್ರಾಂತ್ಯದ ಲಾಲ್ ಶಾಬಾಜ್ ಕಲಂದರ್ ನಲ್ಲಿ ನಡೆದ ಆತ್ಮಹತ್ಯಾ ಬಾಂಬ್ ಸ್ಫೋಟದಲ್ಲಿ 90 ಜನ ಮೃತಪಟ್ಟು 200 ಕ್ಕೂ ಹೆಚ್ಚು ಜನ ಗಾಯಗೊಂಡ ಹಿನ್ನೆಲೆ ಭದ್ರತಾ ಕಾರಣಗಳಿಗಾಗಿ ಶುಕ್ರವಾರ ರಾತ್ರಿಯಿಂದ ಚಮನ್‍ನಲ್ಲಿನ ಗೆಳೆತನದ ಗೇಟ್ ಅನ್ನು ಮುಚ್ಚಲಾಗಿದೆ. ನಿರಂತರ ಎರಡನೇ ದಿನವೂ ಎರಡು ದೇಶಗಳ ನಡುವೆ ವಾಹನ ಓಡಾಟ ಮತ್ತು ವಸ್ತು ಸಾಗಾಣೆ ರದ್ದು ಮಾಡಲಾಗಿದೆ ಎಂದು ಡಾನ್ ಆನ್ಲೈನ್ ಪತ್ರಿಕೆ ವರದಿ ಮಾಡಿದೆ. “ಗಡಿಯ ಯಾವದೇ ಪ್ರದೇಶದಿಂದ ಅನಧಿಕೃತವಾಗಿ ಪಾಕಿಸ್ತಾನಕ್ಕೆ ನುಸುಳುವವರನ್ನು ಕಂಡಲ್ಲಿ ಗುಂಡು ಹೊಡೆದು ಹತ್ಯೆ ಮಾಡುವದಕ್ಕೆ ಆದೇಶಿಸಾಲಾಗಿದೆ” ಎಂದು ಭದ್ರತಾ ಅಧಿಕಾರಿಯೊಬ್ಬರು ಹೇಳಿದ್ದಾರೆ. “ಅನಿರ್ಧಿಷ್ಟ ಕಾಲದವರೆಗೆ ಗೆಳೆತನದ ಗೇಟ್ ಅನ್ನು ಮುಚ್ಚಲಾಗಿದೆ” ಎಂದು ಫ್ರಾಂಟಿಯರ್ ಕಾಪ್ರ್ಸ್ ವಕ್ತಾರ ಹೇಳಿದ್ದಾರೆ. ಪಾಕಿಸ್ತಾನದಲ್ಲಿ ನಡೆದ ಭಯೋತ್ಪಾದಕ ಘಟನೆ ವಿರೋಧಿಸಿ ಪ್ರತಿಭಟನೆಗಳು ನಡೆಯುತ್ತಿರುವದರಿಂದ ಅಫ್ಘಾನಿಸ್ತಾನದ ಗಡಿಯ ವಾಷ್ ಮಂಡಿ ಪ್ರದೇಶದ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದ್ದು, ಚಮನ್‍ನಲ್ಲಿ ಕೂಡ ಮಾರಾಟಗಾರರು ಅಂಗಡಿಗಳನ್ನು ತೆರೆದಿಲ್ಲ.

ಹಾಡಹಗಲೇ ಟಿವಿ ವರದಿಗಾರನಿಗೆ ಇರಿತ

ಮಧುರೈ, ಫೆ. 19: ಟಿವಿ ಪತ್ರಕರ್ತನಿಗೆ ಹಾಡಹಗಲೇ ರಸ್ತೆ ಮಧ್ಯದಲ್ಲಿ ಗಾಂಜಾ ತಂಡವೊಂದು ಹೊಟ್ಟೆಗೆ ಇರಿದಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಪಾಲಿಮಾರ್ ಟಿವಿ ಚಾನೆಲ್ ವರದಿಗಾರ ಆರ್. ಚಂದನ್ ಎಂಬವರಿಗೆ ಮಧುರೈನ ತಮ್ಮ ಮನೆಯ ಪಕ್ಕದ ಅಂಗಡಿವೊಂದರಲ್ಲಿ ಸಾಮಾನು ಖರೀದಿಸುವ ವೇಳೆ ಬಂದ ತಂಡವೊಂದು ಹೊಟ್ಟೆಗೆ ಇರಿದಿದೆ. ಬೆಳಿಗ್ಗೆ 7.30 ರ ಸುಮಾರಿಗೆ ತಮ್ಮ ಮನೆಯ ಪಕ್ಕದ ಅಂಗಡಿಯಲ್ಲಿ ಹಾಲು ಖರೀದಿಸಿ ಬರುತ್ತಿದ್ದಾಗ ದಾರಿಯಲ್ಲಿ ಚಂದ್ರನ್ ಅವರನ್ನು ಸುತ್ತುವರಿದ ತಂಡವೊಂದು, ಚಾಕುವಿನಿಂದ ಇರಿದು ಪರಾರಿಯಾಗಿದೆ, ಈ ಹಿಂದೆ ಗಾಂಜಾ ಗ್ಯಾಂಗ್ ವೊಂದರ ವಿರುದ್ಧ ಚಂದ್ರನ್ ದೂರು ದಾಖಲಿಸಿದ್ದರು. ಅದರ ದ್ವೇಷಕ್ಕಾಗಿ ಈ ಕೃತ್ಯ ನಡೆದಿರಬಹುದು ಎಂದು ಪೆÇಲೀಸರು ಶಂಕಿಸಿದ್ದಾರೆ.

ಗುಣಮಟ್ಟದ ನಕಲಿ ನೋಟುಗಳ ಮುದ್ರಣ

ನವದೆಹಲಿ, ಫೆ. 19: ಭಾರತೀಯ ಅರ್ಥವ್ಯವಸ್ಥೆಯನ್ನೇ ಬುಡಮೇಲು ಮಾಡಲು ಪಣತೊಟ್ಟಿರುವ ಪಾಕಿಸ್ತಾನ ಇದೀಗ ಆರ್‍ಬಿಐನ ಹೊಸ 2000 ರೂ. ಮುಖಬೆಲೆಯ ನೋಟುಗಳನ್ನೂ ಕೂಡ ನಕಲು ಮಾಡುತ್ತಿದೆ ಎಂದು ಮೂಲಗಳು ತಿಳಿಸಿವೆ. ಅಘಾತಕಾರಿ ಅಂಶವೆಂದರೆ ಆರ್‍ಬಿಐ ಮುದ್ರಿಸುತ್ತಿರುವ ನೋಟುಗಳಿಗಿಂತಲೂ ಉತ್ತಮ ಗುಣಮಟ್ಟದ ನಕಲಿ ನೋಟುಗಳನ್ನು ಪಾಕಿಸ್ತಾನದ ಸಂಸ್ಥೆ ಐಎಸ್‍ಐ ಮುದ್ರಿಸುತ್ತಿದೆ ಎಂದು ತಿಳಿದುಬಂದಿದೆ. ನೋಟು ನಿಷೇಧ ಬಳಿಕ ಕರಾಚಿ ಮತ್ತು ಲಾಹೋರ್ ನಲ್ಲಿರುವ ಮುದ್ರಣಾಲಯಗಳು ಕೆಲಸ ವಿಲ್ಲದೆ ಖಾಲಿ ಹೊಡೆಯುತ್ತಿತ್ತು. ಆದರೀಗ ಆರ್‍ಬಿಐನ ಭದ್ರತಾ ವೈಶಿಷ್ಟ್ಯಗಳ ರಹಸ್ಯ ತಿಳಿದುಕೊಂಡ ಐಎಸ್‍ಐ ಅದೇ ಮಾದರಿಯಲ್ಲಿ ನೋಟುಗಳನ್ನು ಮುದ್ರಣ ಮಾಡುತ್ತಿದೆ. ಆ ಮೂಲಕ ಮುಚ್ಚುವ ಹಂತದಲ್ಲಿದ್ದ ಮುದ್ರಣಾಲಯಗಳು ಮತ್ತೆ ಕಾರ್ಯಾರಂಭ ಮಾಡಿವೆ.

50 ದಿನಗಳಲ್ಲಿ 22 ಉಗ್ರರ ಹತ್ಯೆ

ಶ್ರೀನಗರ, ಫೆ. 19: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಐವತ್ತು ದಿನದಲ್ಲಿ ಬರೊಬ್ಬರಿ 22 ಮಂದಿ ಉಗ್ರಗಾಮಿಗಳನ್ನು ಭಾರತೀಯ ಸೇನೆಯ ಯೋಧರು ಹತ್ಯೆಗೈದಿದ್ದಾರೆ ಎಂದು ತಿಳಿದುಬಂದಿದೆ. ಉಗ್ರ ಬುರ್ಹಾನ್ ವಾನಿ ಹತ್ಯೆ ಬಳಿಕ ಕಾಶ್ಮೀರದಲ್ಲಿ ಉಂಟಾಗಿದ್ದ ಗಲಭೆ ಮತ್ತು ರಾಜ್ಯದಲ್ಲಿ ನಡೆ ವಿವಿಧ ಉಗ್ರ ದಾಳಿ ಸಂದರ್ಭದಲ್ಲಿ 2017 ರ ಮೊದಲ 2 ತಿಂಗಳೊಳಗೇ 22 ಮಂದಿ ಉಗ್ರಗಾಮಿಗಳನ್ನು ಹತ್ಯೆ ಮಾಡಲಾಗಿದೆ. ಅಂತೆಯೇ 26 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಇದು 2010ರ ಬಳಿಕ ನಡೆದ ಕಾರ್ಯಾಚರಣೆಯಲ್ಲಿ ಅತೀ ಹೆಚ್ಚು ಉಗ್ರರನ್ನು 2017ರಲ್ಲಿ ಕೊಲ್ಲಲಾಗಿದ್ದು, ಕೇವಲ 2 ತಿಂಗಳ ಅವಧಿಯಲ್ಲಿ 22 ಮಂದಿ ಉಗ್ರರನ್ನು ಕೊಂದು ಹಾಕಿರುವುದು ಇದೇ ಮೊದಲು. ಗುಂಡಿನ ಕಾಳಗದ ವೇಳೆ ಇಬ್ಬರು ನಾಗರಿಕರೂ ಬಲಿಯಾಗಿದ್ದಾರೆ ಎಂದು ಸೇನಾ ಅಂಕಿಅಂಶಗಳು ತಿಳಿಸಿವೆ. ಕಣಿವೆ ರಾಜ್ಯದಲ್ಲಿ ಯೋಧರು ದಿನಕ್ಕೊಂದರಂತೆ 50 ಕಾರ್ಯಾಚರಣೆ ನಡೆಸಿದ್ದು, 16 ಕಾರ್ಯಾಚರಣೆಗಳು ಉಗ್ರರ ಹತ್ಯೆಯಲ್ಲಿ ಅಂತ್ಯಗೊಂಡಿವೆ. ಅಂತೆಯೇ ಮೂವರು ಉಗ್ರರನ್ನು ಸೆರೆ ಹಿಡಿಯಲಾಗಿದ್ದು, ಉಗ್ರರಿಗೆ ಆಶ್ರಯ ನೀಡಿದ್ದ, ಕುಕೃತ್ಯಗಳಿಗೆ ನೆರವಾಗುತ್ತಿದ್ದ 40 ಮಂದಿಯನ್ನು ಬಂಧಿಸಿ ಜೈಲಿಗಟ್ಟಲಾಗಿದೆ. ಕುಪ್ವಾರದ ಹಂದ್ವಾರ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಓರ್ವ ಅಧಿಕಾರಿ ತಾ. 14 ರಂದು ಸಾವನ್ನಪ್ಪಿದ್ದರು. ಬಂಡಿಪೆÇೀರಾದ ಹಜಿನ್ ಪ್ರದೇಶದಲ್ಲಿ ಅಡಗಿ ಕುಳಿತು ಧಾಳಿ ಮಾಡಲಾಗುತ್ತಿದ್ದ ಮೂವರು ಉಗ್ರಗಾಮಿಗಳನ್ನು ಸದೆಬಡಿಯಲಾಗಿತ್ತು. ಕಾಶ್ಮೀರದ ಕುಲ್ಗಾಮ್ ಮೇಲೆ ಉಗ್ರರು ಧಾಳಿ ಮಾಡಿದ್ದಾಗ 4 ಮಂದಿ ಉಗ್ರರನ್ನು ಹತ್ಯೆಗೈಯ್ಯಲಾಗಿತ್ತು.

ಉತ್ತರ ಪ್ರದೇಶದಲ್ಲಿ ಶಾಂತಿಯುತ ಮತದಾನ

ಲಖನೌ, ಫೆ. 19: ಉತ್ತರ ಪ್ರದೇಶದಲ್ಲಿ ಮೂರನೇ ಹಂತದ ವಿಧಾನಸಭಾ ಚುನಾವಣೆಯ ಮತದಾನ ಭಾನುವಾರ ಶಾಂತಿಯುತವಾಗಿ ನಡೆದಿದೆ. 12 ಜಿಲ್ಲೆಗಳಲ್ಲಿ ಹರಡಿರುವ 69 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಿತು. ಸಣ್ಣ ಪುಟ್ಟ ಗಲಾಟೆಗಳನ್ನು ಹೊರತುಪಡಿಸಿದರೆ ಮತದಾನ ಬಹುತೇಕ ಶಾಂತಿಯುತವಾಗಿ ನಡೆಯಿತು. ಒಟ್ಟು 25,603 ಮತಗಟ್ಟೆಗಳಲ್ಲಿ ಮತದಾನ ನಡೆದಿದ್ದು, 1.1 ಕೋಟಿ ಮಹಿಳೆಯರು, 1,026 ತೃತೀಯ ಲಿಂಗಿಗಳು ಸೇರಿದಂತೆ 2.41 ಕೋಟಿ ಮತದಾರರು ಇಲ್ಲಿದ್ದಾರೆ.