ಚೆಟ್ಟಳ್ಳಿ, ಫೆ. 19: ವೀರಾಜಪೇಟೆ ತಾಲೂಕಿನ ಟಿ.ಶೆಟ್ಟಿಗೇರಿ ಗ್ರಾಮದ ಉಳುವಂಗಡ ಕಾವೇರಿ ಉದಯ ಅವರು ಬರೆದಿರುವ ‘ಚಾಯಿ’ ಪುಸ್ತಕವನ್ನು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿದ್ದಾಟಂಡ ಎಸ್. ತಮ್ಮಯ್ಯ ಬಿಡುಗಡೆ ಮಾಡಿದರು.

ನಗರದ ಬಾಲಭವನದಲ್ಲಿ ನಡೆದ ಕೊಡವ ಮಕ್ಕಡ ಕೂಟದ ನಾಲ್ಕನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಚಾಯಿ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ನಂತರ ಮಾತನಾಡಿದ ತಮ್ಮಯ್ಯ, ಕೊಡವ ಭಾಷೆಯಲ್ಲಿ ಮತ್ತಷ್ಟು ಸಾಹಿತ್ಯ ಹೊರಬರಬೇಕಿದ್ದು, ಅಕಾಡೆಮಿಯೂ ಇದಕ್ಕೆ ಸಹಕಾರ ನೀಡಲಿದೆ ಎಂದರು.

ಲೇಖಕಿ ಉಳುವಂಗಡ ಕಾವೇರಿ ಉದಯ ಮಾತನಾಡಿ, ಪುಸ್ತಕ ಹೊರತರಲು ಕಾರಣರಾದ ಕೊಡವ ಮಕ್ಕಡ ಕೂಟ ಹಾಗೂ ಪುಸ್ತಕ ಬಿಡುಗಡೆಗೆ ಹಣ ಸಹಾಯ ಮಾಡಿದ ಕೊಂಗೇಟ್ಟಿರ ಅಚ್ಚಪ್ಪ ಹಾಗೂ ಕಾವೇರಮ್ಮ ಅಚ್ಚಪ್ಪ, ದಳವಾಯಿ ಕನ್ನಂಡ ಪಡೆಬೀರ ದೊಡ್ಡಯ್ಯ ಟ್ರಸ್ಟ್‍ಗೆ ಧನ್ಯವಾದ ಅರ್ಪಿಸಿದರು.

ಕೊಡವ ಲೇಖನ ಹೊರಬರಲು ಕೊಡವ ಮಕ್ಕಡ ಕೂಟ ತಮ್ಮೊಂದಿಗೆ ಕೈ ಜೋಡಿಸಿದೆ. ಇಂತಹ ಕಾರ್ಯ ಮಾಡುವದರಿಂದ ಬರಹಗಾರರಿಗೆ ತಮ್ಮ ಲೇಖನಗಳನ್ನು ಪ್ರಕಟ ಮಾಡಲು ಉತ್ತಮ ವೇದಿಕೆಯನ್ನು ಒದಗಿಸಿದಂತಾಗುತ್ತದೆ ಎಂದು ಹೇಳಿದರು.