ಆಲೂರು-ಸಿದ್ದಾಪುರ, ಫೆ. 19: ಕೇಂದ್ರ ಸರ್ಕಾರ ಎಲ್ಲರನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದೆ. ಇತ್ತೀಚೆಗೆ ಕೇಂದ್ರ ಸರ್ಕಾರ ಮಂಡಿಸಿದ ಜನಪರ ಬಜೆಟ್ ಇದಕ್ಕೆ ಮಾದರಿಯಾಗಿದೆ ಎಂದು ಶಾಸಕ ಅಪ್ಪಚ್ಚು ರಂಜನ್ ಹೇಳಿದರು.ಶನಿವಾರಸಂತೆ ಯಶಸ್ವಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ತಾಲೂಕು ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ನೋಟು ಬದಲಾವಣೆಯಿಂದ ಭಯೋತ್ಪಾದನೆ ಚಟುವಟಿಕೆಗೆ ಕಡಿವಾಣ ಬಿದ್ದಿದ್ದು, ಪಾಕಿಸ್ತಾನದಿಂದ ಹರಿದು ಬರುತ್ತಿದ್ದ ಖೋಟ ನೋಟುಗಳು ಸಹ ಇಲ್ಲದಂತಾಗಿದೆ. ಕಪ್ಪುಹಣಕ್ಕೆ ಕಡಿವಾಣ ಬಿದ್ದಿದೆ. ಕಾಂಗ್ರೆಸ್ ಸೇರಿದಂತೆ ಇನ್ನಿತರ ಪಕ್ಷದವರು ಇಂದು ನೋಟು ಬದಲಾವಣೆಯಿಂದ ಯಾವದೇ ರೀತಿಯ ಜನರಿಗೆ ತೊಂದರೆ ಯಾಗುತ್ತಿಲ್ಲ ಎಂಬ ಅರಿವಿದ್ದರೂ ಅನವಶ್ಯಕವಾಗಿ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು. ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಜಿಲ್ಲೆಯ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಜಾರಿಗೆ ತಂದು ಜಿಲ್ಲೆಯನ್ನು ಅಭಿವೃದ್ಧಿಪಡಿಸಲಾಗಿತ್ತು. ಬಿಜೆಪಿ ಅಧಿಕಾರದಲ್ಲಿದ್ದಾಗ ಜಿಲ್ಲಾ ಪಂಚಾಯಿತಿ ಒಂದು ಕ್ಷೇತ್ರಕ್ಕೆ ವರ್ಷಕ್ಕೆ ಸುಮಾರು 60 ಲಕ್ಷ ರೂ. ಅನುದಾನ ವನ್ನು ಒದಗಿಸುವ ಕೆಲಸವಾಗಿತ್ತು. ಅದರೆ ಇಂದು ಕೇವಲ 5 ¯ಕ್ಷ ರೂ. ಮಾತ್ರ ವರ್ಷಕ್ಕೆ ಅನುದಾನ ಬರುತ್ತಿದೆ. ತಾಲೂಕು ಪಂಚಾಯಿತಿ ಕ್ಷೇತ್ರಕ್ಕೆ 12 ರಿಂದ 15 ಲಕ್ಷ ರೂ. ಅನುದಾನ ಬಿಡುಗಡೆಯಾಗುತಿತ್ತು. ಇಂದು ಜಿಲ್ಲಾ ಪಂಚಾಯಿತಿ ಹಾಗೂ ತಾ.ಪಂ. ಸದಸ್ಯರು ಮತದಾರರ ಕಣ್ಣು ತಪ್ಪಿಸಿ ಓಡಾಡುವಂತೆ ರಾಜ್ಯದ ಕಾಂಗ್ರೆಸ್ ಸರ್ಕಾರ ಮಾಡಿದೆ ಎಂದು ಆರೋಪಿಸಿದರು. ಕೇಂದ್ರ ಬಿಜೆಪಿ ಸರ್ಕಾರದ ಸಾಧನೆಗಳನ್ನು ಜನರಿಗೆ ಮುಟ್ಟಿಸುವ ಕೆಲಸವನ್ನು ಪ್ರತಿಯೊಬ್ಬ ಕಾರ್ಯಕರ್ತನು ಮಾಡಬೇಕಾಗಿದೆ. ಮುಂದಿನ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಎಂದು ಭವಿಷ್ಯ ನುಡಿದರು. ಮಾಜಿ ವಿಧಾನ ಪರಿಷತ್ ಸದಸ್ಯ ಎಸ್.ಜಿ. ಮೇದಪ್ಪ ಮಾತನಾಡಿ ಹಿಂದೆ ಪಕ್ಷಕ್ಕಾಗಿ ದುಡಿದವರನ್ನು ಕಡೆಗಣಿಸದೆ ಎಲ್ಲರನ್ನೂ ಸೇರಿಸಿಕೊಂಡು ಕೆಲಸ ಮಾಡೋಣ. ಮುಂದೆ ರಾಜ್ಯದಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುವದು ಖಚಿತ. ಒಗ್ಗೂಡಿ ಕೆಲಸ ನಿರ್ವಹಿಸಬೇಕಾಗಿದೆ ಎಂದರು.

ಮಾಜಿ ಯುವ ಮೋರ್ಚಾದ ಅಧ್ಯಕ್ಷ ಬಿ.ಬಿ. ಭಾರತೀಶ್ ಮಾತನಾಡಿ ಬಿಜೆಪಿಯಲ್ಲಿ ಎಲ್ಲರ ಧ್ಯೆಯವು ಒಂದೇ ಆಗಿದ್ದು, ಪಕ್ಷವನ್ನು ಗಟ್ಟಿಗೊಳಿಸುವ ಕೆಲಸವನ್ನು ಹಿಂದಿನ ನಾಯಕರುಗಳು ಮಾಡಿದ್ದಾರೆ. ಇದನ್ನೇ ನಾವು ಮುಂದುವರೆಸಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ ರೈತ ಮೋರ್ಚಾದ ಅಧ್ಯಕ್ಷ ಪೊನ್ನಪ್ಪ ಮಾತನಾಡಿ ರೈತರಿಗೆ ಯಾವದೇ ರೀತಿಯ ಸೌಲಭ್ಯಗಳನ್ನು ರಾಜ್ಯ ಸರ್ಕಾರ ನೀಡದೆ ತುಳಿಯುವ ಕೆಲಸ ಮಾಡುತ್ತಿದೆ. ರಾಜ್ಯದ ಎಲ್ಲಾ ರೈತರು ಬರದಿಂದ ತತ್ತರಿಸುತ್ತಿದ್ದರೂ ಸಹ ಸರ್ಕಾರ ಮಾತ್ರ ರೈತರ ಸಾಲ ಮನ್ನಾ ಮಾಡುವ ಬಗ್ಗೆ ಚಿಂತನೆ ನಡೆಸದಿರು ವದು ವಿಪರ್ಯಾಸ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಬಿಜೆಪಿ ಅಧ್ಯಕ್ಷ ಕೊಮಾರಪ್ಪ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಮನು ಮುತ್ತಪ್ಪ, ಶುಂಠಿ ಸುರೇಶ್, ವಿ.ಕೆ. ಲೋಕೇಶ್, ಎಸ್,ಎನ್. ರಘು, ಶಿವಪ್ಪ, ರಾಜ್ಯ ಕಾರ್ಯಕಾರಿಣಿ ಸದಸ್ಯೆ ಸುಮಾಸುದೀಪ್, ಭುವನೇಶ್ವರಿ ಹರೀಶ್, ಬಿ.ಡಿ ಮಂಜುನಾಥ್, ಜಿಲ್ಲಾ ಪಂಚಾಯುತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಅಭಿಮನ್ಯುಕುಮಾರ್, ಸೊಮವಾರಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮಿ ಸುರೇಶ್, ನಳಿನಿ ಗಣೇಶ್, ಶನಿವಾರಸಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಗೌಸ್, ಅಲ್ಪ ಸಂಖ್ಯಾತರ ಬಿಜೆಪಿ ಅಧ್ಯಕ್ಷ ನಿಸಾರ್ ಅಹಮ್ಮದ್, ಮನುಕುಮಾರ್ ರೈ, ಜಿ.ಪಂ., ತಾ.ಪಂ., ಗ್ರಾ.ಪಂ. ಹಾಗೂ ಕೃಷಿ ಉತ್ಪನ್ನ ಸಮಿತಿಗೆ ಬಿಜೆಪಿ ಪಕ್ಷದಿಂದ ಆಯ್ಕೆಗೊಂಡ ಸದಸ್ಯರು ಉಪಸ್ಥಿತರಿದ್ದರು.