ಸೋಮವಾರಪೇಟೆ, ಫೆ. 19: ಇಲ್ಲಿನ ಮೆಟ್ರಿಕ್ ನಂತರದ ಬಿಸಿಎಂ ಹಾಸ್ಟೆಲ್‍ಗೆ ಶನಿವಾರ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ನೇತೃತ್ವದಲ್ಲಿ ಜನಪ್ರತಿನಿಧಿಗಳ ತಂಡ ಭೇಟಿ ನೀಡಿ ಪರಿಶೀಲಿಸಿದರು.

ಈ ಸಂದರ್ಭ ವಸತಿ ನಿಲಯದ ಮೇಲ್ವಿಚಾರಕಿ ರಮಾವತಿ ಗೈರಾಗಿದ್ದ ಹಿನ್ನೆಲೆ ವಸತಿ ನಿಲಯದ ಅಡುಗೆಯವರಾದ ರಾಣಿ ಅವರಿಂದ ಮಾಹಿತಿ ಸಂಗ್ರಹಿಸಿದರು. ವಸತಿ ನಿಲಯದಲ್ಲಿ 86 ವಿದ್ಯಾರ್ಥಿನಿಯರಿದ್ದು, ಇಂದು ಪ್ರಥಮ ವರ್ಷದ ನರ್ಸಿಂಗ್ ವಾರ್ಷಿಕ ಪರೀಕ್ಷೆ ಮುಗಿದಿರುವದರಿಂದ ವಿದ್ಯಾರ್ಥಿನಿಯರು ಅವರವರ ಮನೆಗೆ ತೆರಳಿದ್ದಾರೆ ಎಂದು ಸಿಬ್ಬಂದಿ ರಾಣಿ ಮಾಹಿತಿ ನೀಡಿದರು. ಆದರೆ, ಹಾಜರಾತಿ ಪುಸ್ತಕದಲ್ಲಿ ಸಂಖ್ಯೆ ಹಾಗೂ ಸಹಿಯ ವ್ಯತ್ಯಾಸವನ್ನು ಗಮನಿಸಿದ ಉಪಾಧ್ಯಕ್ಷರು ಈ ಬಗ್ಗೆ ಮೇಲ್ವಿಚಾರಕಿ ಮಾಹಿತಿ ನೀಡಬೇಕೆಂದು ಸೂಚಿಸಿದರು.

ನಂತರ ಸ್ಥಳಕ್ಕಾಗಮಿಸಿದ ಮೇಲ್ವಿಚಾರಕಿ ರಮಾವತಿ ಅವರನ್ನು ಪ್ರಶ್ನಿಸಿದ ಉಪಾಧ್ಯಕ್ಷರು, ವಾರದಲ್ಲಿ ಎರಡು ದಿನಗಳು ಮಾತ್ರ ವಸತಿಗೃಹದಲ್ಲಿ ವಾಸ್ತ್ಯವ್ಯ ಇರುವದಾಗಿ ತಿಳಿದು ಬಂದಿದ್ದು, ಇದರ ಬಗ್ಗೆ ಸ್ಪಷ್ಟನೆ ನೀಡುವಂತೆ ಹೇಳಿದರು. ಈ ಸಂದರ್ಭ ಮಾತನಾಡಿದ ಮೇಲ್ವಿಚಾರಕಿ, ತನಗೆ ಮೇಲಧಿಕಾರಿಗಳು ವಾರದಲ್ಲಿ ಎರಡು ದಿನ ಹೊರತು ಪಡಿಸಿ ಉಳಿದ ದಿನ ಮನೆಗೆ ತೆರಳಲು ಅನುಮತಿ ನೀಡಿರುವದರಿಂದ ಮನೆಗೆ ತೆರಳುತ್ತಿರುವದಾಗಿ ತಿಳಿಸಿದರು. ಮುಂದಿನ ದಿನಗಳಲ್ಲಿ ವಾರಪೂರ್ತಿ ವಸತಿ ಗೃಹದಲ್ಲಿಯೇ ವಾಸ್ತ್ಯವ್ಯ ಹೂಡುವದಾಗಿ ತಿಳಿಸಿದರು.

ವಿದ್ಯಾರ್ಥಿನಿಯರ ಭದ್ರತೆಯ ದೃಷ್ಟಿಯಿಂದ ಪೊಲೀಸ್ ಇಲಾಖೆಯ ಬೀಟ್ ಪುಸ್ತಕವನ್ನು ನೀಡಲಾಗಿದೆ. ಪ್ರತಿ ದಿನ ಅದನ್ನು ಗೇಟ್‍ಗೆ ತೂಗು ಹಾಕಲಾಗುತ್ತಿದೆ. ಆದರೆ, ಈವರೆಗೆ ಒಂದು ದಿನವೂ ಪೊಲೀಸರು ಇಲ್ಲಿಗೆ ಆಗಮಿಸಿ ಪುಸ್ತಕಕ್ಕೆ ಸಹಿ ಹಾಕಿರುವದಿಲ್ಲ ಎಂದು ರಾತ್ರಿ ಕಾವಲುಗಾರರು ತಿಳಿಸಿದರು.

ವಸತಿ ಗೃಹದ ಶುಚಿತ್ವದ ಬಗ್ಗೆ ಹಾಗೂ ಭದ್ರತೆಯ ಬಗ್ಗೆ ಗಮನ ಹರಿಸುವಂತೆ ಲೋಕೇಶ್ವರಿ ಗೋಪಾಲ್ ಸೂಚಿಸಿದರು. ಸರ್ಕಾರ ವಿದ್ಯಾರ್ಥಿಗಳ ಅನುಕೂಲಕ್ಕೆ ಹಲವು ಯೋಜನೆಗಳನ್ನು ನೀಡುತ್ತಿದ್ದು, ಅವುಗಳನ್ನು ಅಧಿಕಾರಿಗಳು ವಿದ್ಯಾರ್ಥಿಗಳಿಗೆ ತಲಪಿಸುವ ಕೆಲಸ ಮಾಡಬೇಕು. ಅಲ್ಲದೆ, ಇವುಗಳಲ್ಲಿ ಯಾವದೇ ವ್ಯತ್ಯಯವಾದರೆ, ಅದನ್ನು ಕೂಡಲೇ ಮೇಲಧಿಕಾರಿಗಳು ಅಥವಾ ಜನಪ್ರತಿನಿಧಿಗಳ ಗಮನಕ್ಕೆ ತರುವ ಕೆಲಸವನ್ನು ವಸತಿ ನಿಲಯದ ವಿದ್ಯಾರ್ಥಿನಿಯರು ಮಾಡಬೇಕೆಂದು ಲೋಕೇಶ್ವರಿ ಗೋಪಾಲ್ ಹೇಳಿದರು.

ಭೇಟಿ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯೆ ಪೂರ್ಣಿಮಾ ಗೋಪಾಲ್, ತಾಲೂಕು ಪಂಚಾಯಿತಿ ಸದಸ್ಯೆ ತಂಗಮ್ಮ ಹಾಗೂ ಚೌಡ್ಲು ಗ್ರಾಮ ಪಂಚಾಯಿತಿ ಸದಸ್ಯೆ ಮಂಜುಳಾ ಸುಬ್ರಮಣಿ ಇದ್ದರು.