ಮಡಿಕೇರಿ, ಫೆ. 19: ‘ಪುಟ್ಟದೊಂದು ಕೋಣೆ.., ಕೋಣೆಯ ಗೋಡೆಯ ತುಂಬೆಲ್ಲ ಬಣ್ಣದ ಚಿತ್ತಾರ’ಗಳು.., ಒಂದು ಚಿತ್ರದ ಎದುರು ಪುಟ್ಟ, ಪುಟ್ಟ ಪುಟಾಣಿಗಳು.., ಬೆರಳು ತೋರುತ್ತಾ.., ಅಪ್ಪ - ಅಮ್ಮನ ಕೈಯ್ಯನ್ನಿಡಿದು ಜಗ್ಗಾಡುತ್ತಾ.., ‘ಇದು ನಂದು’ ಎಂದು ಪುಟಿಯುತ್ತಿದ್ದರು.., ಮಕ್ಕಳಿಂದ ತುಂಬಿಹೋಗಿದ್ದ ಕೋಣೆಯಲ್ಲಿ ಮಕ್ಕಳ ಕಲಾ ಪ್ರಪಂಚ ಅನಾವರಣಗೊಂಡಿತ್ತು.., ಕಾಡು, ಮರ - ಗಿಡ, ಪ್ರಾಣಿ- ಪಕ್ಷಿ, ಗದ್ದೆ, ಮನೆಗಳು, ಹಳ್ಳಿಗಾಡಿನ ಸೊಬಗು, ಪಟ್ಟಣಗಳ ಮೆರುಗು, ಹೊಟೇಲ್‍ಗಳು, ಮಕ್ಕಳ ಪ್ರೀತಿಯ ಐಸ್‍ಕ್ರೀಂ ಬಂಡಿಗಳು, ನೀರಿನ ಬವಣೆ, ದೇವರುಗಳ ಪ್ರತಿಬಿಂಬ, ಮಡಿಕೇರಿ ದಸರಾದ ಕರಗ ಮಹೋತ್ಸವ, ಯುವ ಪೀಳಿಗೆಯ ಮೋಜು - ಮಸ್ತಿಯ ಪಾರ್ಟಿ, ಹೀಗೆ... ಪಟ್ಟಿ ಮಾಡುತ್ತಾ ಹೋದರೆ ಅಕ್ಷರಗಳೇ ಸಾಕಾಗುವದಿಲ್ಲ.

ಪುಟ್ಟ ಮಕ್ಕಳ ಮನಸಿನ ಭಾವನೆಯ ಪ್ರತಿಬಿಂಬ ಆ ಕೋಣೆಯ ಗೋಡೆಗಳಲ್ಲಿ ಪ್ರಜ್ವಲಿಸುತ್ತಿವೆ. ಇದು ಕಾಣಸಿಗುವದು ಮಡಿಕೇರಿಯ ಭಾರತೀಯ ವಿದ್ಯಾಭವನದಲ್ಲಿ. ಕಲಾ ಭಾರತಿ ಸಂಸ್ಥೆ ವತಿಯಿಂದ ಹಮ್ಮಿಕೊಳ್ಳಲಾಗಿರುವ ಮಕ್ಕಳ ಚಿತ್ರಕಲಾ ಪ್ರದರ್ಶನದಲ್ಲಿ.

ಎಲ್‍ಕೆಜಿಯಿಂದ ಹಿಡಿದು ಹತ್ತನೇ ತರಗತಿವರೆಗಿನ ಮಕ್ಕಳ ಮನಸಲ್ಲಿ ಮೂಡಿಬಂದ ಕಲ್ಪನೆಗಳು ಕುಂಚದ ಮೂಲಕ ಅರಳಿ ಗೋಡಗಳಲ್ಲಿ ರಾರಾಜಿಸುತ್ತಾ ಗೋಡೆಗಳಿಗೆ ಬಣ್ಣದ ಚಿತ್ತಾರದ ಕಳೆ ತಂದಿತ್ತಿವೆ. ಯಾವದೇ ಕಲ್ಮಶವಿಲ್ಲದ ಮುಗ್ಧ ಮನಸುಗಳ ಕಲ್ಪನೆಗಳು ನಿಜಕ್ಕೂ ಅಚ್ಚರಿ ಮೂಡಿಸುತ್ತವೆ. ಅರಳುವ ಮನಸುಗಳಲ್ಲಿ ಪ್ರತಿಭೆಗಳು ಅನಾವರಣಗೊಳ್ಳುತ್ತವೆ ಎಂಬದಕ್ಕೆ ಈ ಚಿತ್ರಗಳೇ ಸಾಕ್ಷಿಯಾಗಿವೆ. ನಮ್ಮ ಮಕ್ಕಳಲ್ಲೂ ಇಂತಹ ಪ್ರತಿಭೆ ಅಡಗಿದೆಯೇ ಎಂಬ ಸಂಶಯ ಮಕ್ಕಳ ಪೋಷಕರಲ್ಲಿಯೇ ಮನೆ ಮಾಡುವಂತಾಗಿದೆ. ಪರಸ್ಪರ ಮಾತನಾಡುತ್ತಾ ಕೆಲವರು ‘ ನಮ್ಮ ಮಗ, ಮಗಳು ಇಷ್ಟು ಚೆನ್ನಾಗಿ ಬಿಡಿಸುತ್ತಾಳೆ(ನೆ) ಅಂತ ಗೊತ್ತಿರಲಿಲ್ಲ’ ಎಂದು ಉದ್ಗರಿಸಿದ್ದೂ ಕಂಡು ಬಂತು.

ಕೋಣೆಯೊಳಗೆ ಅಡಿಯಿಟ್ಟೊಡನೆ ಮನಸ್ಸಿಗೆ ಆಹ್ಲಾದವಾಗುವದು ದಿಟ. ಈ ಒಂದು ಅಪೂರ್ವ ಕ್ಷಣಗಳಿಗೆ ಅವಕಾಶ ಮಾಡಿಕೊಟ್ಟವರು ಚಿತ್ರ ಕಲಾವಿದ ಪ್ರಸನ್ನ.

ಮಕ್ಕಳಲ್ಲಿ ಜೀವನ ಮೌಲ್ಯ ತುಂಬಬೇಕು

ಮಕ್ಕಳನ್ನು ಕೇವಲ ಅಂಕದ ಚೌಕಟ್ಟಿಗೆ ಹುದುಗಿಸದೇ ಅವರಿಗೆ ಮಾನವೀಯ ಮೌಲ್ಯವನ್ನು ತಿಳಿಸಿಕೊಡಬೇಕು ಎಂದು ಬೆಳ್ಳಾರೆ ಶಿವರಾಮ ಕಾರಂತ ಪದವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರು ಹಾಗೂ ಸಾಹಿತಿ ನರೇಂದ್ರ ರೈ ದೇರ್ಲ ಹೇಳಿದರು.

ಚಿತ್ರ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ಇಂದು ಪೋಷಕರು ಹಾಗೂ ಮಕ್ಕಳು ಅಂಕಗಳ ವ್ಯಾಮೋಹಕ್ಕೆ ಬಲಿಪಶುಗಳಾಗುತ್ತಿದ್ದಾರೆ. ಹಾಗೇ ಯಂತ್ರದಂತೆ ಪರಿವರ್ತಿತರಾಗುತ್ತಿದ್ದಾರೆ. ಇದರಿಂದ ಮಕ್ಕಳ ಅಭಿರುಚಿ ಮತ್ತು ಜೀವಂತಿಕೆಗಳೆಲ್ಲ ನಶಿಸುತ್ತದೆ. ಪೋಷಕರು ಮತ್ತು ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಜೀವಂತಿಕೆಯ ಬೀಜ ಬಿತ್ತಿ ಬಾಲ್ಯದಲ್ಲಿಯೇ ಸಾಹಿತ್ಯದತ್ತ ಆಕರ್ಷಿತರಾಗುವಂತೆ ಮಾಡಬೇಕು. ಮಾತ್ರವಲ್ಲದೇ ಅವರಲ್ಲಿ ಎಳವೆಯಲ್ಲಿಯೇ ಸಂಸ್ಕಾರ, ಜೀವನ ಮೌಲ್ಯವನ್ನು ತುಂಬಬೇಕು ಎಂದರು.

ಪ್ರತಿಯೊಂದು ಮಗುವು ಶ್ರೇಷ್ಟ ಕಲಾವಿದ. ಯಾವತ್ತು ಕಲೆ ಎಂಬದು ರಕ್ತ ಗತವಾಗಿ ಬರುವದಿಲ್ಲ. ಅದು ಅಭ್ಯಾಸದಿಂದ ಬರುತ್ತದೆ. ಮಕ್ಕಳಲ್ಲಿ ಅಭೂತಪೂರ್ವವಾದ ಪ್ರತಿಭೆ ಇದ್ದು, ಅದನ್ನು ಗುರುತಿಸಿ ಬೆಳೆಸುವಲ್ಲಿ ಶಿಕ್ಷಕರು ಮತ್ತು ಪೋಷಕರ ಪಾತ್ರ ಅಗಾಧವಾದದ್ದು ಎಂದರು.

ಇಂದು ಆಧುನಿಕ ವರ್ತಮಾನದ ಜಗತ್ತು ಪರಿಸರ, ಹಸಿರನ್ನು ನಿರ್ಲಕ್ಷಿಸುತ್ತಾ ಬರುತ್ತಿದೆ. ಹಸಿರನ್ನು, ಕೆಸರನ್ನು, ಈ ನೆಲದ ಉಸಿರನ್ನು ಬಿಟ್ಟು ಮಹಾನಗರಕ್ಕೆ ಹೋಗಿ ಬದುಕನ್ನು ಕಟ್ಟಿಕೊಳ್ಳುತ್ತಿದ್ದಾರೆ. ಆದರೆ ಕೊಡಗಿನ ಮಕ್ಕಳು ಚಿತ್ರ ಬಿಡಿಸಿದ್ದನ್ನು ನೋಡಿದಾಗ ಇಲ್ಲಿ ಹಸಿರೇ ಮೇಳೈಸುತ್ತಿದೆ. ಚಿತ್ರಗಳೇ ಮಾತನಾಡುತ್ತಿವೆ. ಕೊಡಗಿಗೆ ಇನ್ನೂ ಹಲವು ವರುಷ ಭವಿಷ್ಯವಿದೆ. ಮಕ್ಕಳಲ್ಲಿ ಈ ಮಣ್ಣಿನ ಸೊಬಗಿನ ಬಗೆಗೆ, ಈ ನೆಲದ ಬೇರಿನ ಸಂಪರ್ಕವನ್ನು ಜೋಡಿಸಿಕೊಡುವಲ್ಲಿ ಚಿತ್ರಕಲಾ ಶಿಕ್ಷಕರ ಪ್ರಯತ್ನ ಶ್ಲಾಘನೀಯವೆಂದರು.

ಇಂದಿನ ಶಿಕ್ಷಣ ಗೋಡೆಯ ಒಳಗಿನ ಶಿಕ್ಷಣವಾಗಿದ್ದು, ಮನುಷ್ಯ ಮನುಷ್ಯನ ಒಳಗಿನ ಸಂಬಂಧಗಳನ್ನು ಕಡಿದುಕೊಳ್ಳುವಂತಹ ಶಿಕ್ಷಣವಾಗಿದೆ. ಇಂದು ಮಕ್ಕಳು ಸಾಹಿತ್ಯ, ಕಲೆಗಳಿಂದ ವಂಚಿತರಾಗುತ್ತಿದ್ದಾರೆ ಎಂದು ವಿಷಾದಿಸಿದರು.

ಯಾವತ್ತೂ ಕಲೆಗಳು ಪುಸ್ತಕಗಳಿಂದ ಬರುವದಿಲ್ಲ.

(ಮೊದಲ ಪುಟದಿಂದ) ಅದು ಸಹವಾಸದಿಂದ ಮಾತ್ರ ಬರುತ್ತದೆ. ದೇಶದ ಮೊಟ್ಟಮೊದಲ ಸಂಸ್ಕøತಿಯೆಂದರೆ ಅದು ಕೃಷಿ. ಕೃಷಿಯ ಬಗ್ಗೆ ಇಂದಿನ ವಿದ್ಯಾರ್ಥಿಗಳಲ್ಲಿ ಒಲವು ಇರಬೇಕೆಂದು ಹೇಳಿದರು.

ಇಂದು ಮನುಷ್ಯ ವಿಕೃತನಾಗುತ್ತಾ ಹೋಗುತ್ತಿದ್ದು, ಅನೇಕ ಕೆಟ್ಟ ಹಾದಿಯನ್ನು ಹಿಡಿಯುತ್ತಿದ್ದಾನೆ. ಇದರಿಂದ ಹೊರಗೆ ಬರಬೇಕಾದರೆ ಮನುಷ್ಯ ಮುಖ್ಯವಾಗಿ ಧ್ಯಾನ, ಸಂಗೀತ, ಕಲೆ, ಸಾಹಿತ್ಯದತ್ತ ಒಲವು ಮೂಡಿಸಿಕೊಳ್ಳಬೇಕು. ಇಂದು ನಗರಗಳಲ್ಲಿ ಸುಖ ಇದೆ ಎಂಬ ಭ್ರಾಂತಿ ಹಲವರಲ್ಲಿದೆ. ಕಲೆ, ಸಾಹಿತ್ಯದ ಬೇರುಗಳನ್ನು ಕಳಚಿಕೊಂಡು ನಗರದ ವೈಭೋಗಕ್ಕೆ ಮನಸೋತರೆ ಎಲ್ಲವನ್ನು ಕಳೆದುಕೊಳ್ಳಬೇಕಾಗುತ್ತದೆ. ಮೊದಲು ಈ ಭ್ರಾಂತಿಯನ್ನು ಯುವಜನತೆ ಬಿಡಬೇಕು ಎಂದು ಸಲಹೆ ಮಾಡಿದರು.

ಚಿತ್ರಕಲಾ ಪ್ರದರ್ಶನದ ಆಯೋಜಕರು ಹಾಗೂ ಚಿತ್ರಕಲಾ ಶಿಕ್ಷಕ ಪ್ರಸನ್ನ ಮಾತನಾಡಿ, ಮಕ್ಕಳ ಚಿತ್ರಗಳು ಅಮೂಲ್ಯವಾದದ್ದು. ಇವರುಗಳು ಚಿತ್ರಗಳನ್ನು ನೋಡಿ ಚಿತ್ರಿಸುವದಿಲ್ಲ. ಕಲ್ಪನೆಯಿಂದಲೇ ಚಿತ್ರಿಸುತ್ತಾರೆ. ಅವರ ಚಿತ್ರಗಳೆಂದರೆ, ಗುರುತುಗಳಿಂದ ಅವರ ಅನುಭವ ಪರಂಪರೆಯನ್ನು ವ್ಯಕ್ತಪಡಿಸುತ್ತಾರೆ. ಅವರ ಚಿತ್ರಗಳಲ್ಲಿ ಒಂದು ಶಕ್ತಿ ಇರುತ್ತದೆ. ಮಕ್ಕಳ ಚಿತ್ರಕಲೆಯನ್ನು ಶುದ್ಧವಾದ ಕಲೆ ಎನ್ನಬಹುದು ಎಂದರು. ಚಿತ್ರಕಲೆಯು ಮಗುವಿನ ಮಾನಸಿಕ ಬೆಳವಣಿಗೆಗೆ ಕಾರಣವಾಗುತ್ತದೆ.

ವಿದ್ಯಾರ್ಥಿಗಳು ಕೇವಲ ಪರಿಸರದ ಚಿತ್ರಗಳಿಗೆ ಮಾತ್ರ ಸೀಮಿತವಾಗದೇ ಪ್ರಪಂಚವೇ ಒಂದು ವಿಶಿಷ್ಟ ವಿಷಯವಾಗಿದ್ದು, ಇದನ್ನು ಅರಿತು ತಮ್ಮ ಕಲ್ಪನೆಯಲ್ಲಿಯೇ ಚಿತ್ರವನ್ನು ಬರೆಯಬೇಕು.