ಸಿದ್ದಾಪುರ, ಫೆ. 19: ಅವ್ಯವಸ್ಥೆಯ ಆಗರವಾಗಿರುವ ಸಿದ್ದಾಪುರ ಗ್ರಾ.ಪಂ.ನಲ್ಲಿ ಅಭಿವೃದ್ಧಿ ಕಾರ್ಯಗಳು ಮರೀಚಿಕೆಯಾಗಿದ್ದು, ಇದೀಗ ಮಾಂಸ, ಮೀನು ಮಾರಾಟದ ಬಗ್ಗೆ ಪರ-ವಿರೋಧಗಳು ಏರ್ಪಟ್ಟಿದೆ.
ಜಿಲ್ಲೆಯಲ್ಲಿ ಅತೀ ಹೆಚ್ಚು ವರಮಾನ ಹೊಂದಿರುವ ಸಿದ್ದಾಪುರ ಗ್ರಾ.ಪಂ., ತನ್ನ ಆದಾಯದ ಪ್ರಮುಖ ಭಾಗವಾಗಿರುವ ಕುರಿ, ಕೋಳಿ ಹಾಗೂ ಮೀನು ಮಾರಾಟ ಹಕ್ಕಿನ ಬಗ್ಗೆ ಪರಸ್ಪರ ಗೊಂದÀಲ ಏರ್ಪಟ್ಟಿದ್ದು, ಮಾಂಸ ಮಾರಾಟಗಾರರು ಗ್ರಾ.ಪಂ.ಯನ್ನು ತಮ್ಮ ಹಿಡಿತದಲ್ಲಿಟ್ಟು ಕೊಂಡಿರುವ ಆರೋಪಗಳು ಕೇಳಿ ಬರುತ್ತಿವೆ.
ಸಿದ್ದಾಪುರ ಸಂತೆ ಮಾರುಕಟ್ಟೆಯಲ್ಲಿದ್ದ ಕೋಳಿ, ಕುರಿ, ಹಂದಿ ಹಾಗೂ ಹಸಿ ಮೀನಿನ ವ್ಯಾಪಾರವನ್ನು ಕೆಲವರ ಒತ್ತಾಯದಿಂದ ಕಳೆದ 4 ವರ್ಷಗಳ ಹಿಂದೆ ಪಟ್ಟಣಕ್ಕೆ ವರ್ಗಾಯಿಸಲಾಗಿತ್ತು. ಪಟ್ಟಣದ ವಿವಿಧ ಭಾಗದಲ್ಲಿ ಮಾಂಸ ಮಾರಾಟ ನಡೆಸುತ್ತಿದ್ದು, ಇದರಿಂದಾಗಿ ಸಾರ್ವಜನಿಕರಿಗೆ ತೊಂದರೆ ಯಾಗುತ್ತಿದೆ ಎಂದು ಗ್ರಾಮಸ್ಥರು ಹಲವಾರು ಬಾರಿ ಗ್ರಾ.ಪಂ.ಗೆ ಮನವಿ ಸಲ್ಲಿಸಿದ್ದರು. ಮಾತ್ರವಲ್ಲದೇ ಮಾಂಸ ಮಾರಾಟಗಾರರು ಮಾಂಸದ ತ್ಯಾಜ್ಯಗಳನ್ನು ರಸ್ತೆಗಳಲ್ಲಿ ವಿಲೇವಾರಿ ಮಾಡುತ್ತಿರುವದರಿಂದ ರಸ್ತೆಯಲ್ಲಿ ಸಂಚರಿಸುವವರು ಮೂಗು ಮುಚ್ಚಿಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಗ್ರಾಮಸ್ಥರ ದೂರಿನಿಂದಾಗಿ ಕಳೆದ ಸಾಲಿನಲ್ಲಿ ಗ್ರಾ.ಪಂ. ಆಡಳಿತ ಮಂಡಳಿಯು ಕೋಳಿ, ಕುರಿ ಹಾಗೂ ಹಸಿ ಮೀನು ಮಾರಾಟದ ಲೈಸನ್ಸ್‍ನ್ನು ರದ್ದುಗೊಳಿಸಿ, ಮಾರುಕಟ್ಟೆಯಲ್ಲಿ ಮಾರಾಟ ಮಾಡಬೇಕೆಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ಸಿದ್ದಾಪುರ ಮಾರುಕಟ್ಟೆಯಲ್ಲಿ ಮಾಂಸ, ಮೀನು ಮಾರಾಟ ಮಾಡಲು ಸೂಕ್ತ ಮಳಿಗೆಗಳು ಹಾಗೂ ಮೂಲಭೂತ ಸೌಕರ್ಯಗಳು ಇಲ್ಲದ ಹಿನ್ನೆಲೆಯಲ್ಲಿ 2016-17 ನೇ ಸಾಲಿನಲ್ಲಿ ಲೈಸನ್ಸ್‍ನ್ನು ಒಂದು ವರ್ಷಕ್ಕೆ ನೀಡಲು ತೀರ್ಮಾನಿಸಲಾಯಿತ್ತು. ಬಳಿಕ ನಡೆದ ಸಭೆಗಳಲ್ಲಿ 2017-18 ನೇ ಸಾಲಿನಲ್ಲಿ ಮಾಂಸ ಹಾಗೂ ಹಸಿ ಮೀನು ಮಾರಾಟದ ಹಕ್ಕನ್ನು ಟೆಂಡರ್ ಮಾಡಬೇಕೆಂದು ತೀರ್ಮಾನಿಸಿ ಮಾರುಕಟ್ಟೆಯಲ್ಲಿ ನೂತನ ಮಳಿಗೆ ನಿರ್ಮಾಣಕ್ಕೆ ಒಟ್ಟು ರೂ. 12 ಲಕ್ಷ ವೆಚ್ಚದಲ್ಲಿ ನೂತನ ಮಳಿಗೆ ಹಾಗೂ ಮೂಲಭೂತ ಸೌಕರ್ಯವನ್ನು ಒದಗಿಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಬಳಿಕ ರೂ. 12 ಲಕ್ಷ ಕ್ರಿಯಾ ಯೋಜನೆ ತಯಾರಿಸಿ, ತಾಲೂಕು ಕಾರ್ಯ ನಿರ್ವಹಣಾಧಿಕಾರಿಗಳ ಅನುಮೋದನೆ ಯನ್ನು ಪಡೆದಿದ್ದು, ಇದೀಗ ಕಾಮಗಾರಿಯು ಮುಕ್ತಾಯದ ಹಂತ ತಲಪಿದೆ.
ಆದರೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ನೂತನ ಮಳಿಗೆ ನಿರ್ಮಿಸಿದ್ದರೂ ಕೂಡ ಕೆಲವು ಮಾಂಸ ವ್ಯಾಪಾರಿಗಳ ಒತ್ತಡಕ್ಕೆ ಮಣಿದು ಪ್ರಸಕ್ತ ಸಾಲಿನಲ್ಲೂ ಪಟ್ಟಣದಲ್ಲಿಯೇ ಮಾಂಸ ಮಾರಾಟ ಮಾಡಲು ತೆರೆ ಮೆರೆಯಲ್ಲಿ ಕಸರತ್ತು ನಡೆಸುತ್ತಿರುವದು ಗ್ರಾ.ಪಂ.ಯ ವರಮಾನಕ್ಕೆ ಕೊಡಲಿ ಪೆಟ್ಟು ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಈಗಾಗಲೇ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಮಳಿಗೆಗಳು ನಿಷ್ಪ್ರಯೋಜಕವಾಗುವದರಲ್ಲಿ ಸಂಶಯವಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ಈಗಾಗಲೇ ಸಿದ್ದಾಪುರ ವ್ಯಾಪ್ತಿಯಲ್ಲಿ ಕಸದ ವಿಲೇವಾರಿ ಹೆಚ್ಚಾಗಿದ್ದು, ಅಶುಚಿತ್ವ ತಾಂಡವವಾಡುತ್ತಿದೆ. ಹೀಗಾಗಿ ಮಾಂಸ ಹಾಗೂ ಹಸಿ ಮೀನಿನ ವ್ಯಾಪಾರವನ್ನು ಮಾರುಕಟ್ಟೆಗೆ ಸ್ಥಳಾಂತರಿಸಿ ಪಟ್ಟಣದ ಶುಚಿತ್ವವನ್ನು ಕಾಪಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಈ ಬಗ್ಗೆ ಆಸಕ್ತಿ ವಹಿಸಬೇಕಾದ ಗ್ರಾ.ಪಂ. ಅಧ್ಯಕ್ಷರು ತಮ್ಮ ಆಪ್ತರೋರ್ವರ ಮಾಂಸ ವ್ಯಾಪಾರಿಯ ಒತ್ತಡಕ್ಕೆ ಮಣಿದು ಮಾರುಕಟ್ಟೆಯ ನೂತನ ಮಳಿಗೆಯ ಕಾಮಗಾರಿಯನ್ನು ಪೂರ್ಣಗೊಳಿಸದೆ, ವಿಳಂಬ ಮಾಡುತ್ತಿರುವ ಬಗ್ಗೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಿದ್ದಾಪುರ ಭಾಗದಲ್ಲಿ ಹಲವಾರು ಸಮಸ್ಯೆಗಳಿದ್ದು, ಮುಖ್ಯ ಸಮಸ್ಯೆಯಾದ ಕಸ ವಿಲೇವಾರಿಗೆ ಅನುಕೂಲ ವಾಗುವಂತೆ ಮಾರುಕಟ್ಟೆಯಲ್ಲಿ ನೂತನ ಮಳಿಗೆ ನಿರ್ಮಾಣಕ್ಕೆ ಮುಂದಾದ ಸಂದರ್ಭ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದರು. ಗ್ರಾ.ಪಂ. ಆಡಳಿತ ಮಂಡಳಿಯೂ ಕೂಡ ಮಾಂಸ ಹಾಗೂ ಮೀನು ಮಾರಾಟವನ್ನು ಮಾರುಕಟ್ಟೆಗೆ ತರುವದಾಗಿ ಘೋಷಿಸಿದ್ದು, ಇದೀಗ ತನ್ನ ಆಸಕ್ತಿ ಕಳೆದುಕೊಂಡಂತಿದೆ.
ಮಾಂಸ ಮಾರಾಟದಲ್ಲಿ ರಾಜಕೀಯ?
ಕಳೆದ ಹಲವಾರು ವರ್ಷಗಳಿಂದ ಮಾರ್ಚ್ ತಿಂಗಳಲ್ಲಿ ಮಾಂಸ ಮೀನು ಮಾರಾಟದ ಬಗ್ಗೆ ಅನೇಕ ಗುಪ್ತ ಸಭೆಗಳು ನಡೆದ ಬಗ್ಗೆ ಕೇಳಿ ಬಂದಿದೆ.
ಈಗಾಗಲೇ ಸಿದ್ದಾಪುರ ವ್ಯಾಪ್ತಿಯಲ್ಲಿ ಮಾಂಸ ಹಾಗೂ ಹಸಿ ಮೀನು ಮಾರಾಟದ ವಿಚಾರ ವ್ಯಾಪಕ ಚರ್ಚೆಯಲ್ಲಿದ್ದು, ಕೆಲ ಗುಪ್ತ ಸಭೆಗಳು ನಡೆದಿರುವ ಬಗ್ಗೆ ತಿಳಿದು ಬಂದಿದೆ. ಗ್ರಾ.ಪಂ. ಸದಸ್ಯರಲ್ಲಿ ಕೆಲ ಭಿನ್ನಾಭಿಪ್ರಾಯಗಳು ಏರ್ಪಟ್ಟಿದ್ದು, ಮುಂಬರುವ ಸಭೆಗಳಲ್ಲಿ ಕಸದ ವಿಲೇವಾರಿ ವಿಚಾರವನ್ನು ಬದಿಗೊತ್ತಿ ಮಾಂಸ ಹಾಗೂ ಮೀನು ಮಾರಾಟದ ಬಗ್ಗೆ ವ್ಯಾಪಕ ಚರ್ಚೆ ನಡೆಯುವ ಸಾಧ್ಯತೆಯೂ ಇದೆ ಎನ್ನಲಾಗಿದೆ.
ಒಟ್ಟಿನಲ್ಲಿ ಸಮಸ್ಯೆಗಳ ತವರೂರಾಗಿರುವ ಸಿದ್ದಾಪುರದಲ್ಲಿ ಮತ್ತೆ ಮಾಂಸ ಹಾಗೂ ಮೀನು ಮಾರಾಟದ ಹಕ್ಕಿನ ಬಗ್ಗೆ ಗೊಂದಲ ಏರ್ಪಟ್ಟಿದ್ದು, ಪ್ರತಿಕ್ರಿಯಿ ಸಬೇಕಾದ ಗೌರವ ಸ್ಥಾನದಲ್ಲಿರು ವವರು ಮೌನಕ್ಕೆ ಶರಣಾಗಿರುವದು ದುರಂತವೇ ಸರಿ.