ಮಡಿಕೇರಿ, ಫೆ. 21: ಯಾವದೇ ಪಾಸ್‍ಪೋರ್ಟ್, ವೀಸಾ ಇಲ್ಲದೆ ಅಕ್ರಮವಾಗಿ ಭಾರತಕ್ಕೆ ನುಸುಳಿ ಜಿಲ್ಲೆಗೆ ಆಗಮಿಸಿದ್ದ ಬಾಂಗ್ಲಾದೇಶಿಯೋರ್ವನನ್ನು ವೀರಾಜಪೇಟೆ ಪೊಲೀಸರು ಬಂಧಿಸಿರುವ ಪ್ರಕರಣ ನಡೆದಿದೆ. ತಾ. 19 ರಂದು ರಾತ್ರಿ ಬಾಂಗ್ಲಾದೇಶದಿಂದ ಒಬ್ಬ ವ್ಯಕ್ತಿ ವೀರಾಜಪೇಟೆ ನಗರದ ಮೊಗರಗಲ್ಲಿಯ ನಿವಾಸಿ, ಅಬ್ದುಲ್ ಕರೀಂ ಅವರ ಮನೆಯ ಬಳಿ ಬಂದಿರುವದಾಗಿ ದೊರೆತ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ವೀರಾಜಪೇಟೆ ನಗರ ಪೊಲೀಸ್ ಠಾಣಾಧಿಕಾರಿ ಸಂತೋಷ್ ಕಶ್ಯಪ್ ಹಾಗೂ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ಅಲ್ಲಿದ್ದ ಅಬ್ದುಲ್ ಕರೀಂ ಎಂಬವರನ್ನು ವಿಚಾರಿಸಿದಾಗ ಅಬ್ದುಲ್ ಕರೀಂ ತೋರಿಸಿದ ವ್ಯಕ್ತಿಯನ್ನು ವಿಚಾರಿಸಲಾಗಿದೆ. ಆತ ತನ್ನ ಹೆಸರು ಸಹರುಲ್ ಇಸ್ಲಾಂ, ತಂದೆ ಅಬ್ದುಲ್ ಮನ್ನನ್, ಪ್ರಾಯ 22 ವರ್ಷ, ಗಾರೆ ಕೆಲಸ, ಸ್ವಂತ ವಿಳಾಸ ದಿಹಾರ್ ಮಾಣಿಕ್ ಚೌಕ್, ಆಸರ್ ದೋಹಾ ಅಂಚೆ, ಗುದಗರಿ ಥಾನಾ, ರಾಜಸೈ ಜಿಲ್ಲೆ, ಢಾಕಾ ರಾಜ್ಯ, ಬಾಂಗ್ಲಾದೇಶ ಎಂದು ತಿಳಿಸಿದ್ದಾನೆ. ಪಾಸ್ ಪೋರ್ಟ್ ಮತ್ತು ವೀಸಾ ಬಗ್ಗೆ ವಿಚಾರಿಸಲಾಗಿ ತನ್ನ ಬಳಿ ಯಾವದೇ ಪಾಸ್ ಪೋರ್ಟ್ ವೀಸಾ ಇರುವದಿಲ್ಲ ತಾನು ಬಾಂಗ್ಲಾದೇಶದಿಂದ ಕೂಲಿ ಕೆಲಸಕ್ಕಾಗಿ ಅಕ್ರಮವಾಗಿ ನುಸುಳಿಕೊಂಡು ಭಾರತಕ್ಕೆ ಬಂದಿರುವದಾಗಿ ತಿಳಿಸಿದ್ದಾನೆ.
ಆತನನ್ನು ವಶಕ್ಕೆ ಪಡೆದು ಠಾಣೆಯಲ್ಲಿ ವೀರಾಜಪೇಟೆ ಉಪ ವಿಭಾಗದ ಡಿವೈಎಸ್‍ಪಿ ನಾಗಪ್ಪ, ವೀರಾಜಪೇಟೆ ವೃತ್ತ ನಿರೀಕ್ಷಕ ಕುಮಾರ್ ಆರಾದ್ಯ ಅವರುಗಳ ಮಾರ್ಗದರ್ಶನದಲ್ಲಿ ವಿಚಾರಣೆ ಮಾಡಲಾಗಿ ಸಹರುಲ್ ಇಸ್ಲಾಂ 2 ವರ್ಷಗಳಲ್ಲಿ ಕೂಲಿ
(ಮೊದಲ ಪುಟದಿಂದ) ಕೆಲಸಕ್ಕೆಂದು 3ನೇ ಬಾರಿ ಬಾಂಗ್ಲಾ ದೇಶದಿಂದ ಅಕ್ರಮವಾಗಿ ನುಸುಳಿಕೊಂಡು ಭಾರತ ದೇಶಕ್ಕೆ ಬಂದಿರುವದಾಗಿ ತಿಳಿದು ಬಂದಿರುತ್ತದೆ. ಈತನ ಮೇಲೆ ವೀರಾಜಪೇಟೆ ನಗರ ಪೊಲೀಸ್ ಠಾಣಾ ಮೊ.ಸಂ. 20/ 2017 ಕಲಂ 14 ಖಿhe ಈoಡಿeigಟಿeಡಿs’ ಂಛಿಣ 1946 ರ ಪ್ರಕಾರ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.
ಆರೋಪಿ ಸಹರುಲ್ ಇಸ್ಲಾಂನು 8 ತಿಂಗಳ ಹಿಂದೆ ಕೂಲಿಗಾಗಿ ಬಾಂಗ್ಲಾದೇಶದಿಂದ ಅಕ್ರಮವಾಗಿ ನುಸುಳಿಕೊಂಡು ಭಾರತಕ್ಕೆ ಬಂದು ವೀರಾಜಪೇಟೆಯಲ್ಲಿ ಪಶ್ಚಿಮ ಬಂಗಾಳದ, ಮುರ್ಷಿದಾಬಾದ್‍ನ ಮೂಲದವನಾದ ತಾರೀಫ್ ಶೇಖ್, ತಂದೆ ಎಂ.ಡಿ. ಸೈಫಲ್ ಇಸ್ಲಾಂ, ಮೇಷನ್ ಕೆಲಸ ಈತನ ಜೊತೆಯಲ್ಲಿ ಮೇಷನ್ ಕೆಲಸ ಮಾಡಿಕೊಂಡಿದ್ದಾನೆ. ಈತನ ಬಗ್ಗೆ ಪೊಲೀಸ್‍ಗೆ ಮಾಹಿತಿ ನೀಡದೇ ಆಶ್ರಯ ನೀಡಿದ ಹಿನ್ನೆಲೆಯಲ್ಲಿ ತಾರೀಫ್‍ನನ್ನು ಕೂಡ ಬಂಧಿಸಲಾಗಿದೆ.
ಈಗಾಗಲೇ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್ ಅವರ ನಿರ್ದೇಶನದ ಮೇರೆಗೆ ಹೊರ ರಾಜ್ಯದಿಂದ ಬಂದಂತಹ ಎಲ್ಲಾ ಕೂಲಿ ಕಾರ್ಮಿಕರುಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಸೂಚನೆ ನೀಡಿದ ಮೇರೆಗೆ ಠಾಣೆಯಲ್ಲಿ ಹೊರ ರಾಜ್ಯದಿಂದ ಬಂದಂತಹ ಎಲ್ಲಾ ಕೂಲಿ ಕಾರ್ಮಿಕರ ಬಗ್ಗೆ ಪರಿಶೀಲನೆ ನಡೆಸಿ, ವಿವರಗಳನ್ನು ಠಾಣೆಯಲ್ಲಿ ಸಂಗ್ರಹಿಸಲಾಗುತ್ತಿದೆ. ಸಹರುಲ್ ಇಸ್ಲಾಂ ಹಾಗೂ ತಾರೀಫ್ ಶೇಖ್‍ನನ್ನು ಈ ಪ್ರಕರಣದಲ್ಲಿ ಬಂಧಿಸಿ ನ್ಯಾಯಾಲಯದಲ್ಲಿ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ಪೊಲೀಸ್ ವಶಕ್ಕೆ ಪಡೆಯಲಾಗಿದೆ.
ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ವೀರಾಜಪೇಟೆ ಉಪ ವಿಭಾಗದ ಡಿವೈಎಸ್‍ಪಿ ನಾಗಪ್ಪ ನೇತೃತ್ವದಲ್ಲಿ ವೃತ್ತ ನಿರೀಕ್ಷಕ ಕುಮಾರ್ ಆರಾಧ್ಯ ಅವರ ಉಸ್ತುವಾರಿಯಲ್ಲಿ ಠಾಣಾಧಿಕಾರಿ ಸಂತೋಷ್ ಕಶ್ಯಪ್, ಸಹಾಯಕ ಠಾಣಾಧಿಕಾರಿಗಳಾದ ಸುಬ್ರಮಣಿ, ಶಿವಪ್ಪ, ಮುಖ್ಯಪೇದೆಗಳಾದ ಟಿ.ಎಂ. ಸಾಬು, ಸುನಿಲ್, ಎನ್.ಕೆ. ಉಮೇಶ, ಪಿ.ಪಿ. ಕಾವೇರಮ್ಮ, ಸಿಬ್ಬಂದಿಗಳಾದ ರಂಜನ್, ಮಧು, ಮುನೀರ್, ಯೋಗೇಶ್ ಅವರುಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ತೋಟಗಳಲ್ಲಿ, ಹೊಟೇಲ್, ಹೋಂಸ್ಟೇ, ರೆಸಾರ್ಟ್, ಕಟ್ಟಡ ಕಾಮಗಾರಿ ಕೆಲಸಗಳಲ್ಲಿ ಹಾಗೂ ಇತರೆ ಕಡೆಗಳಲ್ಲಿ ಬಾಂಗ್ಲಾದೇಶಿಯರು ಅಕ್ರಮವಾಗಿ ಬಂದು ನೆಲೆಸಿರುವ ಸಾಧ್ಯತೆ ಇದ್ದು, ಈ ಬಗ್ಗೆ ಮಾಹಿತಿಗಳೇನಾದರೂ ಇದ್ದಲ್ಲಿ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಹಾಗೂ ಪೊಲೀಸ್ ಕಂಟ್ರೋಲ್ ರೂಂಗೆ (08272- 228330) ಮಾಹಿತಿ ನೀಡುವಂತೆ ಪೊಲೀಸ್ ಇಲಾಖೆ ಕೋರಿದೆ.