ಮಡಿಕೇರಿ, ಫೆ. 20: ಗಿರಿಜನ ಆಶ್ರಮ ಶಾಲೆಗಳನ್ನು ಕೇರಳ ರಾಜ್ಯದ ಮಾದರಿಯಲ್ಲಿ ಉನ್ನತೀಕರಣ ಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟ ಹಾಗೂ ಗಿರಿಜನ ಆಶ್ರಮ ಶಾಲಾ ಪೋಷಕರ ವೇದಿಕೆಗಳ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ಆಶ್ರಮ ಶಾಲೆಗಳಲ್ಲಿ ಅತ್ಯಂತ ಕಳಪೆ ಗುಣಮಟ್ಟದ ಶಿಕ್ಷಣ, ಆಹಾರ, ಆರೋಗ್ಯ, ನೈರ್ಮಲ್ಯ, ಭದ್ರತೆ, ಮೇಲ್ವಿಚಾರಣೆ, ಮೂಲಭೂತ ಸೌಕರ್ಯಗಳಿಂದಾಗಿ ದಿನನಿತ್ಯ ಸಾವಿರಾರು ಬುಡಕಟ್ಟು ಮಕ್ಕಳ ಹಕ್ಕುಗಳ ಉಲ್ಲಂಘನೆ ಆಗುತ್ತಿವೆ. ಈ ಬಗ್ಗೆ ಸಾಕಷ್ಟು ಬಾರಿ ಸರ್ಕಾರದ ಗಮನಕ್ಕೆ ತರಲಾಗಿತ್ತು. ಪಕ್ಕದ ಕೇರಳ ರಾಜ್ಯದಲ್ಲಿ ವ್ಯವಸ್ಥಿತವಾಗಿ ಬುಡಕಟ್ಟು ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಶಿಕ್ಷಣ ಇಲಾಖೆಯ ಸಂಯೋಜನೆಯೊಂದಿಗೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಮೂಲಕ ನೀಡುತ್ತಿರುವ ಬಗ್ಗೆ ಅಧ್ಯಯನ ನಡೆಸಿ ವರದಿಯನ್ನು ಸರ್ಕಾರಕ್ಕೆ ನೀಡಲಾಗಿದೆ. ಆದರೆ ರಾಜ್ಯ ಸರ್ಕಾರ ಕೇರಳ ಮಾದರಿಯಲ್ಲಿ ಆಶ್ರಮ ಶಾಲೆಗಳನ್ನು ಉನ್ನತೀಕರಿಸಲಾಗುವದೆಂದು ಭರವಸೆ ನೀಡಿದ್ದರೂ, ಕಳೆದ 4 ವರ್ಷಗಳಿಂದ ಅನುಷ್ಠಾನ ಪ್ರಕ್ರಿಯೆಗೆ ಚಾಲನೆ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಪ್ರಸಕ್ತ ಆಯವ್ಯಯದಲ್ಲೇ ಈ ಬಗ್ಗೆ ಘೋಷಣೆ ಮಾಡುವದರ ಮೂಲಕ ಕೇರಳ ಮಾದರಿಯಲ್ಲಿ ರಾಜ್ಯದ ಗಿರಿಜನ ಆಶ್ರಮ ಶಾಲೆಗಳನ್ನು ಉನ್ನತೀಕರಿಸು ವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಸಾಂಕೇತಿಕ ಧರಣಿ ಸತ್ಯಾಗ್ರಹ ನಡೆಸಿ ಉಪವಿಭಾಗಾಧಿಕಾರಿಗಳಾದ ಡಾ. ನಂಜುಂಡೇಗೌಡ ಅವರ ಮೂಲಕ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಕರ್ನಾಟಕ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟದ ಜಿಲ್ಲಾ ಸಂಚಾಲಕ ವೈ.ಪಿ. ತಮ್ಮಯ್ಯ, ರಾಜ್ಯ ಕಾರ್ಯದರ್ಶಿ ಶೈಲೇಂದ್ರ, ಹಳ್ಳಿಗಟ್ಟು ಹಾಡಿ ಅಧ್ಯಕ್ಷ ಗಪ್ಪು, ಗಿರಿಜನ ಆಶ್ರಮ ಶಾಲಾ ಪೋಷಕರ ವೇದಿಕೆ ಜಿಲ್ಲಾ ಅಧ್ಯಕ್ಷೆ ಲಕ್ಷ್ಮಿ, ರಮೇಶ್ ಹಾಗೂ ಇನ್ನಿತರರು ಇದ್ದರು.