ವೀರಾಜಪೇಟೆ, ಫೆ, 21: ತೆಲುಗರ ಬೀದಿಯಲ್ಲಿರುವ ಮಾರಿಯಮ್ಮ ಹಾಗೂ ಅಂಗಾಳಪರಮೇಶ್ವರಿ ದೇವಸ್ಥಾನದ ಟ್ರಸ್ಟ್ ವತಿಯಿಂದ ವರ್ಷಂಪ್ರತಿಯಂತೆ ಈ ವರ್ಷ ತಾ:22ರಿಂದ (ಇಂದಿನಿಂದ) ಮಹಾಶಿವರಾತ್ರಿ ಉತ್ಸವವನ್ನು ಸಂಭ್ರಮದಿಂದ ಆಚರಿಸಲಾಗುವುದು ಎಂದು ಟ್ರಸ್ಟ್ ಅಧ್ಯಕ್ಷ ಟಿ. ಕೆ. ಶ್ರೀನಿವಾಸ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶ್ರೀನಿವಾಸ್ ಅವರು ಸಾಧು ಶೆಟ್ಟಿ 24 ಮನೆ ತೆಲುಗು ಶೆಟ್ಟಿ ಸಂಘದ ನೇತೃತ್ವದಲ್ಲಿ ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕಿ ಆದಿಮಲೆಯನೂರು ಅಮ್ಮ, ಅಂಗಾಳ ಪರಮೇಶ್ವರಿ ದೇವಸ್ಥಾನದಲ್ಲಿ ಉತ್ಸವ ನಡೆಯಲಿದ್ದು, ಶನಿವಾರದವರೆಗೂ ಉತ್ಸವ ಮುಂದುವರೆಯಲಿದೆ ಎಂದರು.

ಟ್ರಸ್ಟ್ ಉಪಾಧ್ಯಕ್ಷ ಟಿ.ಜೆ.ಶಂಕರ್ ಶೆಟ್ಟಿ ಮಾತನಾಡಿ ತಾ. 22ರಂದು(ಇಂದು) ಬೆಳಿಗ್ಗೆ 7ಗಂಟೆಗೆ ಧ್ವಜ ಸ್ಥಂಭ ಪೂಜೆಯೊಂದಿಗೆ ಉತ್ಸವಕ್ಕೆ ಚಾಲನೆ ನೀಡಲಾಗುವದು. ತಾ. 23ರಂದು ಅಪರಾಹ್ನ 12 ಗಂಟೆಗೆ ತಳಿಗೆ ಪೂಜೆ, ಕಾವಲು ದೇವತೆಗಳ ಪೂಜೆ ತಾ. 24ರಂದು ಬೆಳಿಗ್ಗೆ 7ಗಂಟೆಗೆ ವಿವಿಧ ಅಭಿಷೇಕ ಪೂಜೆ ನಂತರ ಪ್ರಥಮ ಕಾಲ ದ್ವಿತೀಯ ಕಾಲಗಳ ಅಭಿಷೇಕ ಪೂಜೆಗಳು ನಡೆಯಲಿವೆ. ತಾ. 25ರಂದು ಬೆಳಿಗ್ಗೆ 4 ಗಂಟೆಗೆ ತೃತೀಯ ಹಾಗೂ 6ಗಂಟೆಗೆ ಚತುರ್ಥ ಕಾಲ ಪೂಜೆ ಜರುಗಲಿವೆ. ಮಧ್ಯಾಹ್ನ 12 ಗಂಟೆಗೆ ಅಮ್ಮನಿಗೆ ಅಲಂಕಾರ ಪೂಜೆ ಅನ್ನಸಂತರ್ಪಣೆ ನಡೆಯಲಿದೆ ಎಂದು ಹೇಳಿದರು.

ಕಾರ್ಯದರ್ಶಿ ಟಿ.ಎಸ್. ಲೊಕೇಶ್ ಮಾತನಾಡಿ ಅಪರಾಹ್ನ 2-30ಗಂಟೆಗೆ ಅಂಗಾಳ ಪರಮೇಶ್ವರಿ ದೇವಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯೊಂದಿಗೆ ವಾದ್ಯಗೋಷ್ಠಿಯೊಂದಿಗೆ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಯಲಿದೆ. ರಾತ್ರಿ 8ಗಂಟೆಗೆ ವಿಶೇಷ ಮಹಾ ಪೂಜಾಸೇವೆಯೊಂದಿಗೆ ಶಿವರಾತ್ರಿ ಉತ್ಸವ ತೆರೆ ಕಾಣಲಿದೆ ಎಂದು ಹೇಳಿದರು. ಗೋಷ್ಠಿಯಲ್ಲಿ ಖಜಾಂಚಿ ಟಿ.ಡಿ. ಗುರುನಾಥ್, ಟಿ.ಎನ್. ಮಂಜುನಾಥ್ ಉಪಸ್ಥಿತರಿದ್ದರು.