ಭಾಗಮಂಡಲ, ಫೆ. 20: ಸಮೀಪದ ಅಯ್ಯಂಗೇರಿ ಗ್ರಾಮದಲ್ಲಿ ಗೊಲ್ಲ ಜನಾಂಗದವರ ಚಿನ್ನತಪ್ಪ ಉತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು. ವಿವಿಧ ಭಾಗಗಳಿಂದ ಸಹಸ್ರಾರು ಭಕ್ತರು ದೇವಾಲಯಕ್ಕೆ ಆಗಮಿಸಿ, ಕೃಷ್ಣನ ಕೊಳಲಿನ ನಾದವನ್ನು ಆಲಿಸಿದರು. ಸೂರ್ಯಾಸ್ತ ವಾಗುತ್ತಿ ದ್ದಂತೆ ಸಮೀಪದ ಕಲ್ಲುಹೊಳೆಗೆ ತೆರಳಿದ ಮಂದಿ ಸಾಂಪ್ರದಾಯಿಕ ಪೂಜಾವಿಧಿ ವಿಧಾನಗಳನ್ನು ನೆರವೇರಿಸಿದರು. ಬೆಳಗ್ಗಿನ ಜಾವ 3ಗಂಟೆಯ ವೇಳೆಗೆ ಧಾರಾಪೂಜೆ ನೆರವೇರಿತು. ಸೋಮವಾರ ಮಧ್ಯಾಹ್ನ 12.55ಕ್ಕೆ ದೇವಾಲಯ ದಿಂದ ಶ್ರೀಕೃಷ್ಣನದು ಎನ್ನಲಾದ ಕೊಳಲನ್ನು ಭಕ್ತಿಯಿಂದ ಹೊರ ತೆಗೆಯಲಾಯಿತು. ಇದೇ ಪ್ರಥಮ ಬಾರಿಗೆ ಬಿದ್ದಿಯಂಡ ಹರೀಶ್ ಕೊಳಲನ್ನು ಎತ್ತಿಕೊಂಡು ನಿರ್ಧಿಷ್ಟ ಜಾಗಗಳಲ್ಲಿ ಮೂರು ಬಾರಿ ನುಡಿಸುತ್ತಾ ಬಂದು ಮಧ್ಯಾಹ್ನ 1.25 ರ ವೇಳೆಗೆ ಊರ ಮಂದ್‍ಗೆ ಆಗಮಿಸಿದರು. ಅಶ್ವತ್ಥ ವೃಕ್ಷದ ಕೆಳಗೆ ನೆರೆದಿದ್ದ ಭಕ್ತಾದಿಗಳ ಸಮ್ಮುಖದಲ್ಲಿ ಕೃಷ್ಣನ ಕೊಳಲನ್ನು ನುಡಿಸಲಾಯಿತು. ಬಳಿಕ ನಾಳಿಯಂಡ ಮಾನಿ ಎಂಬಲ್ಲಿಂದ ಎತ್ತುಪೋರಾಟ ದೊಂದಿಗೆ ಹೊರಟ ಶ್ವೇತವಸ್ತ್ರಧರಿಸಿದ ಮಹಿಳೆಯರು ಊರಮಂದ್‍ಗೆ ಆಗಮಿಸಿದರು. ಬಳಿಕ ಊರಮಂದ್ ನ ಗದ್ದೆಯಲ್ಲಿ ಮೂರು ಸುತ್ತು ಎತ್ತು ಪೋರಾಟ ನಡೆಯಿತು. ತೆಂಗಿನ ಕಾಯಿಗೆ ಗುಂಡು ಹೊಡೆಯುವದರ ಮೂಲಕ ಹಬ್ಬದ ಕಟ್ಟು ಸಡಿಲಿಸಲಾಯಿತು. ತಪ್ಪಡ್ಕ ಸಲ್ಲಿಸಿದ ಬಳಿಕ ಶುದ್ಧ ಮುದ್ರಿಕೆಯವರನ್ನು ಮೀನಿಗೆ ಅಕ್ಕಿ ಹಾಕಲು ಆಹ್ವಾನಿಸಲಾಯಿತು. ಧಾರಾಪೂಜೆ ನಡೆದ ಸ್ಥಳಕ್ಕೆ ತೆರಳಿದ ಕುಟುಂಬಸ್ಥರು ಮೀನಿಗೆ ಅಕ್ಕಿ ಹಾಕಿದ ಬಳಿಕ ದೇವಾಲಯಕ್ಕೆ ತೆರಳುವದರೊಂದಿಗೆ ಉತ್ಸವಕ್ಕೆ ತೆರೆ ಎಳೆಯಲಾಯಿತು. ಚಿನ್ನತಪ್ಪ ಉತ್ಸವದಲ್ಲಿ ಅಯ್ಯಂಗೇರಿ ಗ್ರಾಮದ ಅಧಿಕ ಸಂಖ್ಯೆಯ ಗೊಲ್ಲ ಜನಾಂಗ ಬಾಂಧವರೊಂದಿಗೆ ಗ್ರಾಮದ 12 ಕುಳದವರು ಭಾಗಿ ಯಾಗಿದ್ದರು. ಉತ್ಸವದಲ್ಲಿ ತಕ್ಕರಾಗಿ ಬಿದ್ದಿಯಂಡ ಸುಭಾಷ್ ಕಾರ್ಯ ನಿರ್ವಹಿಸಿದರು.

- ಸುನಿಲ್‍ಕುಯ್ಯಮುಡಿ