ಸುಂಟಿಕೊಪ್ಪ, ಫೆ.20 : ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳನ್ನು ಉತ್ತಮ ನಾಗರಿಕನ್ನಾಗಿ ರೂಪಿಸಿದರೆ ಸಮಾಜಕ್ಕೆ ದೇಶಕ್ಕೆ ಉತ್ತಮ ಕಾಣಿಕೆ ಕೊಟ್ಟಂತಾಗುತ್ತದೆ ಎಂದು ದಾನಿ ಕೃಷ್ಣಭಟ್ ಹೇಳಿದರು.
ಸುಂಟಿಕೊಪ್ಪ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸೋಮವಾರಪೇಟೆ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮ ಸಹಯೋಗದಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಮಹಿಳಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿ ಮಕ್ಕಂದೂರಿನ ಶೂದ್ ಕಾಫಿ ತೋಟದ ಮಾಲೀಕ ಅಜಯ್‍ಶೂದ್ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವಿವಿಧ ಸ್ವಸಹಾಯ ಸಂಘಗಳಿಗೆ ನೀಡಲಾಗುವ ಸಾಲವನ್ನು ಪಡೆದ ಪ್ರತಿಯೊಬ್ಬ ಸದಸ್ಯರುಗಳು ಶೇಕಡ 100 ರಷ್ಟು ಸಾಲವನ್ನು ಮರುಪಾವತಿಸಿ ಸ್ವಾವಲಂಬಿ ಬದುಕನ್ನು ನಡೆಸಿಕೊಂಡು ಹೋಗುತ್ತಿರುವದು ಶ್ಲಾಘನೀಯ ಎಂದರು.
ಮುಖ್ಯ ಭಾಷಣಕಾರರಾಗಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಪನ್ಮೂಲ ವ್ಯಕ್ತಿಗಳು ಆರ್ಥಿಕ ಸಲಹೆಗಾರರಾದ ಗೀತಾ ಗಿರೀಶ್ ಅವರು ಕೌಟುಂಬಿಕ ಮಾಧ್ಯಮ ಪಾತ್ರ ಎಂಬ ವಿಷಯದ ಬಗ್ಗೆ ವಿಚಾರ ಮಂಡಿಸಿದರು.
ಅಧ್ಯಕ್ಷತೆಯನ್ನು ನಿವೃತ್ತ ಶಿಕ್ಷಕಿ ಸಾವಿತ್ರಿ ವಹಿಸಿದ್ದರು. ಸಮಾಜ ಸೇವಕಿ ಗೀತಾ ಬಸಪ್ಪ , ಸೋಮವಾರಪೇಟೆ ತಾಲೂಕು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಪ್ರಕಾಶ್ ರೈ ಮಾತನಾಡಿದರು. ಬೆಳಿಗ್ಗೆ ನಡೆದ ಮಹಿಳೆಯರ ಕ್ರೀಡಾಕೂಟವನ್ನು ಪ್ರಗತಿಪರ ಕೃಷಿಕರಾದ ದಾಸಂಡ ರಮೇಶ್ ಉದ್ಘಾಟಿಸಿದರು.
ಕೃಷಿ ಮೇಲ್ವಿಚಾರಕ ನಾಗರಾಜು, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಮಮತಾ, ಮೇಲ್ವಿಚಾರಕಿ ಸರಸ್ವತಿ, ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಯಶೋಧ, ಸಹಪ್ರತಿನಿಧಿಗಳಾದ ಜಯಲಕ್ಷ್ಮಿ, ಜ್ಯೋತಿ ಲಕ್ಷ್ಮೀ, ಶಾಲಿನಿ ಭಾಗೀರಥಿ, ಶಿವಕುಮಾರ್, ಚಿದಾನಂದ, ವಿನೋದ್ ಮತ್ತಿತರರು ಇದ್ದರು.
ಸಭಾ ಕಾರ್ಯಕ್ರಮದ ಮೊದಲಿಗೆ ಕಂಬಿಬಾಣೆ ಜ್ಞಾನ ವಿಕಾಸದ ಸೌಮ್ಯ ತಂಡ ಪ್ರಾರ್ಥಿಸಿ, ಟೆಟ್ಟಳ್ಳಿ ಭಗವತಿ ಜ್ಞಾನ ವಿಕಾಸ ಕೇಂದ್ರದ ಶುಭಲಕ್ಷ್ಮಿ ಸ್ವಾಗತಿಸಿ, ನಾಗರಾಜು ನಿರೂಪಿಸಿದರು.