*ಸಿದ್ದಾಪುರ, ಫೆ. 21: ಪ್ರವಾಸೀ ಕೇಂದ್ರಗಳಲ್ಲಿ ಸ್ವಚ್ಛತೆ ಕಾಪಾಡಬೇಕೆಂಬ ಕೂಗು ಎಲ್ಲೆಡೆ ಕೇಳಿಬರುತ್ತಿದೆ. ಅದರಲ್ಲೂ ನದಿದಂಡೆಗಳನ್ನು ಸಂರಕ್ಷಿಸುವದು ಎಲ್ಲರ ಹೊಣೆ.., ಆದರೆ ಜಿಲ್ಲೆಯ ಪ್ರಮುಖ ಪ್ರವಾಸೀ ತಾಣವಾಗಿರುವ ದುಬಾರೆಯಲ್ಲಿ ಕಾವೇರಿ ನದಿ ದಂಡೆಯಿರಲಿ.., ಇದೀಗ ನದಿಯೊಳಗಡೆಯೇ ಎಳನೀರು ಅಂಗಡಿಗಳು ತಲೆಎತ್ತಿವೆ. ಇದಕ್ಕೆ ಪಂಚಾಯಿತಿ ಪರವಾನಗಿ ನೀಡಿದೆಯೆಂದರೆ ಅಚ್ಚರಿಯ ವಿಚಾರವೇ ಸರಿ..!
ಇಲ್ಲಿಗೆ ಸಮೀಪದ ನಂಜರಾಯಪಟ್ಟಣ ಗ್ರಾ.ಪಂ. ವ್ಯಾಪ್ತಿಗೊಳಪಡುವ ದುಬಾರೆ ಪ್ರವಾಸಿ ತಾಣದಲ್ಲಿ ಈ ಹಿಂದಿನಿಂದಲೂ ಎಳನೀರು ಅಂಗಡಿಗಳು (ತಾತ್ಕಾಲಿಕ) ಕಾರ್ಯನಿರ್ವಹಿಸುತ್ತಿದ್ದವು. ಪಂಚಾಯಿತಿಯಿಂದ ರೂ. 250 ಶುಲ್ಕ ಪಡೆದು ಪರವಾನಿಗೆ ಪಡೆದುಕೊಂಡು ನದಿ ತಟದಲ್ಲಿ ಅಂಗಡಿಗಳನ್ನಿಡುತ್ತಿ ದ್ದರು. ಆದರೆ ಇದೀಗ ಶುಲ್ಕ ಹೆಚ್ಚಳವಾಗಿದ್ದು, ರೂ. 5 ಸಾವಿರ ಪಡೆದುಕೊಳ್ಳಲಾಗುತ್ತಿದೆ. ಇದರಿಂದಾಗಿ ನದಿ ಬದಿಯಲ್ಲಿದ್ದ ಅಂಗಡಿಗಳು ನದಿಯೊಳಗಡೆ ಇಳಿದಿವೆ. ಇದರಿಂದ ಸ್ವಚ್ಛತೆಗೆ ಧಕ್ಕೆಯಾಗುತ್ತಿದೆಯಲ್ಲದೆ, ನದಿ ನೀರು ಕೂಡ ಮಾಲಿನ್ಯವಾಗುತ್ತಿದೆ ಎಂದು ಗ್ರಾಮಸ್ಥರಾದ ಮಾಚಯ್ಯ, ದೇವಿ ಪ್ರಸಾದ್, ರಮೇಶ್ ಅವರುಗಳು ಖಂಡಿಸಿದ್ದಾರೆ. ಈ ಬಗ್ಗೆ ಅಧ್ಯಕ್ಷರಿಗೂ ದೂರು ಸಲ್ಲಿಸಿದ್ದಾರೆ. ಆದರೂ ಯಾವದೇ ಕ್ರಮ ಜರುಗಿದಂತೆ ಕಂಡು ಬರುತ್ತಿಲ್ಲ.
-ಅಂಚೆಮನೆ ಸುಧಿ