ಮಡಿಕೇರಿ, ಫೆ. 20: ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುವ ಸರಕಾರಿ / ಖಾಸಗಿ / ಗುತ್ತಿಗೆ ಆಧಾರದ ವೈದ್ಯರುಗಳಿಗೆ ಹಾಗೂ ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಹಾಗೂ ಆಸ್ಪತ್ರೆ / ನರ್ಸಿಂಗ್ ಹೋಂ / ಕ್ಲಿನಿಕ್ ವ್ಯವಸ್ಥೆಗಳಿಗೆ ರಕ್ಷಣೆ ಒದಗಿಸುವ ಬಗ್ಗೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಎ.ಕೆ. ಮನುಮುತ್ತಪ್ಪ ಮತ್ತು ಜಿಲ್ಲಾ ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ಸಂಚಾಲಕ ಡಾ. ಬಿ.ಸಿ. ನವೀನ್ ಕುಮಾರ್ ಅವರ ನೇತೃತ್ವದ ನಿಯೋಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಅವರನ್ನು ಭೇಟಿಯಾಗಿ ಮನವಿ ಅರ್ಪಿಸಿತು.
ಕೆಲವು ಸಂದರ್ಭಗಳಲ್ಲಿ ವೈದ್ಯರುಗಳ ಮೇಲೆ ಸಾರ್ವಜನಿಕರು, ರೋಗಿಗಳ ಸಂಬಂಧಿಕರು ಹಾಗೂ ಇತರರು ಹಲ್ಲೆಗೆ ಮುಂದಾಗುವದು, ಅವಾಚ್ಯ ಶಬ್ದಗಳ ಬಳಕೆ ಹಾಗೂ ಬೆದರಿಕೆಯ ಕ್ರಮಗಳನ್ನು ಅನುಸರಿಸುವದಲ್ಲದೇ, ನರ್ಸಿಂಗ್ ಹೋಂ, ಕ್ಲಿನಿಕ್ ಹಾಗೂ ಆಸ್ಪತ್ರೆಗಳಿಗೆ, ವಾಹನಗಳಿಗೆ ಹಾನಿಯುಂಟು ಮಾಡುವ ಘಟನೆಗಳು ನಡೆದಿವೆ. ಇದರಿಂದಾಗಿ ಸರಕಾರಿ ಆಸ್ಪತ್ರೆಗಳಿಗೆ ವೈದ್ಯರುಗಳು ಬರುತ್ತಿಲ್ಲ, ಮತ್ತೊಂದೆಡೆ ಖಾಸಗಿ ಹಾಗೂ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ವೈದ್ಯರುಗಳು ತುರ್ತು ಸಂದರ್ಭಗಳಲ್ಲಿ ಕನಿಷ್ಟ ಪ್ರಥಮ ಚಿಕಿತ್ಸೆ ನೀಡಲೂ ಹಿಂದೇಟು ಹಾಕುತ್ತಿದ್ದಾರೆ ಎಂದು ವಿಷಾಧಿಸಿದೆ.
ಮನವಿಗೆ ಸ್ಪಂದಿಸಿದ ಪೊಲೀಸ್ ವರಿಷ್ಠಾಧಿಕಾರಿಗಳು ಈ ಕುರಿತು ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಿಗೆ ಮತ್ತು ಉಪ ಠಾಣೆಗಳಿಗೆ ಅಧಿನಿಯಮದ ಕುರಿತು ಮಾಹಿತಿ ನೀಡಲಾಗುವದಲ್ಲದೆ, ಎಲ್ಲಾ ಸರ್ಕಾರಿ/ ಖಾಸಗಿ ಮತ್ತು ಕ್ಲಿನಿಕ್ಗಳಿಗೆ ಅಧಿನಿಯಮದ ಕುರಿತು ಸೂಚನಾ ಫಲಕವನ್ನು ಅಳವಡಿಸಿ ಕೊಳ್ಳುವಂತೆ ಸೂಚಿಸಲಾಗುವದೆಂದು ತಿಳಿಸಿದರು.
ನಿಯೋಗದಲ್ಲಿ ಡಾ.ಉದಯ್ ಕುಮಾರ್, ಡಾ.ಧ್ಯಾನ್ ಕುಶಾಲಪ್ಪ, ವೈದ್ಯಕೀಯ ಪ್ರಕೋಷ್ಠದ ಸದಸ್ಯ ಶಿವರಾಜ್ ಇದ್ದರು.