ಮಡಿಕೇರಿ, ಫೆ. 20: ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆಯ ಪುಸ್ತಕವನ್ನು ಮನೆ ಮನೆಗಳಿಗೆ ವಿತರಿಸುವ ಕಾರ್ಯಕ್ರಮಕ್ಕೆ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕ ಚಾಲನೆ ನೀಡಿದೆ.

ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆದ ಪ್ರಬುದ್ಧ ನೌಕರರ ಒಕ್ಕೂಟದ ಸಭೆಯಲ್ಲಿ ಖ್ಯಾತ ವೈದ್ಯರು ಹಾಗೂ ಒಕ್ಕೂಟದ ಪ್ರಮುಖರಾದ ಡಾ.ದೇವದಾಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ತುಳಿತಕ್ಕೊಳಗಾದ ಸಮುದಾಯಕ್ಕೆ ಡಾ.ಅಂಬೇಡ್ಕರ್ ಅವರು ಆದರ್ಶಪ್ರಾಯರಾಗಿದ್ದು, ಇವರ ಸಂದೇಶ ಮನೆ ಮನೆಗಳಿಗೆ ತಲುಪುವ ಅಗತ್ಯವಿದೆ. ಅಂಬೇಡ್ಕರ್ ಅವರ ಆದರ್ಶವನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳುವ ಮೂಲಕ ಸಾಮಾಜಿಕ ಕಳಕಳಿಯನ್ನು ಪ್ರದರ್ಶಿಸಬೇಕೆಂದರು.

ಒಕ್ಕೂಟದ ಪ್ರಮುಖರಾದ ಸಿದ್ದರಾಜು, ಶಿವಶಂಕರ್ ಹಾಗೂ ಚೆನ್ನಕೇಶವ ಮಾತನಾಡಿ ಅಂಬೇಡ್ಕರ್ ಅವರ ಗುಣಗಾನ ಮಾಡಿದರು, ಅಲ್ಲದೆ ದಲಿತ ಸಂಘರ್ಷ ಸಮಿತಿಯ ಪ್ರಯತ್ನಕ್ಕೆ ಸಹಕಾರ ನೀಡುವದಾಗಿ ತಿಳಿಸಿದರು.

ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಎಲ್. ದಿವಾಕರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮ ವನ್ನು ಡಾ. ಸತೀಶ್ ನಿರೂಪಿಸಿದರು. ಪ್ರಮುಖರಾದ ಅರುಣ್ ಕುಮಾರ್ ಸ್ವಾಗತಿಸಿ, ಹೆಚ್.ಸಿ.ಸತೀಶ್ ಕುಮಾರ್ ವಂದಿಸಿದರು. ಒಕ್ಕೂಟದ ಮೂರೂ ತಾಲೂಕುಗಳ ಪದಾಧಿಕಾರಿಗಳು ಹಾಗೂ ದಸಂಸ ಸದಸ್ಯರು ಉಪಸ್ಥಿತರಿದ್ದರು.