*ಗೋಣಿಕೊಪ್ಪಲು, ಫೆ. 21: ಕೊಂಗಣ ಹೊಳೆ ಕಿರು ನೀರಾವರಿ ಯೋಜನೆ, ಕಸ್ತೂರಿ ರಂಗನ್ ವರದಿ, ಸೂಕ್ಷ್ಮ ಪರಿಸರ ತಾಣ ಯೋಜನೆ ವಿರೋಧಿಸುವದಾಗಿ ತಾಲೂಕು ಭಾ.ಜ.ಪ. ಕಾರ್ಯಕಾರಿಣಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಕುಟ್ಟ ಕೊಡವ ಸಮಾಜದಲ್ಲಿ ತಾಲೂಕು ಬಿ.ಜೆ.ಪಿ. ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.

ಜನವಿರೋಧಿ ಯೋಜನೆಯನ್ನು ಸರಕಾರ ಕಾರ್ಯಗತಗೊಳಿಸಬಾರದು. ಕೊಂಗಣ ಹೊಳೆ ಯೋಜನೆಯಿಂದ ಸ್ಥಳೀಯ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದು. ಈ ನಿಟ್ಟಿನಲ್ಲಿ ಈ ಯೋಜನೆಯನ್ನು ಸರಕಾರ ಕೈಬಿಡಬೇಕು ಎಂದು ಈ ಸಂದÀರ್ಭ ಒತ್ತಾಯಿಸಿದರು. ಕೆಲವು ನಕಲಿ ಪರಿಸರವಾದಿಗಳು ಜಿಲ್ಲೆಯನ್ನು ಸೂಕ್ಷ್ಮ ಪರಿಸರ ತಾಣವೆಂದು ಘೋಷಿಸಬೇಕು ಎಂದು ಹೋರಾಟ ಮಾಡುತ್ತಿದ್ದಾರೆ. ಇದರಿಂದ ರೈತರಿಗೆ, ಬೆಳೆಗಾರರಿಗೆ ಸಮಸ್ಯೆಯಾಗುತ್ತದೆ. ಈ ಯೋಜನೆಯನ್ನು ಕೈಬಿಡಬೇಕು ಎಂದು ನಿರ್ಣಯ ಕೈಗೊಳ್ಳಲಾಯಿತು.

ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಕೊಂಗಣ ಹೊಳೆ ಯೋಜನೆಯನ್ನು ಜನ ವಿರೋಧಿಸುತ್ತಿದ್ದರೂ ಉಸ್ತುವಾರಿ ಸಚಿವರು ಈ ಬಗ್ಗೆ ಯಾವದೇ ಮಾಹಿತಿ ನೀಡದೆ ಜನರ ಭಾವನೆ ವಿರುದ್ಧವಾಗಿ ನಡೆಯುತ್ತಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್‍ನ ಸಿದ್ದರಾಮಯ್ಯ ಅವರ ಆಡಳಿತದಲ್ಲಿ ನೈತಿಕತೆ ಇಲ್ಲ. ಮುಖ್ಯಮಂತ್ರಿ ಸ್ಥಾನಕ್ಕೆ ಅಗೌರವ ತಂದಂತಹ ಏಕೈಕ ಮಂತ್ರಿ ಸಿದ್ದರಾಮಯ್ಯ. ಎಂದು ದೂಷಿಸಿದರು.

ಜಿಲ್ಲೆಯ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಕಾಂಗ್ರೆಸ್ ಸರಕಾರಕ್ಕೆ ಸಾಧ್ಯವಾಗಿಲ್ಲ. ಜಿಲ್ಲೆ ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುತ್ತಿದೆ. ಈ ನಡುವೆ ಕೊಂಗಣ ಹೊಳೆ ಯೋಜನೆಯಿಂದ ಬೇರೆ ಜಿಲ್ಲೆಗಳಿಗೆ ನೀರು ಹಾಯಿಸುವ ಚಿಂತನೆ ಸಲ್ಲ. ಬಿ.ಜೆ.ಪಿ ಆಡಳಿತವಿದ್ದಾಗ ಈ ಯೋಜನೆಯನ್ನು ವಿರೋಧಿಸಿ ತಡೆ ಹಿಡಿಯಲಾಗಿತ್ತು. ಈ ಯೋಜನೆಗೆ ಮತ್ತೆ ಚಾಲನೆ ನೀಡುತ್ತಿರುವ ಕಾಂಗ್ರೆಸ್ ಆಡಳಿತ ಜಿಲ್ಲೆಯನ್ನು ನಿರ್ಲಕ್ಷಿಸುತ್ತಿದೆ ಎಂದರು.

ಕುಡಿಯುವ ನೀರು, ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿ ಸಾಧ್ಯವಾಗಿಲ್ಲ. ಬಿ.ಜೆ.ಪಿ. ಸರಕಾರವಿದ್ದಾಗ ಕುಡಿಯುವ ನೀರಿನ ಯೋಜನೆಗೆ ಜಿಲ್ಲೆಗೆ 1 ಕೋಟಿ ಅನುದಾನ ನೀಡಿತ್ತು. ಆದರೆ ಕಾಂಗ್ರೆಸ್ ಸರಕಾರ ವಿಧಾನ ಸಭಾ ಕ್ಷೇತ್ರಕ್ಕಾಗಿ ಕೇವಲ 60 ಲಕ್ಷ ಅನುದಾನ ಬಿಡುಗಡೆ ಮಾಡಿದೆ.

ಜನಪರ ಯೋಜನೆ ರೂಪಿಸಿದ್ದೇವೆ, ಜನಪರ ಸರಕಾರ ಎಂದುಕೊಳ್ಳುವ ಕಾಂಗ್ರೆಸ್ ಬಡವರ ಬಗ್ಗೆ ಕಾಳಜಿ ಹೊಂದಿಲ್ಲ. ಅನ್ನಭಾಗ್ಯದ ಹೆಸರಿನಲ್ಲಿ ಬಡವರನ್ನು ಶೋಷಣೆ ಮಾಡುತ್ತಿದ್ದಾರೆ. ಬಿ.ಪಿ.ಎಲ್ ಪಡಿತರರಿಗೆ 30 ಕೆ.ಜಿ. ಅಕ್ಕಿ ನೀಡುತ್ತಿದ್ದರು. ಇದೀಗ 4 ಕೆ.ಜಿ.ಗೆ ಇಳಿಕೆಯಾಗಿದೆ. ಸಿದ್ದರಾಮಯ್ಯನ ಸಣ್ಣತನದಿಂದ ಈ ಯೋಜನೆ ವಿಫಲತೆ ಕಾಣುತ್ತಿದೆ. ಸಮೃದ್ದವಾಗಿ ಅಕ್ಕಿಬೆಳೆಯುವ ಛತ್ತೀಸ್‍ಘಡ ರಾಜ್ಯದಿಂದ ಅಕ್ಕಿ ಆಮದು ಮಾಡಿಕೊಳ್ಳಬಹುದಾಗಿತ್ತು. ಛತ್ತೀಸ್‍ಗಡ ಬಿ.ಜೆ.ಪಿ ಆಡಳಿತದಲ್ಲಿ ಇದೆ ಎಂಬ ಕಾರಣಕ್ಕೆ ಅಕ್ಕಿ ಆಮದು ಮಾಡಿಕೊಳ್ಳುವದನ್ನು ಕೈಬಿಟ್ಟಿದ್ದಾರೆ. ಇದರಿಂದ ಬಿ.ಪಿ.ಎಲ್ ಪಡಿತರರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಸರಕಾರ ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಚಿಂತಿಸದೆ ಅಶಾಂತಿ ವಾತಾವರಣ ಉಂಟು ಮಾಡುತ್ತಿದ್ದಾರೆ. ದಿಡ್ಡಳ್ಳಿಯ ನಿರಾಶ್ರಿತರಿಗೆ ನಂಬಿಕೆ ದ್ರೋಹ ಮಾಡುತ್ತಿರುವ ಸರಕಾರ, ಇವರಿಗೆ ವಸತಿ ನಿರ್ಮಾಣಕ್ಕೆ ಹಿಂದೇಟು ಹಾಕುತ್ತಿದೆ. ರಾಜ್ಯದ ಹಾಗೂ ಜಿಲ್ಲೆಯ ಜನರ ಹಿತದೃಷ್ಟಿಯಿಂದ ಮುಂದಿನ ಅವಧಿಯಲ್ಲಿ ಬಿ.ಜೆ.ಪಿ. ಸರಕಾರ ಆಡಳಿತ ನಡೆಸಲು ಕಾರ್ಯಕರ್ತರು ಮನಪೂರ್ವಕವಾಗಿ ಶ್ರಮಿಸಿ ಬಿ.ಜೆ.ಪಿ.ಗೆ ಗೆಲುವು ತಂದುಕೊಡ ಬೇಕಾಗಿದೆ. ಕುತಂತ್ರ ನಡೆಸುವ ಕಾಂಗ್ರೆಸ್‍ಗೆ ಹೆದರದೆ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಬೇಕು ಎಂದು ಹೇಳಿದರು.

ದಿಡ್ಡಳ್ಳಿ ನಿರಾಶ್ರಿತರಿಗೆ ರಕ್ಷಿತಾರಣ್ಯ ದಲ್ಲಿ ವಸತಿ ನಿರ್ಮಿಸದೆ ಬದಲಿ ವ್ಯವಸ್ಥೆ ಕಲ್ಪಿಸುವದಾಗಿ ನಂಬಿಸಿದ ಕಾಂಗ್ರೆಸ್ ಮಂತ್ರಿಗಳು ಇದೀಗ ಮಾತು ಬದಲಾಯಿಸಿದ್ದಾರೆ. ನಿರಾಶ್ರಿತರಿಗೆ ಆಶ್ರಯ ಕಲ್ಪಿಸಲು ಸರಕಾರ ಮುಂದಾಗಿಲ್ಲ. ಹೀಗಾಗಿ ಬಡವರ ಅಭಿವೃದ್ಧಿ ಚಿಂತನೆ ಆಂಜನೇಯಪ್ಪ ಅವರಿಗೆ ಇಲ್ಲ ಎಂದು ಆರೋಪಿಸಿದರು.

ಕೇಂದ್ರ ಸರಕಾರದ ಯೋಜನೆಯಡಿಯಲ್ಲಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆಗೊಳಿಸಿದ್ದಾರೆ. ಇದರ ಸದುಪಯೋಗಕ್ಕೆ ಗ್ರಾ.ಪಂ. ಕೈಜೋಡಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷ ಮನು ಮುತ್ತಪ್ಪ ಮಾತನಾಡಿ, ಕಾಂಗ್ರೆಸ್ ಆಡಳಿತದ 4 ವರ್ಷದಲ್ಲಿ ಜಿಲ್ಲೆಗೆ 200 ಕೋಟಿ ಅನುದಾನ ಘೋಷಣೆ ಮಾಡಿದೆ. ಆದರೆ 42 ಕೋಟಿ ಅನುದಾನವಷ್ಟೆ ಜಿಲ್ಲಾ ಖಜಾನೆಗೆ ಬಂದಿದೆ. ಕಾಂಗ್ರೆಸ್ ದರಿದ್ರ ಸರಕಾರ ಎಂದು ಹೇಳಿದರು. ಮುಂಬರುವ ಚುನಾವಣೆಯಲ್ಲಿ ಬಿ.ಜೆ.ಪಿ ಗೆಲುವಿಗೆ ಕಾರ್ಯಕರ್ತರು ಕೈಜೋಡಿಸಬೇಕು. ಬೂತ್‍ಮಟ್ಟದಲ್ಲಿ ಬಿ.ಜೆ.ಪಿ.ಯ ಅಭಿವೃದ್ದಿಯ ಬಗ್ಗೆ ತಿಳಿಸಬೇಕಾಗಿದೆ. 414 ದಿನಗಳಲ್ಲಿ ರಾಜ್ಯದಲ್ಲಿ ಬಿ.ಜೆ.ಪಿ ಆಡಳಿತ ಚುಕ್ಕಾಣಿ ಹಿಡಿಯಲಿದೆ. ಕಾಂಗ್ರೆಸ್ ಸರಕಾರದ ಭ್ರಷ್ಟ ಜನವಿರೋಧಿ ಆಡಳಿತ ಬಿ.ಜೆ.ಪಿ.ಗೆ ಗೆಲುವು ತಂದುಕೊಡಲಿದೆ ಎಂದು ಹೇಳಿದರು.

ರಾಜ್ಯ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ರೀನಾ ಪ್ರಕಾಶ್, ರಾಜ್ಯ ಯುವ ಮೋರ್ಚಾ ಖಜಾಂಚಿ ಶಶಾಂಕ್ ಭೀಮಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಂತಿ ಸತೀಶ್, ಜಿಲ್ಲಾ ವ್ಯಾಪಾರ ಪ್ರಕೋಷ್ಟ ಅಧ್ಯಕ್ಷ ಕಡೇಮಾಡ ಗಿರೀಶ್ ಗಣಪತಿ, ಕಾಫಿ ಪ್ರಕೋಷ್ಠ ಅಧ್ಯಕ್ಷ ಕುಪ್ಪುಡಿರ ಪೊನ್ನುಮುತ್ತಪ್ಪ, ಹಣಕಾಸು ಅಧ್ಯಕ್ಷ ಬೊಟ್ಟಂಗಡ ರಾಜು, ಮಹಿಳಾ ಮೋರ್ಚಾ ಅಧ್ಯಕ್ಷೆ ಸುಮಿ ಸುಬ್ಬಯ್ಯ, ತಾಲೂಕು ಯುವ ಮೋರ್ಚಾ ಅಧ್ಯಕ್ಷ ಅಜಿತ್ ಕರುಂಬಯ್ಯ, ತಾಲೂಕು ಪ್ರಧಾನ ಕಾರ್ಯದರ್ಶಿ ಲಾಲಾ ಭೀಮಯ್ಯ, ರೈತ ಮೋರ್ಚಾ ಅಧ್ಯಕ್ಷ ಕಂಜಿತಂಡ ಮಂದಣ್ಣ, ಎಸ್.ಟಿ. ಮೋರ್ಚಾ ಅಧ್ಯಕ್ಷ ಪರಮೇಶ್ವರ, ಎಸ್.ಸಿ. ಮೋರ್ಚಾ ಅಧ್ಯಕ್ಷ ಜಯಾ, ಅಲ್ಪ ಸಂಖ್ಯಾತ ಮೋರ್ಚಾ ಅಧ್ಯಕ್ಷ ರಾಜಾ ಚಂದ್ರಶೇಖರ್, ಒ.ಬಿ.ಸಿ ಅಧ್ಯಕ್ಷ ಸುಭಾಷ್, ತಾಲೂಕು ಪ್ರಧಾನ ಕಾರ್ಯದರ್ಶಿ ಸುವೀನ್ ಗಣಪತಿ, ಅಲ್ಪಸಂಖ್ಯಾತ ರಾಜ್ಯ ಸಮಿತಿ ಕಾರ್ಯದರ್ಶಿ ಜೋಕಿಂ, ಜಿ.ಪಂ. ಸದಸ್ಯರುಗಳಾದ ಸಿ.ಕೆ. ಬೋಪಣ್ಣ, ಅಚ್ಚಪಂಡ ಮಹೇಶ್, ಶಶಿ ಸುಬ್ರಮಣಿ, ತಾ.ಪಂ. ಅಧ್ಯಕ್ಷೆ ಸ್ಮಿತಾ ಪ್ರಕಾಶ್, ಉಪಾಧ್ಯಕ್ಷ ನೆಲ್ಲೀರ ಚಲನ್ ಕುಮಾರ್, ಜಿಲ್ಲಾ ಉಪಾಧ್ಯಕ್ಷ ರಘು ನಾಣಯ್ಯ, ತಾಲೂಕು ಉಪಾಧ್ಯಕ್ಷರುಗಳಾದ ಕಾವೇರಿ ಮಂದಣ್ಣ, ಮಚ್ಚಮಾಡ ಸುಮಂತ್, ಮನು ರಾಮಚಂದ್ರ, ಚೋಕಿರ ಕಲ್ಪನಾ ತಿಮ್ಮಯ್ಯ, ಗಣೇಶ್, ತಾಲೂಕು ಕಾರ್ಯದರ್ಶಿಗಳಾದ ವಾಟೇರಿರ ಬೋಪಣ್ಣ, ಮೇವಂಡ ಚಶ್ಮಾ, ಸೆಲ್ವಿ, ಭರತ್, ಅಜ್ಜಿಕುಟ್ಟಿರ ಪ್ರವೀಣ್, ಮಲಚೀರ ಕವಿತಾ, ತಾಲೂಕು ಖಜಾಂಚಿ ಚೋಡಮಾಡ ಶ್ಯಾಂ, ಜಿ.ಪಂ. ಮಾಜಿ ಅಧ್ಯಕ್ಷೆ ಚೋಡುಮಾಡ ಶರೀನ್ ಸುಬ್ಬಯ್ಯ, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಉಪಸ್ಥಿತರಿದ್ದರು. ಕುಟ್ಟ ಬಸ್ ನಿಲ್ದಾಣದಿಂದ ಕೊಡವ ಸಮಾಜದವರೆಗೆ ಕಾಂಗ್ರೆಸ್ ಸರಕಾರದ ವಿರುದ್ದ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ನಡೆಸಲಾಯಿತು.

ವರದಿ-ಎನ್.ಎನ್. ದಿನೇಶ್.