ಮಡಿಕೇರಿ, ಫೆ. 21: ಕೇಳುಗರ ಮನತಣಿಸುವ ಇಂಪಾದ ಸುಮಧುರ ಗೀತೆಗಳು... ಈ ಗೀತೆಗೆ ತಕ್ಕಂತಹ ನೃತ್ಯ ಪ್ರದರ್ಶನ... ಇದರೊಂದಿಗೆ ಕೊಡವ ಸಮುದಾಯದ ಕಲೆ ಮತ್ತು ಸಂಸ್ಕøತಿಯನ್ನು ಪ್ರತಿಬಿಂಬಿಸುವ ಹಾಡು, ನೃತ್ಯಗಳ ಸಮ್ಮಿಲನದೊಂದಿಗೆ ಈ ವಾರಾಂತ್ಯದ ರವಿವಾರ ಮಂಜಿನ ನಗರಿಯಲ್ಲಿ ಜನಮನ ರಂಜಿಸಲಿದೆ.ಕೊಡವ ಸಮುದಾಯದ ಕಲೆ ಮತ್ತು ಸಂಸ್ಕøತಿಯನ್ನು ಪ್ರತಿಬಿಂಬಿಸುವ ಮತ್ತು ಹಳೆಯ ಕನ್ನಡ ಚಿತ್ರಗೀತೆಗಳ ವಿಶೇಷತೆಯ ಮಧುರ ಮಧುರವೀ ಮಂಜುಳಗಾನ ಎಂಬ ಕಾರ್ಯಕ್ರಮ ಇದಾಗಿದೆ. ಪ್ರಸಾರ ಭಾರತಿ, ಬೆಂಗಳೂರು ದೂರದರ್ಶನ ಕೇಂದ್ರದ ಕಾರ್ಯಕ್ರಮ ಇದಾಗಿದ್ದು, ಈ ತನಕ ರಾಜ್ಯದ ವಿವಿಧೆಡೆ ನಡೆದಿದ್ದು, ದೂರದರ್ಶನದಲ್ಲಿ ಭಿತ್ತರಗೊಂಡಿದೆ. ಕೇಂದ್ರದ 86ನೆಯ ಕಾರ್ಯಕ್ರಮ ಇದಾಗಿದ್ದು, ಇದೇ ಪ್ರಪ್ರಥಮ ಬಾರಿಗೆ ಕೊಡಗು ಜಿಲ್ಲಾ ಕೇಂದ್ರವಾದ ಮಡಿಕೇರಿಯಲ್ಲಿ ನಡೆಯಲಿದೆ.
ದೂರದರ್ಶನ ಕೇಂದ್ರದೊಂದಿಗೆ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಮಡಿಕೇರಿ ಆಕಾಶವಾಣಿಯ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮ ಆಯೋಜನೆಗೊಂಡಿದೆ. ಭಾನುವಾರ ಸಂಜೆ 6 ಗಂಟೆಯಿಂದ ನಗರದ ಗಾಂಧಿ ಮೈದಾನದಲ್ಲಿ ಮಧುರ ಮಧುರ ಮಂಜುಳಗಾನ ಮೂಡಿ ಬರಲಿದೆ.
ಬೆಂಗಳೂರು, ಮೈಸೂರು, ಧಾರವಾಡ, ಚಿತ್ರದುರ್ಗ, ಶಿವಮೊಗ್ಗ, ತುಮಕೂರು, ಮಂಡ್ಯ, ದೊಡ್ಡಬಳ್ಳಾಪುರ, ಕುಂದಾಪುರ ಮತ್ತಿತರ ಕಡೆಗಳಲ್ಲಿ ಈ ಹಿಂದೆ ಕಾರ್ಯಕ್ರಮ ಆಯೋಜಿಸಲಾಗಿದೆ. ಕೆಲವೆಡೆ ಎರಡಕ್ಕೂ ಹೆಚ್ಚುಬಾರಿ ಕಾರ್ಯಕ್ರಮ ನಡೆದಿದೆ.
ದೂರದರ್ಶನ ಕೇಂದ್ರದಿಂದ ತಿಂಗಳಿಗೊಂದು ಈ ಕಾರ್ಯಕ್ರಮ ನಡೆಸಲಾಗುತ್ತಿದೆ. ಉತ್ತರ ಕರ್ನಾಟಕದಲ್ಲಿ ನಾಗರಪಂಚಮಿ ವಿಶೇಷವಾಗಿದ್ದು, ಧಾರವಾಡದಲ್ಲಿ ನಾಗರಪಂಚಮಿ ವಿಶೇಷವಾಗಿ, ಬಿಜಾಪುರದಲ್ಲಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಮಹಿಳಾ ವಿಶೇಷ ಮಧುರ, ಮಧುರ ಮಂಜುಳಗಾನ, ಮೈಸೂರಿನಲ್ಲಿ ಡಾ. ವಿಷ್ಣುವರ್ಧನ್ ವಿಶೇಷ, ಬೆಂಗಳೂರಿನಲ್ಲಿ ವರನಟ ಡಾ. ರಾಜ್ಕುಮಾರ್,
(ಮೊದಲ ಪುಟದಿಂದ) ಕಲ್ಯಾಣ್ ಕುಮಾರ್, ಹುಣಸೂರು ಕೃಷ್ಣಮೂರ್ತಿ, ರಾಜನ್ ನಾಗೇಂದ್ರ ಈ ರೀತಿಯಾಗಿ ಬಹುತೇಕ ನಟರು, ಕಲಾವಿದರ ವಿಶೇಷವಾಗಿಯೂ ಈ ಕಾರ್ಯಕ್ರಮ ಮೂಡಿಬಂದಿದೆ.
ಈ ಬಾರಿ ಕೊಡವ ಸಂಸ್ಕøತಿ ಮತ್ತು ಕಲೆಯ ವಿಶೇಷವಾಗಿ ಮಡಿಕೇರಿಯಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮದ ನಿರೂಪಕರಾದ ಸಾರ್ತವಳ್ಳಿ ನಾರಾಯಣಸ್ವಾಮಿ ‘ಶಕ್ತಿ’ಗೆ ಮಾಹಿತಿ ನೀಡಿದರು.
ಇತ್ತೀಚೆಗೆ ಆಡಿಷನ್ ಮುಗಿದಿದ್ದು, ಕಲಾವಿದರನ್ನು ಆಯ್ಕೆ ಮಾಡಲಾಗಿದೆ. ಹಳೆಯ ಕನ್ನಡ ಚಿತ್ರಗೀತೆಗಳಲ್ಲಿ ವಿಶೇಷವಾಗಿ ಕೊಡಗಿಗೆ ಸಂಬಂಧಪಟ್ಟ ಹಾಡುಗಳಿಗೆ ಅವಕಾಶ ನೀಡಲಾಗುತ್ತಿದೆ. ಶರಪಂಜರ, ಮುತ್ತಿನ ಹಾರದಂತಹ ಚಿತ್ರದ ಗೀತೆಗಳು, ಕೊಡಗಿಗೆ ಸಂಬಂಧಿಸಿದಂತೆ ಜೆ.ಪಿ. ರಾಜರತ್ನಂ, ಪಂಜೆÉಮಂಗೇಶರಾಯರ ವಿರಚಿತ ಭಾವ ಗೀತೆಗಳು ಜನರ ಮನತಣಿಸಲಿದೆ.
ಈ ಹಿಂದಿನ ಕಾರ್ಯಕ್ರಮಗಳಿಗಿಂತ ಮಡಿಕೇರಿಯ ಕಾರ್ಯಕ್ರಮ ವಿಶೇಷವೆನಿಸಲಿದೆ. ಈತನಕದ ಕಾರ್ಯಕ್ರಮದಲ್ಲಿ ಕೇವಲ ಕನ್ನಡ ಹಾಡು, ನೃತ್ಯಗಳಿಗೆ ಮಾತ್ರ ಅವಕಾಶವಿರುತ್ತಿತ್ತು. ಆದರೆ ಈ ಬಾರಿ ಕನ್ನಡ ಗೀತೆಗಳೊಂದಿಗೆ ಕೊಡವ ಹಾಡಿಗೂ ಅವಕಾಶವಿರುವದು ವಿಶೇಷವಾಗಿದೆ ಎಂದು ನಾರಾಯಣಸ್ವಾಮಿ ತಿಳಿಸಿದರು.
ಸುಮಾರು 25ಕ್ಕೂ ಅಧಿಕ ಕನ್ನಡ ಹಾಡು, 9 ಕೊಡವ ಹಾಡು, 9 ತಂಡಗಳಿಂದ ನೃತ್ಯದೊಂದಿಗೆ ಮಧುರ ಮಧುರ ಮಂಜುಳಗಾನ ಕಲಾಸಕ್ತರ ಗಮನ ಸೆಳೆಯಲಿದೆ.
ತಾ. 25 ರಂದು ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಅಂತಿಮ ಹಂತದ ರಿಹರ್ಸಲ್ ನಡೆಯಲಿದ್ದು, ತಾ. 26 ರಂದು ಸಂಜೆ 6ರ ನಂತರ ಕಾರ್ಯಕ್ರಮ ಆರಂಭಗೊಳ್ಳಲಿದೆ. ಕಾರ್ಯಕ್ರಮವನ್ನು ದೂರದರ್ಶನ ಕೇಂದ್ರದಿಂದ ಚಿತ್ರೀಕರಣ ಮಾಡಲಾಗುತ್ತಿದ್ದು, ನಂತರದ ದಿನಗಳಲ್ಲಿ ಪ್ರಸಾರವಾಗಲಿದೆ.