ಮಡಿಕೇರಿ, ಫೆ.20 :ಕೊಡಗು ಜಿಲ್ಲೆಯ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಸರಕಾರ ಬದ್ಧವಾಗಿದೆ ಎಂದು ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾಅಚ್ಚಯ್ಯ ತಿಳಿಸಿದ್ದಾರೆ.

ಹಾಕತ್ತೂರು ಗ್ರಾ.ಪಂ ವ್ಯಾಪ್ತಿಯ ಕಗ್ಗೋಡ್ಲು ಗ್ರಾಮದ ಹೂಕಾಡು ಪೈಸಾರಿಯ ಪರಿಶಿಷ್ಟ ಜಾತಿ ಮತ್ತು ಪಂಗಡದ ಕಾಲೋನಿಯಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಆದ್ಯತೆಯ ಮೇರೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವದೆಂದರು.

ಹೂಕಾಡು ಪೈಸಾರಿ ರಸ್ತೆ ಸುಮಾರು 4 ಲಕ್ಷ ರೂ.ಗಳಲ್ಲಿ ನಿರ್ಮಾಣಗೊಳ್ಳುತ್ತಿದ್ದು, ಕಗ್ಗೋಡ್ಲು ಶ್ರೀ ಭಗವತಿ ದೇವಾಲಯದ ರಸ್ತೆಗೆ 2 ಲಕ್ಷ ರೂ.ಗಳನ್ನು ವಿನಿಯೋಗಿಸ ಲಾಗುತ್ತಿದೆ. ಮುಂದಿನ ದಿನಗಳಲ್ಲಿ ವಿಧಾನ ಪರಿಷತ್ ಸದಸ್ಯರ ನಿಧಿಯಿಂದ ಮತ್ತಷ್ಟು ಅನುದಾಗ ಒದಗಿಸುವದಾಗಿ ವೀಣಾಅಚ್ಚಯ್ಯ ಭರವಸೆ ನೀಡಿದರು.

ನಂತರ ಶ್ರೀ ಭಗವತಿ ದೇವಾಲಯಕ್ಕೂ ತೆರಳಿದ ಅವರು ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಿದರು. ಗ್ರಾಮದ ಶ್ರೀ ಓಂಕಾರೇಶ್ವರ ದೇವಾಲಯದ ದೇವರಕಾಡು ಸಮೀಪದ ಗ್ರಾಮಸ್ಥರಿಗೆ ಅನುಕೂಲವಾಗುವಂತೆ ಸುಮಾರು 3 ಲಕ್ಷ ರೂ.ಗಳಲ್ಲಿ ನಿರ್ಮಾಣಗೊಳ್ಳುತ್ತಿ ರುವ ರಸ್ತೆ ಕಾಮಗಾರಿಗೂ ವೀಣಾ ಅಚ್ಚಯ್ಯ ಇದೇ ಸಂದರ್ಭ ಚಾಲನೆ ನೀಡಿದರು.

ಹಾಕತ್ತೂರು ಗ್ರಾ.ಪಂ. ಅಧ್ಯಕ್ಷರಾದ ಎಂ.ಆರ್. ಶಾರದ, ಮಾಜಿ ಅಧ್ಯಕ್ಷರಾದ ಎಂ.ಯು. ಹನೀಫ್, ಹಾಕತ್ತೂರು ಕಾಂಗ್ರೆಸ್ ಸ್ಥಾನೀಯ ಸಮಿತಿ ಅಧ್ಯಕ್ಷರಾದ ಕೆ.ಜಿ.ಶರೀನ್, ರಾಜೀವ್‍ಗಾಂಧಿ ಪಂಚಾಯತ್ ಸಂಘಟನೆಯ ಜಿಲ್ಲಾ ಸಂಯೋಜಕ ತೆನ್ನಿರ ಮೈನಾ, ಪ್ರಮುಖರಾದ ಮಂದ್ರೀರ ತಿಮ್ಮಯ್ಯ (ಚಿಮ್ಮಿ) ಗ್ರಾ.ಪಂ. ಸದಸ್ಯರಾದ ಪಿಯುಸಿ ಪೆರೆಯರ, ಹೇಮಾವತಿ, ಸ್ಥಳೀಯ ಕಾಂಗ್ರೆಸ್ ಪರಿಶಿಷ್ಟ ಜಾತಿ, ಪಂಗಡ ಘಟಕದ ಅಧ್ಯಕ್ಷ ಎಚ್.ಸಿ. ಪೊನ್ನಪ್ಪ, ಗ್ರಾಮದ ಪ್ರಮುಖರಾದ ದಂಬೆಕೋಡಿ ಸುಭಾಷ್, ಮಣವಟ್ಟಿರ ಕಾವೇರಪ್ಪ ಮತ್ತಿತರರು ಈ ಸಂದರ್ಭ ಹಾಜರಿದ್ದರು.