ಸೋಮವಾರಪೇಟೆ, ಫೆ. 21: ಪಟ್ಟಣದಲ್ಲಿ ವಾಣಿಜ್ಯ ಮಳಿಗೆಗಳ ಪರಭಾರೆ ದಂಧೆಯಿಂದ ಪಂಚಾ ಯಿತಿಗೆ ಲಕ್ಷಾಂತರ ರೂ. ನಷ್ಟವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ, ಪರಭಾರೆ ಮಾಡಿದÀವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.ಇಲ್ಲಿನ ಪಟ್ಟಣ ಪಂಚಾಯಿತಿಯ ಸಾಮಾನ್ಯ ಸಭೆ ಅಧ್ಯಕ್ಷೆ ಬಿ.ಎಸ್. ವಿಜಯಲಕ್ಷ್ಮಿ ಅಧ್ಯಕ್ಷತೆಯಲ್ಲಿ ನಡೆಯಿತು. ವಾಣಿಜ್ಯ ಮಳಿಗೆ ಹಾಗೂ ಅಂಗಡಿ ಮುಂಗಟ್ಟುಗಳ ಅಕ್ರಮ ಪರಭಾರೆ ಬಗ್ಗೆ ಸುಧೀರ್ಘ ಚರ್ಚೆ ನಡೆದು, ಕಾನೂನು ಕ್ರಮಕ್ಕೆ ಸರ್ವ ಸದಸ್ಯರು ಒಪ್ಪಿಗೆ ನೀಡಿದರು.
ಪಟ್ಟಣದಲ್ಲಿರುವ 116 ಅಂಗಡಿ ಮಳಿಗೆಗಳಲ್ಲಿ 46 ಅಂಗಡಿಗಳ ಪರಭಾರೆಯಾಗಿದೆ. ಪ್ರತಿಯೊಂದು ಮಾಹಿತಿ ಸಂಗ್ರಹಿಸಲಾಗಿದೆ. ಅಕ್ರಮವಾಗಿ ಪರಭಾರೆ ಮಾಡಿದವರ ಹೆಸರುಗಳು ಇದ್ದು, ಕೌನ್ಸಿಲ್ ಸಭೆಯಲ್ಲಿ ಮಂಡಿಸಲಾಗುವದು. ಕಾನೂನು ಕ್ರಮದ ಬಗ್ಗೆ ಸಭೆ ನಿರ್ಧಾರ ಕೈಗೊಳ್ಳಬೇಕು ಎಂದು ಮುಖ್ಯಾಧಿಕಾರಿ ನಾಚಪ್ಪ ಹಾಗೂ ಕಂದಾಯ ನಿರೀಕ್ಷಕ ರಾಮಚಂದ್ರ ಹೇಳಿದರು. ಪರಭಾರೆ ಮಾಡಿದ 25 ಮಂದಿ ಊರು ಬಿಟ್ಟಿದ್ದಾರೆ. ಅವರಿಗೆ ನೋಟೀಸ್ ಜಾರಿಗೊಳಿಸಿ ಅಂಗಡಿಗಳನ್ನು ಮುಟ್ಟುಗೋಲು ಹಾಕಿ, ಟೆಂಡರ್ ವಿತರಿಸುವಂತೆ ಸದಸ್ಯ ಕೆ.ಎ.ಆದಂ ಸಭೆಗೆ ತಿಳಿಸಿದರು. ಪರಭಾರೆ ಮಾಡಿ ದುಪ್ಪಟ್ಟು ಹಣ ಪಡೆದವರು, ಕಾನೂನಿ ನಿಂದ ಬಚಾವಾಗಲು ಅನೇಕ ತಂತ್ರಗಳನ್ನು ಮಾಡುತ್ತಾರೆ. ಪಂಚಾ ಯಿತಿಗೆ ಬರಬೇಕಾದ ಆದಾಯವನ್ನು ಯಾರೋ ತಿನ್ನುತ್ತಿದ್ದಾರೆ. ಅಧಿಕಾರಿ ಗಳು ತಕ್ಷಣ ಕ್ರಮಕೈಗೊಳ್ಳ ಬೇಕು ಎಂದು ಸದಸ್ಯರಾದ ಬಿ.ಎಂ.ಸುರೇಶ್, ವೆಂಕಟೇಶ್, ಈಶ್ವರ್ ಮತ್ತಿತರರು ಒತ್ತಾಯಿಸಿದರು. ಅಧಿಕಾರಿಗಳು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡು ಕ್ರಮ ಜರುಗಿಸಿ ಎಂದು ಅಧ್ಯಕ್ಷೆ ವಿಜಯಲಕ್ಷ್ಮೀ ಸೂಚಿಸಿದರು.
ಪಟ್ಟಣ ಪಂಚಾಯಿತಿ ವ್ಯಾಪ್ತಿ ಯಲ್ಲಿ ಪೌರ ಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯಡಿ ನಿವೇಶನ ನೀಡುವ ವಿಚಾರದಲ್ಲಿ ಎಲ್ಲ ಸದಸ್ಯರ ಅಭಿಪ್ರಾಯ ಪಡೆಯದೇ ಏಕಪಕ್ಷೀಯವಾಗಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ವಿಪಕ್ಷ ಸದಸ್ಯರು ಆರೋಪಿಸಿದರು.
ಪಂಚಾಯಿತಿ ವ್ಯಾಪ್ತಿಯಲ್ಲಿ 20x30ರ ಅಳತೆ ಮನೆ ನಿವೇಶನಕ್ಕೆ ದಾಖಲೆ ಮಾಡಿದ ಫಲಾನುಭವಿಗಳ ಆಯ್ಕೆ ಸರಿಯಾಗಿಲ್ಲ. ಸರ್ವಾನುಮತದ ಆಯ್ಕೆ ನಡೆದಿಲ್ಲ ಎಂದು ವಿಪಕ್ಷ ಸದಸ್ಯರಾದ ಕೆ.ಎ.ಆದಂ, ಶೀಲಾ ಡಿಸೋಜ ಮತ್ತು ಮೀನಾಕುಮಾರಿ ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ನಾಚಪ್ಪ ಸರಕಾರದ ಆದೇಶದ ಪ್ರಕಾರ ಮನೆ ಇಲ್ಲದ ಪೌರ ಕಾರ್ಮಿಕರ ಪಟ್ಟಿಯನ್ನು ಕಳುಹಿಸುವಂತೆ ಸೂಚಿಸಲಾಗಿತ್ತು. ಅದರಂತೆ ಮನೆಯಿಲ್ಲದ ಮೂವರ ಹೆಸರನ್ನು ಅಂತಿಮಗೊಳಿಸಲಾಗಿದೆ. ಇದರಲ್ಲಿ ಯಾವದೇ ತಾರತಮ್ಯ ಇಲ್ಲ ಎಂದು ಸಭೆಗೆ ತಿಳಿಸಿದರು.
ಪಟ್ಟಣದ ಪೆಟ್ರೋಲ್ ಬಂಕ್ ವೊಂದರಲ್ಲಿ ಅತಿ ಹೆಚ್ಚು ಶಬ್ದ ಬರುವ ಜನರೇಟರ್ ಉಪಯೋಗಿಸುತ್ತಿ ರುವದರಿಂದ ಶಬ್ದ ಮಾಲಿನ್ಯ ವಾಗುತ್ತಿದ್ದು, ಸಾರ್ವಜನಿಕರು ಪಂಚಾಯಿತಿ ವಿರುದ್ಧ ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ಬಿ.ಎಂ. ಸುರೇಶ್, ಶೀಲಾ ಡಿಸೋಜ, ವೆಂಕಟೇಶ್ ಹೇಳಿದರು. ಪಟ್ಟಣ ವ್ಯಾಪ್ತಿಯಲ್ಲಿ ಸಿಮೆಂಟ್ ಗೋದಾಮು ನಿರ್ಮಿಸುವ ಹಾಗಿಲ್ಲ. ಆದರೆ ಪಟ್ಟಣದ ಹೃದಯ ಭಾಗದಲ್ಲೇ ಹಲವಾರು ಹಾರ್ಡ್ವೇರ್ ಅಂಗಡಿ ಗಳ ಮಾಲೀಕರು ಸಿಮೆಂಟ್ ಗೋದಾಮುಗಳನ್ನು ನಿರ್ಮಿಸಿ ಕೊಂಡಿದ್ದು, ಇದರಿಂದ ವಾಯು ಮಾಲಿನ್ಯವಾಗುತ್ತಿದೆ. ಹಾರ್ಡ್ವೇರ್ ಮಾಲಿಕರು ಯಾರಿಗೂ ಹೆದರುತ್ತಿಲ್ಲ ಎಂದು ಬಹುತೇಕ ಸದಸ್ಯರು ಆರೋಪಿಸಿದರು. ಪಂಚಾಯಿತಿ ನಿಯಮವನ್ನು ಪಾಲಿಸದ ಮಾಲೀಕ ರಿಗೆ ನೋಟೀಸ್ ಜಾರಿಗೊಳಿಸಿ, ಅದಕ್ಕೆ ಉತ್ತರ ನೀಡದಿದ್ದರೆ, ಕಾನೂನು ಕ್ರಮ ಕೈಗೊಳ್ಳಿ ಎಂದು ಅಧ್ಯಕ್ಷರು ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣ ವ್ಯಾಪ್ತಿಯಲ್ಲಿ ಅಕ್ರಮವಾಗಿ ನೀರಿನ ಸಂಪರ್ಕವನ್ನು ಅನೇಕರು ಹೊಂದಿದ್ದು, ಇದರಿಂದ ಪಂಚಾಯಿತಿಗೆ ಆದಾಯ ಕಡಿಮೆಯಾಗುತ್ತಿದೆ. ಅಕ್ರಮ ನೀರಿನ ಸಂಪರ್ಕವನ್ನು ಸಕ್ರಮಗೊಳಿಸಿ ಕೊಳ್ಳಬೇಕು. ಇಲ್ಲದಿದ್ದರೆ ಪಂಚಾಯಿತಿ ಅಧಿಕಾರಿಗಳು ದೊಡ್ಡಮಟ್ಟದ ದಂಡ ವಿಧಿಸಬೇಕು ಎಂದು ಅಧ್ಯಕ್ಷರು ಅಧಿಕಾರಿಗಳಿಗೆ ಸೂಚಿಸಿದರು. ಸಕ್ರಮಗೊಳಿಸಲು ಒಂದು ತಿಂಗಳ ಅವಕಾಶ ನೀಡಲಾಗುವದು. ತಪ್ಪಿದ್ದಲ್ಲಿ 5ಸಾವಿರ ರೂ. ದಂಡ ವಿಧಿಸಿ, ಸಂಪರ್ಕ ಕಡಿತಗೊಳಿಸಲಾಗುವದು. ಈ ಬಗ್ಗೆ ಧ್ವನಿವರ್ಧಕದ ಮೂಲಕ ಪ್ರಚಾರ ಮಾಡಲಾಗುವದು. ನೀರಿನ ಕಂದಾಯವನ್ನು 20ರೂ. ಹೆಚ್ಚಿಸಲಾಗುವದು ಎಂದು ಮುಖ್ಯಾಧಿಕಾರಿ ಹೇಳಿದರು.
ಸರ್ಕಾರದ ಸೂಚನೆಗಳನ್ನು ಕೌನ್ಸಿಲ್ ಸಭೆಗೆ ತಂದು, ನಂತರ ಕ್ರಮಕೈಗೊಳ್ಳಬೇಕು ಎಂದು ಅಧ್ಯಕ್ಷರು ಸೂಚಿಸಿದರು. ಸಭೆಯಲ್ಲಿ ಚರ್ಚೆ ಮಾಡುವದು ಒಂದು, ನಂತರ ಪುಸ್ತಕದಲ್ಲಿ ಬರೆಯುವದು ಇನ್ನೊಂದು ಎಂದು ಸದಸ್ಯೆ ಶೀಲಾ ಡಿಸೋಜ, ಮೀನಾ ಕುಮಾರಿ ದೂರಿದರು. ಎಲ್ಲಾ ಸದಸ್ಯರಿಗೆ ಸಭಾ ನಡಾವಳಿಯ ಪ್ರತಿಯನ್ನು ನೀಡಬೇಕು ಎಂದರು.
ಕುಡಿಯುವ ನೀರು ಸರಬರಾಜಿಗೆ ಜನರೇಟರ್, ಮೋಟರ್ ಪಂಪ್ ಖರೀದಿ, ಬೀದಿ ದೀಪಗಳ ಖರೀದಿ ಬಗ್ಗೆ ಚರ್ಚೆ ನಡೆಯಿತು. ಪಟ್ಟಣ ಪಂಚಾಯಿತಿ ನಿಧಿಯಿಂದ 3% ಯೋಜನೆಯಡಿ ಶೇ. 75ಕ್ಕಿಂತ ಹೆಚ್ಚು ಅಂಗವಿಕಲತೆ ಇರುವ ವಿಕಲಚೇತನರ ಪೋಷಕರಿಗೆ ಪೋಷಣಾಭತ್ಯೆ ರೂಪದಲ್ಲಿ ಸಹಾಯಧನವನ್ನು ನೀಡುವಂತೆ ತೀರ್ಮಾನಿಸಲಾಯಿತು. ಸರಕಾರದ ಯಾವದೇ ಸುತ್ತೋಲೆ ಕಚೇರಿಗೆ ಬಂದರೂ ಅದನ್ನು ಕೌನ್ಸಿಲ್ ಸಭೆಗೆ ಮಂಡಿಸಬೇಕು ಎಂದು ಅಧ್ಯಕ್ಷೆ ಸೂಚಿಸಿದರು. ಕಕ್ಕೆಹೊಳೆ ಜಂಕ್ಷನ್ ಬಳಿ ಹಾಗೂ ನಗರದ ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ಬೃಹತ್ ಕಟ್ಟಡಗಳು ನಿರ್ಮಾಣವಾಗುತ್ತಿದ್ದು, ಪಟ್ಟಣ ಪಂಚಾಯಿತಿಯ ಅನುಮತಿ ಯನ್ನು ಪಡೆದಿಲ್ಲ ಎಂದು ಸದಸ್ಯರಾದ ಆದಂ, ಶೀಲಾ ಡಿಸೋಜ ಮತ್ತಿತರರು ಸಭೆಯ ಗಮನಕ್ಕೆ ತಂದರು. ತಕ್ಷಣವೇ ಕಾಮಗಾರಿಯನ್ನು ನಿಲ್ಲಿಸಲು ಸೂಚನೆ ನೀಡಬೇಕೆಂದು ಎಲ್ಲಾ ಸದಸ್ಯರು ಅಧ್ಯಕ್ಷರಿಗೆ ತಿಳಿಸಿದರು. ನಗರೋತ್ಥಾನ ಯೋಜನೆಯಡಿ ಪಟ್ಟಣದ ವ್ಯಾಪ್ತಿಗೆ ಒಳಪಡುವ ಎಲ್ಲಾ ವಾರ್ಡ್ಗಳ ಚರಂಡಿ ಕಾಮಗಾರಿ ನಡೆದಿಲ್ಲ. ಇದನ್ನು ಅಧ್ಯಕ್ಷರು ಪರಿಶೀಲಿಸ ಬೇಕೆಂದು ಸದಸ್ಯ ಉದಯಶಂಕರ್ ಮನವಿ ಮಾಡಿದರು. ಸಭೆಗೆ ಉಪಾಧ್ಯಕ್ಷ ರಮೇಶ್ ಶೆಟ್ಟಿ ಗೈರು ಹಾಜರಾಗಿದ್ದರು.