ಶನಿವಾರಸಂತೆ, ಫೆ. 21: ಶನಿವಾರಸಂತೆಯ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಇರುವ ಪಂಚಾಯಿತಿಗೆ ಸೇರಿದ ವಿವಾದಾಸ್ಪದ ವಾಣಿಜ್ಯ ಸಂಕೀರ್ಣ ಹಾಗೂ ಕಟ್ಟಡದ ಜಾಗವನ್ನು ಸರಕಾರದ ಸ್ವಾಧೀನಕ್ಕೆ ವಶಪಡಿಸಿಕೊಳ್ಳಲು ಮಡಿಕೇರಿ ಉಪವಿಭಾಗದ ಉಪವಿಭಾಗಾಧಿಕಾರಿ ಡಾ. ನಂಜುಂಡೇಗೌಡ ಹಾಗೂ ಉಪವಿಭಾಗೀಯ ದಂಡಾಧಿಕಾರಿಗಳು ಆದೇಶಿಸಿದ್ದು, ಮುಕ್ತ ನ್ಯಾಯಾಲಯದಲ್ಲಿ ಘೋಷಿಸಲಾಗಿದೆ.
ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿರುವ ವಾಣಿಜ್ಯ ಸಂಕೀರ್ಣ ಕಟ್ಟಡವನ್ನು ನಿರ್ಮಾಣ ಮಾಡಲು ಗುತ್ತಿಗೆದಾರ ಎಸ್.ಎನ್. ರಘು ಅವರಿಗೆ 12 ವರ್ಷಗಳ ಅವಧಿಗೆ ನೆಲ ಬಾಡಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಒಪ್ಪಂದದ ಪ್ರಕಾರ ಕಟ್ಟಡ ಉದ್ಘಾಟನೆಯಾಗಿ ಸುಮಾರು 13 ವರ್ಷ ಕಳೆದರೂ ಗ್ರಾಮ ಪಂಚಾಯಿತಿಗೆ ಕಟ್ಟಡ ಹಸ್ತಾಂತರಿಸಿರುವದಿಲ್ಲ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಅಧ್ಯಕ್ಷರು ರಾಜ್ಯ ಹೆದ್ದಾರಿ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಹೈಕೋರ್ಟ್ ಪ್ರಕರಣವನ್ನು ಮಡಿಕೇರಿಯ ಉಪವಿಭಾಗಾಧಿಕಾರಿ ಅವರ ನ್ಯಾಯಾಲಯದಲ್ಲಿ ಇತ್ಯರ್ಥಪಡಿಸಿ ಕೊಳ್ಳುವಂತೆ ಆದೇಶಿಸಿತ್ತು. ಉಪ ವಿಭಾಗಾಧಿಕಾರಿಯವರ ಆದೇಶದಂತೆ ಗ್ರಾ.ಪಂ.ಗೆ ವಾಣಿಜ್ಯ ಮಳಿಗೆಗಳನ್ನು ಹಸ್ತಾಂತರ ಮಾಡಿಸಿ ಕೊಡುವಂತೆ ಸೋಮವಾರಪೇಟೆ ತಹಶೀಲ್ದಾರ್ ಅವರಿಗೆ ಜ. 30 ರಂದು ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮನವಿ ಮಾಡಿ ಕೊಂಡಿದ್ದಾರೆ.