ಮಡಿಕೇರಿ, ಫೆ. 21: ಮಡಿಕೇರಿಯಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸ್ಥಾಪನೆಗೆ ಹಸಿರು ಪಟ್ಟಿಯಲ್ಲಿರುವ ನಗರದ ಸ್ಟಿವರ್ಟ್ ಹಿಲ್ ಪ್ರದೇಶದಲ್ಲಿ ಗಿರಿಕಂದರವಿರುವ ಜಾಗವನ್ನು ಕಾಯ್ದಿರಿಸಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ವಿಧಾನ ಪರಿಷತ್ ಮಾಜಿ ಸದಸ್ಯ ಯಂ.ಸಿ. ನಾಣಯ್ಯ ಅವರು ಇದನ್ನು ರದ್ದುಪಡಿಸಿ ಬದಲಿ ಜಾಗ ಕಲ್ಪಿಸಲು ಆಗ್ರಹಿಸಿದ್ದಾರೆ.ಈ ಕುರಿತು ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿಸೋಜ ಅವರಿಗೆ ಪತ್ರ ಬರೆದಿರುವ ಅವರು ಈ ಬಗ್ಗೆ ಒತ್ತಾಯಿಸಿದ್ದಾರೆ. ವಿವರ ಇಂತಿದೆಮಡಿಕೇರಿ ನಗರದ ವ್ಯಾಪ್ತಿಯೊಳಗಡೆ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸ್ಥಾಪನೆಗೆ ಸ್ಟೀವರ್ಟ್ ಹಿಲ್ ತೆರೆದ ಪ್ರದೇಶದಲ್ಲಿ ಮತ್ತು ಹಸಿರು ಪಟ್ಟಿಯ ಒಳಗಡೆ ಸೇರಿಸಲ್ಪಟ್ಟಿರುವ 471/1 ಪಿ 16ರ ಪೈಕಿ 4 ಎಕರೆ ಜಾಗವನ್ನು ಜಿಲ್ಲಾಧಿಕಾರಿಗಳ ಆದೇಶದ ಹಿನ್ನೆಲೆಯಲ್ಲಿ ಕಾಯ್ದಿರಿಸಲಾಗಿದೆಯೆಂದು ತಿಳಿದು ಬಂದಿದೆ. ಮಡಿಕೇರಿ ನಗರಸಭೆ ವ್ಯಾಪ್ತಿಯೊಳಗಡೆ ಇರುವ ಮತ್ತು ಅದಕ್ಕೆ ಹೊಂದಿಕೊಂಡಿರುವ ಎಲ್ಲಾ ಬೆಟ್ಟ- ಗುಡ್ಡ ಪ್ರದೇಶಗಳು ಮತ್ತು ಗಿರಿ - ಕಂದರಗಳು ಹಾಗೂ ಇತರ ಹಚ್ಚ - ಹಸಿರಿನ ಪ್ರೇಕ್ಷಣೀಯ

(ಮೊದಲ ಪುಟದಿಂದ) ಸ್ಥಳಗಳು ಮಡಿಕೇರಿ ನಗರದ ನಿಸರ್ಗ ಸೌಂದರ್ಯವನ್ನು ಕಾಯ್ದುಕೊಂಡು ಬಂದಿರುವ ಸ್ಥಳಗಳಾಗಿವೆ. ಇಂತಹ ಎಲ್ಲಾ ಪ್ರೇಕ್ಷಣೀಯ ಸ್ಥಳಗಳನ್ನು, ಗಿರಿ - ಕಂದರಗಳನ್ನು ಮತ್ತು ಗುಡ್ಡ - ಗಾಡು ಪ್ರದೇಶಗಳನ್ನು ಹಲವಾರು ವರ್ಷಗಳಿಂದ ಯಾವದೇ ಕಟ್ಟಡಗಳಿಗೆ ಅನುವು ಮಾಡಿಕೊಡಲಾಗದೆ ಕಾಯ್ದಿರಿಸಿಕೊಂಡು ಬಂದಿರುವ ಸ್ಥಳಗಳಾಗಿವೆ.

ಮಡಿಕೇರಿ ಅಭಿವೃದ್ಧಿ ಪ್ರಾಧಿಕಾರದ ಒಳಗಡೆ ಬರುವ ಪ್ರದೇಶಗಳನ್ನು ಸಮಗ್ರ ಅಭಿವೃದ್ಧಿ ಯೋಜನೆಯಡಿ ಅಧಿಕೃತವಾಗಿ ನಕಾಶೆಯನ್ನು ತಯಾರು ಮಾಡಿ ಸರ್ಕಾರದ ಅಧಿಕೃತ ಮಂಜೂರಾತಿಯನ್ನು ಪಡೆದು ಪರಿಸರವನ್ನು ಮತ್ತು ಮಡಿಕೇರಿ ನಗರದ ನಿಸರ್ಗ ಸೌಂದರ್ಯವನ್ನು ಕಾಪಾಡುವ ಹಿತದೃಷ್ಟಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಿದ ಹಚ್ಚ - ಹಸಿರಿನ ಪ್ರದೇಶ ಮತ್ತು ತೆರೆದ ಪ್ರದೇಶಗಳೆಂದು ಗುರುತಿಸಲಾಗಿದೆ. ಇಂತಹ ಪ್ರದೇಶಗಳಲ್ಲಿ ಸ್ಟೀವರ್ಟ್ ಹಿಲ್ ಪ್ರದೇಶದ ವ್ಯಾಪ್ತಿಯೊಳಗಡೆ ಬರುತ್ತಿರುವ 471/1 ಪಿ 16ರ ಸಂಪೂರ್ಣ ಪ್ರದೇಶವು ಈ ವ್ಯಾಪ್ತಿಯೊಳಗಡೆ ಬರುವ ಪ್ರದೇಶಗಳಾಗಿವೆ.

ಸ್ಟೀವರ್ಟ್ ಹಿಲ್ ಪ್ರದೇಶ ಎಂದು ನಾಮಕರಣ ಮಾಡಿರುವ ಮತ್ತು ಮಂಜೂರು ಮಾಡಿರುವ 4 ಎಕರೆ ಪ್ರದೇಶವು ಈ ಗಿರಿ - ಕಂದರದ ಒಳಗಡೆ ಬರುವ ಪ್ರದೇಶ ಆಗಿರುತ್ತದೆ ಮತ್ತು ಈ ಪ್ರದೇಶವು ಸಿಡಿಪಿ ವ್ಯಾಪ್ತಿಯೊಳಗಡೆ ಬರುವ ತೆರೆದ ಪ್ರದೇಶವೂ ಆಗಿರುತ್ತದೆ. (ಔಠಿeಟಿ sಠಿಚಿಛಿe ಚಿಟಿಜ ಉಡಿeeಟಿ beಟಣ) ಸ್ಟೀವರ್ಟ್ ಹಿಲ್ ಪ್ರದೇಶವು ಮಡಿಕೇರಿ ನಗರ ವ್ಯಾಪ್ತಿಯಲ್ಲಿರುವ ಅತ್ಯಂತ ಎತ್ತರದ ಗಿರಿಕಂದರವಾಗಿದೆ. ಬ್ರಿಟೀಷರ ಆಳ್ವಿಕೆಯ ಕಾಲದಲ್ಲಿ ಸ್ಟೀವರ್ಟ್ ಎಂಬ ಒಬ್ಬ ಬ್ರಿಟಿಷ್ ಕಮಿಷನರ್ ಆಡಳಿತದಲ್ಲಿ ಇದ್ದಾಗ ಈ ಪ್ರದೇಶದ ಎತ್ತರವನ್ನು 4,100 ಅಡಿ ಎಂದು ಗುರುತು ಮಾಡಿ ಈ ಪ್ರದೇಶಕ್ಕೆ ತನ್ನದೇ ಆದ ಹೆಸರನ್ನು ಹಾಕಿದ ಹಿನ್ನೆಲೆಯಲ್ಲಿ ಈ ಪ್ರದೇಶವನ್ನು ಸ್ಟೀವರ್ಟ್ ಹಿಲ್ ಎಂದು ಅಂದಿನಿಂದಲೇ ಗುರುತಿಸಲಾಗಿದೆ. ಮಡಿಕೇರಿ ನಗರದ ಒಳಗಿರುವ ಇಂತಹ ಎಲ್ಲಾ ನಿಸರ್ಗದ ಸಂಪತ್ತಾಗಿರುವ ಪ್ರದೇಶವನ್ನು ಮತ್ತು ಪ್ರೇಕ್ಷಣೀಯ ಸ್ಥಳಗಳನ್ನು ಇಂದಿನ ಮತ್ತು ಮುಂದಿನ ಪೀಳಿಗೆಗೆ ಯಾವದೇ ಕಾಂಕ್ರಿಟ್ ಕಟ್ಟಡಗಳ ಅತಿಕ್ರಮಣ ಆಗದ ಹಾಗೆ ರಕ್ಷಿಸಬೇಕಾಗಿರುವದು ಜಿಲ್ಲಾಡಳಿತದ ಮತ್ತು ಮಡಿಕೇರಿಯಲ್ಲಿ ಶಾಶ್ವತವಾಗಿ ವಾಸವಾಗಿರುವ ಎಲ್ಲಾ ನಾಗರಿಕರ ಆದ್ಯ ಕರ್ತವ್ಯ.

ಮಡಿಕೇರಿ ನಗರ ಇಂದು ಇಡೀ ರಾಷ್ಟ್ರದಲ್ಲಿ ಅತ್ಯಂತ ಪ್ರೇಕ್ಷಣೀಯ ಸ್ಥಳ ಎಂದು ಗುರುತಿಸಲ್ಪಟ್ಟಿರುವದು ಮತ್ತು ‘ಸ್ವಿಟ್ಜರ್‍ಲ್ಯಾಂಡ್ ಆಫ್ ಇಂಡಿಯಾ’ ಎಂದು ಭೌಗೋಳಿಕವಾಗಿ ಗುರುತಿಸಲ್ಪಟ್ಟಿರುವದು ಮಡಿಕೇರಿ ನಗರ ವ್ಯಾಪ್ತಿಯಲ್ಲಿರುವ ಇಂತಹ ಗಿರಿಕಂದರಗಳು ಮತ್ತು ಗುಡ್ಡಗಾಡು ಪ್ರದೇಶಗಳಿಂದಾಗಿಯೇ ಇಂತಹ ಪ್ರದೇಶದಲ್ಲಿ ಯಾವದೇ ಕಾಂಕ್ರಿಟ್ ಕಟ್ಟಡಗಳ ನಿರ್ಮಾಣಕ್ಕೆ ಅವಕಾಶ ಮಾಡುವದಾಗಲೀ ಅಥವಾ ಯಾವದೇ ಇಲಾಖೆಗಳಿಗೆ ಅಥವಾ ಕೇಂದ್ರಗಳಿಗೆ ಇಂತಹ ಪ್ರದೇಶಗಳ ಕೆಲವು ಭಾಗಗಳನ್ನು ಕಾಯ್ದಿರಿಸುವದು ಪ್ರಕೃತಿಯ ಮತ್ತು ನಿಸರ್ಗ ಮೇಲೆ ನಡೆಯುವ ದೌರ್ಜನ್ಯ ಮತ್ತು ಗಧಾಪ್ರಹಾರವೆಂದೇ ಭಾವಿಸಬೇಕಾಗುತ್ತದೆ. ನಗರದ ಒಳಗಡೆ ಇರುವ ಇಂತಹ ಎಲ್ಲಾ ಪ್ರದೇಶಗಳು ಇಂದಿಗೂ ಎಲ್ಲಾ ಸಮಸ್ತ ನಾಗರಿಕರಿಗೂ ಮತ್ತು ಹಿರಿಯ ನಾಗರಿಕರಿಗೂ, ಪ್ರವಾಸಿಗರಿಗೂ, ವಾಯು ವಿಹಾರಕ್ಕೆ ಚಾರಣ ಮಾಡುವ ಪ್ರದೇಶಗಳಾಗಿಯೇ ಉಳಿದಿದೆ.

ಮಡಿಕೇರಿ ನಗರದ ಪ್ರಕೃತಿ ಸೌದರ್ಯವನ್ನು ರಕ್ಷಿಸುವ ನಿಟ್ಟಿನಲ್ಲಿ ಈ ಹಿಂದೆ ಇಂತಹ ಅತಿಕ್ರಮಣಗಳು ಎಲ್ಲಿಯೇ ನಡೆದಾಗ ಅವುಗಳನ್ನು ತೆರವುಗೊಳಿಸಲು ಮತ್ತು ನಿಯಂತ್ರಿಸಲು ಜಿಲ್ಲಾಡಳಿತದ ಗಮನಕ್ಕೆ ತಾವು ಇಂತಹ ಪತ್ರಗಳನ್ನು ಬರೆಯುವದರ ಮೂಲಕ ಗಮನವನ್ನು ಸೆಳೆದಿದ್ದು, ಈ ಪತ್ರವು ಕೂಡ ಅದೇ ದೃಷ್ಟಿಕೋನದಿಂದ ಮಡಿಕೇರಿ ನಗರದ ಪ್ರಕೃತಿ ಸೌಂದರ್ಯವನ್ನು ಉಳಿಸುವ ದೃಷ್ಟಿಯಿಂದ ಬರೆದ ಪತ್ರವಾಗಿದೆ ಎಂದು ಅವರು ವಿವರಿಸಿದ್ದಾರೆ.