ಶ್ರೀಮಂಗಲ, ಫೆ. 21 : ಜಿಲ್ಲೆಯಲ್ಲಿ ಕೃಷಿ ಹಾಗೂ ಕಾಫಿ ತೋಟಕ್ಕೆ ಬೆಳೆಗಾರರು ನದಿ-ಕೆರೆ ನೀರನ್ನು ಅವಲಂಬಿಸಿದ್ದು, ಇದೀಗ ಈ ನೀರನ್ನು ಬಳಸದಂತೆ ಕೆಲವು ಅಧಿಕಾರಿಗಳು ಕಿರುಕುಳ ನೀಡುತ್ತಿದ್ದು, ಇದು ಜಿಲ್ಲೆಯ ಬೆಳೆಗಾರರ ಹಕ್ಕು ಹಾಗೂ ಹಿತರಕ್ಷಣೆಗೆ ಧಕ್ಕೆ ತರುವ ವಿಚಾರವಾಗಿದೆ. ಕೂಡಲೆ ಇಂತಹ ಪ್ರವೃತ್ತಿಯನ್ನು ನಿಲ್ಲಿಸದಿದ್ದರೆ ಜಿಲ್ಲೆಯಾದ್ಯಂತ ವಿವಿಧ ಸಂಘ ಸಂಸ್ಥೆಗಳನ್ನು ಸೇರಿಸಿಕೊಂಡು ಪ್ರತಿಭಟನೆ ನಡೆಸಲಾಗುತ್ತದೆ ಎಂದು ಜಿಲ್ಲಾ ಬೆಳೆಗಾರರ ಒಕ್ಕೂಟ ಎಚ್ಚರಿಸಿದೆ.ಶ್ರೀಮಂಗಲ ಗ್ರಾ.ಪಂ. ಸಭಾಂಗಣದಲ್ಲಿ ಒಕ್ಕೂಟದ ಅಧ್ಯಕ್ಷ ಅಜ್ಜಮಾಡ ಶಂಕರು ನಾಚಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಸುಧೀರ್ಘವಾಗಿ ಚರ್ಚಿಸಿ ನಿರ್ಣಯ ಕೈಗೊಳ್ಳಲಾಯಿತು. ಇದೀಗ ಕಾಫಿ ತೋಟಗಳಿಗೆ ಹಾಗೂ ಇತರ ಪರ್ಯಾಯ ಬೆಳೆಗಳಿಗೆ ನೀರು ಹಾಯಿಸುವ ಸಮಯವಾಗಿದೆ. ಯಾವದೇ ಬೆಳೆಗಾರರು ಈ ಬಗ್ಗೆ ಆತಂಕಗೊಳ್ಳದೆ ನೀರು ಬಳಸುವಂತೆ ಸಭೆಯಲ್ಲಿ ಕರೆ ನೀಡಲಾಯಿತು.

ಜಿಲ್ಲೆಯಲ್ಲಿ ಹುಟ್ಟಿ ಹರಿಯುವ ಕಾವೇರಿ, ಲಕ್ಷ್ಮಣ ತೀರ್ಥ ಹಾಗೂ ಇತರ ನದಿಗಳು ಮೈಸೂರಿನ ಕೆ.ಆರ್.ಎಸ್ ಅಣೆಕಟ್ಟಿನಲ್ಲಿ ಸಂಗ್ರಹವಾಗಿ ಆ ನೀರನ್ನು ಕಾಲುವೆ ಮೂಲಕ ಅಲ್ಲಿನ ಮಂಡ್ಯ, ಮೈಸೂರು, ಚಾಮರಾಜನಗರ ಸೇರಿದಂತೆ ಇತರ ಭಾಗಗಳಲ್ಲಿ ವಾರ್ಷಿಕ 2-3 ಬೆಳೆಗಳನ್ನು ತೆಗೆಯಲು ಬಳಸಿ ಕೊಳ್ಳಲಾಗುತ್ತಿದೆ. ಆದರೆ ಜಿಲ್ಲೆಯಲ್ಲಿ ವಾರ್ಷಿಕ ಏಕೈಕ ಫಸಲು ತರುವ ಕಾಫಿ, ಕರಿಮೆಣಸು ಬೆಳೆಗೆ ನೀರು ಬಳಸಲು ತಡೆಯೊಡ್ಡಿ ಕಿರುಕುಳ ನೀಡುತ್ತಿರುವದು ಖಂಡನಾರ್ಹ. ರಾಜ್ಯದಲ್ಲಿ ನದಿ ನೀರು ಬಳಸಿಕೊಳ್ಳಲು ಏಕರೂಪದ ಕಾನೂನು ಇದ್ದು, ಬೆಳೆಗಳಿಗೆ ನೀರು ಬಳಸಲು ತಡೆಯೊಡ್ಡಿದರೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಸರಕಾರದ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ

(ಮೊದಲ ಪುಟದಿಂದ) ನಡೆಸುವ ಎಚ್ಚರಿಕೆಯನ್ನು ಸಭೆ ನೀಡಿತು.

ಜಿಲ್ಲಾಡಳಿತ 2014- 15ನೇ ಸಾಲಿನ ಕಾಫಿ ಕರಿಮೆಣಸು ನಷ್ಟದ ಪರಿಹಾರ ನೀಡಿಲ್ಲ. ಕಳೆದ 2 ವರ್ಷದಿಂದ ಹವಮಾನ ವೈಪರೀತ್ಯ ಮತ್ತು ಬರಗಾಲಕ್ಕೆ ತುತ್ತಾದ ಬೆಳೆಗಳ ಸಮೀಕ್ಷೆ ನಡೆಸಿ ನಷ್ಟ ಪರಿಹಾರ ನೀಡಿಲ್ಲ. ಜಿಲ್ಲೆಯಲ್ಲಿ ಅವ್ಯಾಹತವಾಗಿ ನದಿಗಳಲ್ಲಿ ಅಕ್ರಮ ಮರಳು ದಂಧೆಯಿಂದ ನದಿಗಳು ಬತ್ತುತ್ತಿವೆ. ಹಾಗೆಯೇ ಅಕ್ರಮ ಮರಕಳ್ಳತನ ಹಾಗೂ ಹನನ ನಡೆಯುತ್ತಿದೆ. ಇದರ ಬಗ್ಗೆ ಜಿಲ್ಲಾಡಳಿತ ಕಟ್ಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಬದಲು ಈಗಾಗಲೇ ಬರಗಾಲ, ಹವಾಮಾನ ವೈಪರೀತ್ಯ, ಬೆಲೆ ಕುಸಿತ, ಫಸಲು ಕುಂಠಿತ, ಕಾರ್ಮಿಕರ ಅಭಾವ, ಬ್ಯಾಂಕ್‍ಗಳ ಸಾಲದ ಹೊರೆ ಇತ್ಯಾದಿ ಸಮಸ್ಯೆಗಳಿಂದ ಬಳಲುತ್ತಿರುವ ಬೆಳೆಗಾರರ ಮೇಲೆ ನೀರು ಬಳಸಲು ನಿರ್ಬಂಧಿಸುವ ಮೂಲಕ ಗಾಯದ ಮೇಲೆ ಬರೆ ಎಳೆಯಲು ಹೊರಟಿದೆ ಎಂದು ಆಕ್ರೋಶ ವ್ಯಕ್ತವಾಯಿತು. ಸಭೆಯಲ್ಲಿ ಒಕ್ಕೂಟದ ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ, ಸ್ಥಾಪಕ ಸದಸ್ಯ ಮಾಣೀರ ಮುತ್ತಪ್ಪ, ಸದಸ್ಯರುಗಳಾದ ಅಜ್ಜಮಾಡ ಚಂಗಪ್ಪ, ಅಯ್ಯಮಾಡ ಸೋಮೇಶ್, ಅಜ್ಜಮಾಡ ಬಾಲಕೃಷ್ಣ, ಮುರುಳಿ, ಅಜ್ಜಮಾಡ ಬೆಳ್ಯಪ್ಪ ಮತ್ತಿತರರು ಹಾಜರಿದ್ದರು.