ನಾಪೋಕ್ಲು, ಫೆ. 20: ಪ್ರತಿವರ್ಷ ಆಚರಿಸಿಕೊಂಡು ಬರುತ್ತಿರುವ ಪಾಡಿ ಶ್ರೀ ಇಗ್ಗುತಪ್ಪ ದೇವರ ವಾರ್ಷಿಕ ಉತ್ಸವ ಕುಂಬ್ಯಾರ್ ಕಲ್ಲಾಡ್ಚ ಹಬ್ಬ ಮಾರ್ಚ್ 12ರಂದು ಆದಿತ್ಯವಾರ ಜರುಗಲಿದೆ.
ತಾ. 26 ರಂದು ಆದಿತ್ಯವಾರ ಪೂರ್ವಾಹ್ನ ದೇವರ ಸನ್ನಿಧಿಯಲ್ಲಿ ದೇವತಕ್ಕರು, ನಾಡಿನ ಮುಖ್ಯಸ್ಥರು ಸೇರಿ ಪ್ರ್ರಾರ್ಥನೆ ಮತ್ತು ವಿಶೇಷ ಪೂಜೆ ನೆರವೇರಿಸಿದ ಬಳಿಕ ಸಾಂಪ್ರದಾಯಿಕ ದೇವರ ಕಟ್ಟನ್ನು ದೇವರ ಆದಿಸ್ಥಳ ಮಲ್ಮದಲ್ಲಿ ಅಪರಾಹ್ನ ಜಾರಿಗೊಳಿಸ ಲಾಗುವದು. ದೇವರ ಕಟ್ಟು ಹಬ್ಬ ನಡೆಯುವವರೆಗೆ ಜಾರಿಯಲ್ಲಿದ್ದು ನಾಲ್ಕುನಾಡು ವ್ಯಾಪ್ತಿಗೆ ಒಳಪಟ್ಟಿರುತ್ತದೆ.
ಸಂಪ್ರದಾಯದಂತೆ ದೇವರ ಕಟ್ಟು ಜಾರಿಯಲ್ಲಿರುವ ಅವಧಿಯಲ್ಲಿ ಬೇಟೆ, ಪ್ರಾಣಿ ಹಿಂಸೆ, ಮದುವೆ ಸಮಾರಂಭ ನಡೆಸದಂತೆ ಧಾರ್ಮಿಕ ನಿರ್ಬಂಧ ಜಾರಿಯಲ್ಲಿದ್ದು, ಈ ಅವಧಿಯಲ್ಲಿ ತುಲಾಭಾರ ಸೇವೆ, ಸಮಾರಾಧನೆ, ನಾಮಕರಣ ನಡೆಯುವದಿಲ್ಲ.
ಉತ್ಸವದಂದು ತುಲಾಭಾರ ಸೇವೆ ಮಾಡಿಸುವ ಭಕ್ತರು ದೇವಸ್ಥಾನದ ಪಾರುಪತ್ಯೆಗಾರರನ್ನು ಮೊದಲೇ ಸಂಪರ್ಕಿಸಬೇಕಾದ ದೇವಾಲಯದ ದೂರವಾಣಿ ಸಂಖ್ಯೆ 08272-238400, ನಂತರದ ದಿನಗಳಲ್ಲಿ ಬುಧವಾರ ಮತ್ತು ಶನಿವಾರ ಎಂದಿನಂತೆ ತುಲಾಭಾರ ಸೇವೆ ನಡೆಯಲಿದೆ ಎಂದು ದೇವತಕ್ಕರಾದ ಪರದಂಡ ಕಾವೇರಪ್ಪ ತಿಳಿಸಿದ್ದಾರೆ.