ಶನಿವಾರಸಂತೆ, ಫೆ. 20: ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ವತಿಯಿಂದ ಜಿಲ್ಲಾ ಕೈಗಾರಿಕಾ ವಿಚಾರ ಸಂಕಿರಣ ಕಾರ್ಯಕ್ರಮ ಶನಿವಾರಸಂತೆ ಸಮುದಾಯ ಭವನದಲ್ಲಿ ನಡೆಯಿತು. ಜಿ.ಪಂ. ಸದಸ್ಯೆ ಸರೋಜಮ್ಮ ಉದ್ಘಾಟಿಸಿ ದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕ ಶಬೀರ್ ಪಾಷಾ ಮಾತನಾಡಿ, ಬ್ಯಾಂಕ್‍ನಿಂದ ಸಾಲ ಪಡೆದು ಅಥವಾ ಸ್ವಂತ ಬಂಡವಾಳ ತೊಡಗಿಸಿ ಕೈಗಾರಿಕೆ ಗಳನ್ನು ಸ್ಥಾಪಿಸಿದರೆ ದೇಶದಲ್ಲಿ ಇರುವ ಬಡತನ ಹಾಗೂ ನಿರುದ್ಯೋಗ ಸಮಸ್ಯೆ ನಿವಾರಣೆ ಯಾಗಿ ಅಭಿವೃದ್ಧಿ ಸಾಧಿಸಬಹುದು. ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳ ಸ್ಥಾಪನೆಗೆ ಸರಕಾರ ಧ್ಯೇಯೋದ್ದೇಶಗಳನ್ನು ಹೊಂದಿರುತ್ತದೆ. ಹೆಚ್ಚು ಉದ್ಯೋಗ ನೀಡುವ ಯೋಜನೆಗಳಿಗೆ ಆದ್ಯತೆ ನೀಡಲಾಗುವದು ಎಂದು ತಿಳಿಸಿದರು.

ತಾಲೂಕು ಪಂಚಾಯಿತಿ ಸದಸ್ಯ ಬಿ.ಎಸ್. ಅನಂತಕುಮಾರ್ ಮಾತನಾಡಿ, ಕೈಗಾರಿಕಾ ತರಬೇತಿ ಪಡೆಯುವವರಿಗೆ ಮೂಲ ಸೌಕರ್ಯಗಳ ಬಗ್ಗೆ ಹಾಗೂ ಬ್ಯಾಂಕ್‍ನಿಂದ ಸಿಗುವ ಸಾಲ ಸೌಲಭ್ಯ ಗಳ ಬಗ್ಗೆ ಮಾಹಿತಿ ನೀಡಬೇಕು ಎಂದರು. ಕೈಗಾರಿಕಾ ಕೇಂದ್ರದ ಸಂಪನ್ಮೂಲ ವ್ಯಕ್ತಿಗಳಾದ ಕಾರ್ಯಪ್ಪ ಹಾಗೂ ಪುಟ್ಟರಾಜ್ ಮಾತನಾಡಿ ದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶನಿವಾರಸಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಗೌಸ್ ಮಾತನಾಡಿ, ಜೀವನದಲ್ಲಿ ಬದಲಾವಣೆ ಬಯಸುವ ನಿರುದ್ಯೋಗಿಗಳಿಗೆ ಜಿಲ್ಲಾ ಕೈಗಾರಿಕಾ ಕೇಂದ್ರ ಉತ್ತಮ ಮಾರ್ಗದರ್ಶನ ನೀಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕೈಗಾರಿಕಾ ಕೇಂದ್ರದ ಸಿಬ್ಬಂದಿಗಳಾದ ರಜಿನಿ, ಸವಿತಾ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕುಶಾಲಪ್ಪ ಇತರರು ಉಪಸ್ಥಿತರಿದ್ದರು.