ಮಡಿಕೇರಿ, ಫೆ.21 : ನಗರೀಕರಣ, ಅಭಿವೃದ್ಧಿ ಕಾರ್ಯಗಳು, ಪ್ರವಾಸೋದ್ಯಮ ಮತ್ತು ಕೇರಳದಿಂದ ಬಂದು ನೆಲೆಸಿರುವವರು ಕೊಡಗಿನ ಪರಿಸರ ನಾಶಕ್ಕೆ ಕಾರಣವೆಂದು ಕೊಡಗು ವನ್ಯಜೀವಿ ಸಂಘದ ಅಧ್ಯಕ್ಷರಾದ ಕರ್ನಲ್ ಸಿ. ಪಿ. ಮುತ್ತಣ್ಣ ಅವರು ಮಾಡಿರುವ ಆರೋಪಕ್ಕೆ ಸಣ್ಣ ಬೆಳೆಗಾರರ ಸಂಘದ ಪ್ರಮುಖ ಚೇರಂಡ ನಂದಾ ಸುಬ್ಬಯ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೊಡಗಿನ ಜನತೆ ನಿವೃತ್ತ ಯೋಧರಿಂದ ವಿಶಾಲ ರಾಷ್ಟ್ರೀಯ ದೃಷ್ಟಿಕೋನವನ್ನು ಬಯಸುತ್ತಾರೆಯೆ ಹೊರತು ಸಂಕುಚಿತ ಮನೋಸ್ಥಿತಿಯನ್ನಲ್ಲ ಎಂದು ತಿರುಗೇಟು ನೀಡಿದರು. ವನ್ಯ ಜೀವಿ ಸಂಘಕ್ಕೆ ಜಿಲ್ಲೆಯ ಜನತೆಯ ಆಶೋತ್ತರಗಳ ಬಗ್ಗೆ ನೈಜ ಕಾಳಜಿ ಇದ್ದಲ್ಲಿ ತಮ್ಮ ಧೋರಣೆಯನ್ನು ಬದಲಿಸಿಕೊಂಡು ವಿಶಾಲ ರಾಷ್ಟ್ರೀಯ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕೆಂದರು.
ಜಿಲ್ಲೆಯ ಜನರ ಬದುಕಿಗೆ ವಿರುದ್ಧವಾದ ದ್ವಂದ್ವ ನಿಲುವುಗಳನ್ನು ತಳೆಯುತ್ತಿರುವ ಸಂಘದ ನಿರ್ಧಾರಗಳನ್ನು ವಿರೋಧಿಸುವದಾಗಿ ತಿಳಿಸಿದರು.
ರಾಷ್ಟ್ರದ ರಕ್ಷಣಾ ಪಡೆಗಳ ಬಗ್ಗೆ ಮತ್ತು ಅದರಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರ ಬಗ್ಗೆ ತಮಗೆ ಅಪಾರ ಗೌರವವಿದೆ.
(ಮೊದಲ ಪುಟದಿಂದ) ಈ ಪೈಕಿ ಜನ ವಿರೋಧಿ ಧೋರಣೆಯನ್ನು ಅನುಸರಿಸುವ ಕೆಲವರಿದ್ದಾರೆ. ಕೊಡಗು ವನ್ಯಜೀವಿ ಸಂಘದಲ್ಲಿಯೂ ಈ ರೀತಿಯ ವ್ಯಕ್ತಿಗಳನ್ನು ಕಾಣಬಹುದಾಗಿದೆ ಎಂದು ನಂದಾ ಸುಬ್ಬಯ್ಯ ಆರೋಪಿಸಿದರು.
ನಗರೀಕರಣದ ಬಗ್ಗೆ ಮಾತನಾಡುವ ವನ್ಯಜೀವಿ ಸಂಘÀದ ಕೆಲವು ಪ್ರಮುಖರೇ ತಮ್ಮ ಜಾಗವನ್ನು ಹಾಗೂ ಮರಗಳನ್ನು ವಾಣಿಜ್ಯ ಮತ್ತು ವಸತಿ ಉದ್ದೇಶಕ್ಕಾಗಿ ಮಾರಾಟ ಮಾಡಿದ್ದಾರೆ. ಇಂತಹ ಧ್ವಂದ್ವಗಳನ್ನು ಹೊಂದಿರುವ ಸಂಘದ ಪ್ರಮುಖರಿಗೆ ಪರಿಸರದ ಬಗ್ಗೆ ನೈಜ ಕಾಳಜಿಯ ಮನಸ್ಸನ್ನು ಮಾತೆ ಕಾವೇರಿ ನೀಡಲಿ ಎಂದರು.
ಪಶ್ಚಿಮ ಘಟ್ಟ ಪ್ರದೇಶಗಳ ಸಂರಕ್ಷಣೆÉಗೆ ಸಂಬಂಧಿಸಿದಂತೆ ಮಾಧವ ಗಾಡ್ಗೀಲ್ ಅವರು ಕೊಡಗಿಗೆ ಭೇಟಿ ನೀಡದೆ ವರದಿಯನ್ನು ನೀಡಿದ್ದಾರೆ. ಇದಕ್ಕೆ ಪೂರಕವಾಗಿ ಡಾ|ಕಸ್ತೂರಿ ರಂಗನ್ ಅವರ ವರದಿಯಲ್ಲೂ ಜಿಲ್ಲೆಯ ಹಲವು ಗ್ರಾಮಗಳನ್ನು ಸೂಕ್ಷ್ಮ ಪರಿಸರ ವಲಯವನ್ನಾಗಿ ಸೂಚಿಸಲಾಗಿದೆ. ಈ ರೀತಿ ಸೂಕ್ಷ್ಮ ಪರಿಸರ ವಲಯ ಘೋಷಣೆಯಾದಲ್ಲಿ ಜಿಲ್ಲೆಯ ಕಾಫಿ, ಭತ್ತದ ಕೃಷಿಗೆ ಮಾರಕವಾಗಿ ಪರಿಣಮಿಸಿ, ಜನರ ಬದುಕು ದುಸ್ತರವಾಗಲಿದೆ ಎಂದು ನಂದಾಸುಬ್ಬಯ್ಯ ಆತಂಕ ವ್ಯಕ್ತಪಡಿಸಿದರು. ಪರಿಸರವಾದಿಗಳೆಂದು ಕರೆಸಿಕೊಳ್ಳುತ್ತಿರುವ ವನ್ಯಜೀವಿ ಸಂಘದ ಪದಾಧಿಕಾರಿಗಳು ಇನ್ನೊಬ್ಬರತ್ತ ಬೊಟ್ಟು ಮಾಡಿ ತೋರಿಸುವದನ್ನು ಬಿಡಬೇಕು. ಜಿಲ್ಲೆಯ ಮತ್ತು ಇಲ್ಲಿನ ಜನತೆಯ ಆಶೋತ್ತರಗಳ ಬಗ್ಗೆ ನೈಜ ಕಾಳಜಿ ಇದ್ದಲ್ಲಿ ಸಂಕುಚಿತ ಮನೋಭಾವನೆಯನ್ನು ತೊರೆದು ವಿಶಾಲ ರಾಷ್ಟ್ರೀಯ ದೃಷ್ಟಿಕೋನ ಬೆಳೆಸಿಕೊಂಡು ಜಿಲ್ಲೆಯ ಅಭಿವೃದ್ಧಿಗೆ ಪ್ರಯತ್ನಿಸಲಿ ಎಂದು ಸಲಹೆ ನೀಡಿದರು.
ಪರಿಸರ ಸ್ನೇಹಿ ಸಂಪರ್ಕವೆಂದು ಜಾಗತಿಕ ಮನ್ನಣೆಯನ್ನು ರೈಲ್ವೇ ವ್ಯವಸ್ಥೆ ಹೊಂದಿದ್ದು, ಈ ವಿಚಾರವನ್ನು ಕಸ್ತೂರಿ ರಂಗನ್ ವರದಿ ಕೂಡ ತಿಳಿಸಿದೆ. ಜಿಲ್ಲೆಯ ಕುಶಾಲನಗರದವರೆಗೆ ರೈಲ್ವೇ ಸಂಪರ್ಕ ಬಂದಲ್ಲಿ ಜಿಲ್ಲೆಯ ಕಾಫಿ ಉದ್ಯಮಕ್ಕೆ ಪೂರಕವಾಗಲಿದೆ. ಇದಕ್ಕೆ ಬದಲಾಗಿ ಮನೆಮನೆಗೆ ಮೂರು ನಾಲ್ಕು ವಾಹನಗಳನ್ನಿಟ್ಟುಕೊಂಡು ರೈಲ್ವೇ ಸಂಪರ್ಕ, ರಸ್ತೆ ಅಭಿವೃದ್ಧಿ ಬೇಡ ಎನ್ನುವದು ವಿಪರ್ಯಾಸವೆಂದು ಚೇರಂಡ ನಂದಾ ಸುಬ್ಬಯ್ಯ ಅಭಿಪ್ರಾಯಪಟ್ಟರು.