ಮಡಿಕೇರಿ, ಫೆ. 22: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವಿರುದ್ಧ ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಕುಡಿಯರ ಮುತ್ತಪ್ಪ ಮಾಡಿರುವ ಆರೋಪಕ್ಕೆ ಅಕಾಡೆಮಿ ರಿಜಿಸ್ಟ್ರಾರ್ ಉಮರಬ್ಬ ಸ್ಪಷ್ಟೀಕರಣ ನೀಡಿದ್ದಾರೆ.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ 2015-16/2016-17ನೇ ಸಾಲಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸೂಕ್ತ ಮಾರ್ಗದರ್ಶನ ಹಾಗೂ ಸ್ಪಷ್ಟ ನಿರ್ದೇಶನದೊಂದಿಗೆ ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಬಂದಿದ್ದು, ಇಲಾಖೆ ಗೌರವಕ್ಕೆ ಪಾತ್ರವಾಗಿದೆ.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಕಾರ್ಯಕ್ರಮವನ್ನು ಕ್ರಿಯಾಯೋಜನೆಯ ಅನುಮೋದನೆಯಂತೆ ನಡೆಸಿಕೊಂಡು ಬರುವ ಸಂದರ್ಭದಲ್ಲಿ ಪ್ರಾಯೋಜನೆ, ಪ್ರಾಯೋಜಕತ್ವ ಇನ್ನಿತರ ಯಾವದೇ ಮನವಿ ಬಂದಾಗ ಅದನ್ನು ಸ್ಥಾಯಿ ಸಮಿತಿ, ಸರ್ವ ಸದಸ್ಯರ ಸಭೆಯಲ್ಲಿ ಚರ್ಚಿಸಿ ಅನುಷ್ಠಾನಗೊಳಿಸುತ್ತಿದೆ.

ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡಕ್ಕೆ 2013-14ನೇ ಸಾಲಿನಲ್ಲಿ ಬಂದ ವಿಶೇಷ ಅನುದಾನವನ್ನು 3 ಜನರ ಸಾಕ್ಷ್ಯಚಿತ್ರವನ್ನು ತೆಗೆಯುವದರೊಂದಿಗೆ ಅದನ್ನು ಅನುಷ್ಠಾನಗೊಳಿಸಿದೆ ಹಾಗೂ ಅಕಾಡೆಮಿ ವತಿಯಿಂದ ಪರಿಶಿಷ್ಟ ಜಾತಿಗೆ ಒಳಪಟ್ಟ ಬೇರೆ ಬೇರೆ ಭಾಷಿಗರಿಗೆ ಮುಖ್ಯ ಪರಿಕರಗಳನ್ನು ನೀಡಲಾಗಿದೆ.

ಕಾರ್ಯಕ್ರಮ ನಡೆಸುವ ಸಂದರ್ಭದಲ್ಲಿ ಪ್ರತಿಯೊಂದು ಕಾರ್ಯಕ್ರಮಕ್ಕೆ ಅಕಾಡೆಮಿಯ ಬೇರೆ ಬೇರೆ ಸದಸ್ಯರನ್ನು ಸದಸ್ಯ ಸಂಚಾಲಕರನ್ನಾಗಿ ನೇಮಿಸಿ ಕಾರ್ಯಕ್ರಮದ ಉಸ್ತುವಾರಿಯನ್ನು ವಹಿಸಲಾಗುತ್ತಿದೆ. ಜಿಲ್ಲೆಯ ವಿವಿಧೆಡೆ ನಡೆದ ಕಾರ್ಯಕ್ರಮದಲ್ಲಿ ಕುಡಿಯರ ಬೋಪಯ್ಯ ಸದಸ್ಯ ಸಂಚಾಲಕರಾಗಿ ಕಾರ್ಯ ನಿರ್ವಹಿಸುವದರೊಂದಿಗೆ ಕೊಡವ ಭಾಷೆಯನ್ನಾಡುವ ಭಾಷಿಗರ ಸಂಸ್ಕೃತಿಯನ್ನು ಅಭಿವೃದ್ಧಿಪಡಿಸುವಲ್ಲಿ ಯಶಸ್ವಿ ಸೇವೆಗೈದಿದ್ದಾರೆ. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಇತರ ಭಾಷೆಯನ್ನಾಡುವ ಎಲ್ಲಾ ಸಮುದಾಯವನ್ನು ಪರಿಗಣಿಸಿ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆ ಪ್ರಗತಿ, ಮಾರ್ಗದರ್ಶನಕ್ಕೆ ಸೂಕ್ತ ಕ್ರಮಕೈಗೊಂಡಿದೆ.

ಕಳೆದ 2 ವರ್ಷಗಳಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ವಾರ್ಷಿಕ ರೂ.60 ಲಕ್ಷ ಅನುದಾನವನ್ನು ನೀಡುತ್ತಿದೆ. ಅಕಾಡೆಮಿಯ ಯಾವದೇ ಕಾರ್ಯಕ್ರಮವನ್ನು ಆಯೋಜಿಸುವ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಹಾಗೂ ಸರ್ವ ಸದಸ್ಯರ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ. ಅಕಾಡೆಮಿಗೆ ಬಂದ ಪ್ರತಿಯೊಂದು ಪತ್ರಕ್ಕೆ ಸರಿಯಾದ ಸಮಜಾಯಿಸಿಕೆಯನ್ನು ಕೊಡುವದು ಅಕಾಡೆಮಿಯ ಸಂಸ್ಕೃತಿಯಾಗಿದೆ.

ಅಕಾಡೆಮಿಯ ಕ್ರಿಯಾಯೋಜನೆಯು ಸರಕಾರದಿಂದ ಅನುಮೋದನೆಗೊಂಡಿದ್ದು, ಅದರಲ್ಲಿ ಯಾವ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂಬದನ್ನು ಸ್ಪಷ್ಟಪಡಿಸುತ್ತಿದ್ದು, ಕೊಡವ ಸಾಹಿತ್ಯ ಅಕಾಡೆಮಿಯ ಪ್ರಸಕ್ತ ಸಾಲಿನ ಅಧ್ಯಕ್ಷರು ಹಾಗೂ ಸದಸ್ಯರು ಕ್ರಿಯಾತ್ಮಕವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರಿಂದ ರಾಜ್ಯ ಹಾಗೂ ಅಂತರಾಜ್ಯ, ಗಡಿನಾಡು ಪ್ರದೇಶದಲ್ಲಿ ಕಾರ್ಯಕ್ರಮ ನಡೆಸಲು ಸಾಧ್ಯವಾಗಿದೆ ಎಂದು ರಿಜಿಸ್ಟ್ರಾರ್ ಉಮರಬ್ಬ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.